ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್‌ ಕೃಷಿ ಮಾದರಿ ಯೋಗ್ಯ!

By Kannadaprabha News  |  First Published Jan 20, 2020, 7:52 AM IST

ಕೃಷಿ ವಿವಿಯಲ್ಲಿ ರೈತರ ಗಮನ ಸೆಳೆಯುತ್ತಿದೆ ಈ ಕೃಷಿ ಮಾದರಿ| ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಯಶಸ್ವಿ ಕೃಷಿ| ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ| ಮೇಳಕ್ಕೆ ಇಂದು ತೆರೆ|


ಬಸವರಾಜ ಹಿರೇಮಠ

ಧಾರವಾಡ(ಜ.20): ಹತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಐದಾರು ವರ್ಷಗಳ ಕಾಲ ಬರಗಾಲ ಎದುರಿಸಿ ರೈತರು ಕೃಷಿಯಲ್ಲಿ ಸೋತು ಸುಣ್ಣವಾಗಿದ್ದಾರೆ. ಕೃಷಿಯಿಂದ ವಿಮುಖರಾಗುತ್ತಿರುವ ರೈತ ಸಮುದಾಯಕ್ಕೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಮರು ಜೀವ ಕೊಡುವ ಉದ್ದೇಶದಿಂದ ಈ ಬಾರಿ ಇಸ್ರೇಲ್‌ ಕೃಷಿ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತಿಸಿದೆ.

Tap to resize

Latest Videos

ಇದಕ್ಕೆ ಪೂರಕವಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಈ ಬಾರಿ ಇಸ್ರೇಲ್‌ ಕೃಷಿ ಮಾದರಿಯೇ ವಿಶೇಷವಾಗಿ ಬಿಂಬಿಸಲಾಗಿದೆ. ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಈ ಮಾದರಿಯನ್ನು ತಾತ್ಕಾಲಿಕವಾಗಿ ಸೃಷ್ಟಿಸಲಾಗಿದ್ದು ಇಡೀ ರೈತರ ಗಮನ ಸೆಳೆಯುತ್ತಿದೆ. ಇಸ್ರೇಲ್‌ ಕೃಷಿ ಮಾದರಿ ಎಂದರೇನು? ಹೇಗೆ ಅಳವಡಿಸಿಕೊಳ್ಳುವುದು? ಖರ್ಚು-ವೆಚ್ಚ ಈ ಎಲ್ಲ ಮಾಹಿತಿ ಇಲ್ಲಿ ಲಭ್ಯ.

ಮೇಳಕ್ಕೆ ಆಗಮಿಸುವ ಎಲ್ಲ ರೈತರು ಕುತೂಹಲದಿಂದ ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಅಂದಾಜು 2.77 ಲಕ್ಷ ಮೊತ್ತದ ಎರಡು ಯಂತ್ರಗಳನ್ನು ಕೃವಿವಿಯಿಂದಲೇ ಅಳವಡಿಸಿ ತಂತ್ರಜ್ಞಾನ ಕುರಿತು ಮಾಹಿತಿ ನೀಡಲಾಗುತ್ತಿದೆ. ಈ ತಂತ್ರಜ್ಞಾನ ಅಳವಡಿಸಿಕೊಂಡು ತೋಟಗಾರಿಕೆ ಹಾಗೂ ಕೃಷಿ ಎರಡೂ ಮಾದರಿಯ ಬೆಳೆಗಳನ್ನು ಬೆಳೆಯಬಹುದು. ಇದರಿಂದ ಶೇ. 60 ರಷ್ಟು ನೀರು ಉಳಿತಾಯವಾಗುವುದಲ್ಲದೇ, ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಉತ್ತಮ ಇಳುವರಿಯನ್ನೂ ಪಡೆಯಬಹುದಾಗಿದೆ ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ.

ಈ ತಂತ್ರಜ್ಞಾನ ಬಳಸಿ ಹನಿ ಹಾಗೂ ತುಂತುರು ನೀರಾವರಿ ಮೂಲಕ ಬೆಳೆಗಳನ್ನು ಬೆಳೆಯಬಹುದು. ಯಾವ ಬೆಳೆಗಳಿಗೆ ಎಷ್ಟುಪ್ರಮಾಣದಲ್ಲಿ ನೀರು ನೀಡಬೇಕು ಎಂಬ ಮಾಹಿತಿಯನ್ನು ಯಂತ್ರದಲ್ಲಿ ಪ್ರೋಗ್ರಾಂ ಮೂಲಕ ಅಳವಡಿಸಿದರೆ ಸಾಕು, ನಂತರದಲ್ಲಿ ಮೊಬೈಲ್‌ ಆ್ಯಪ್‌ ಮೂಲಕ ಮನೆಯಲ್ಲೇ ಕುಳಿತು ನೀರು ಹಾಯಿಸಬಹುದು. ಈ ವಿಧಾನದಿಂದ ಅಡಕೆ, ಪೇರು, ಪಪ್ಪಾಯಿ, ಸಪೋಟ, ಕಬ್ಬು, ಹೆಸರು ಸೇರಿದಂತೆ ಎಲ್ಲ ಬೆಳೆಗಳನ್ನೂ ಬೆಳೆಯಬಹುದು.

ಕೈ ಬೀಸಿ ಕರೆಯುತ್ತಿದೆ ಧಾರವಾಡ ಕೃಷಿ ಮೇಳ: ಗಮನ ಸೆಳೆದ ಜಾನುವಾರು ಪ್ರದರ್ಶನ

ಸಾಮಾನ್ಯವಾಗಿ ಮುಂಬೈ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟ ಜಿಲ್ಲೆಯಲ್ಲಿ ಬೆಳೆಯುವ ಕಬ್ಬಿಗೆ ಅಪಾರ ಪ್ರಮಾಣದ ನೀರಿನ ಅಗತ್ಯವಿದೆ. ಈ ತಂತ್ರಜ್ಞಾನ ಬಳಕೆಯಿಂದ ಕಬ್ಬು ಬೆಳೆಯಲು ಶೇ. 60ರಷ್ಟುನೀರು ಉಳಿಕೆ ಮಾಡಬಹುದು. ಇದಲ್ಲದೆ ಈ ತಂತ್ರಜ್ಞಾನದಿಂದ ಪೋಲಾಗುವ ನೀರು ತಡೆಯಬಹುದಲ್ಲದೆ, ಎಷ್ಟುಬೇಕಾದಷ್ಟುಎಕರೆವರೆಗೂ ಬಳಕೆ ಮಾಡಬಹುದು. ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹೆಕ್ಟೇರ್‌ ಪ್ರದೇಶಕ್ಕೆ ಅಂದಾಜು . 2.5 ಲಕ್ಷ ಖರ್ಚು ಬರಲಿದೆ. ಇದರಿಂದ ಅಂತರ್ಜಲ ಮಟ್ಟ ಸಹ ಏರಿಕೆಯಾಗಲಿದೆ ಎಂದು ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಶಶಿಧರ ಜಿ.ಬಿ.ಮಾಹಿತಿ ನೀಡಿದರು.

ಈ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಂಡಲ್ಲಿ ಸರ್ಕಾರದಿಂದ ಶೇ. 90 ರ ವರೆಗೆ ಸಬ್ಸಿಡಿ ಸಿಗಲಿದೆ. ಇಂತಹ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ನೀರಿನಲ್ಲೇ ಉತ್ತಮ ಬೆಳೆ ಪಡೆಯಬಹುದು. ಕೇವಲ ಮೇಳದಲ್ಲಿ ಮಾತ್ರವಲ್ಲದೆ ಇತರ ದಿನಗಳಲ್ಲೂ ಈ ಕುರಿತು ಕೃವಿವಿಯಲ್ಲಿ ಮಾಹಿತಿ ನೀಡಲಾಗುವುದು ಎನ್ನುತ್ತಾರೆ ಅವರು.

ಈ ಬಗ್ಗೆ ಮಾತನಾಡಿದ ಕೃಷಿ ವಿವಿ ಕುಲಪತಿ ಡಾ. ಎಂ.ಬಿ. ಚೆಟ್ಟಿ ಅವರು, ಈ ಬಾರಿಯ ಕೃಷಿ ಮೇಳವನ್ನು ಪ್ರತಿ ಹನಿ ಸಮೃದ್ಧ ತೆನಿ ಘೋಷವಾಕ್ಯ ಇಟ್ಟುಕೊಂಡಿರುವುದೇ ಇಸ್ರೇಲ್‌ ಮಾದರಿ ಕೃಷಿ ಸಲುವಾಗಿ. ಒಟ್ಟಾರೆ ನೀರು ನಿರ್ವಹಣೆ ಹಾಗೂ ಈ ಮೂಲಕ ಉತ್ತಮ ಬೆಳೆ ಪಡೆದು ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ವಿವಿ ಬಾಗಿಲು ಯಾವತ್ತೂ ತೆರೆದಿದ್ದು ಯಾವ ಬೆಳೆ ಬಗ್ಗೆ ಸಹ ಮಾಹಿತಿ ಪಡೆಯಬಹುದು ಎಂದು ಹೇಳಿದ್ದಾರೆ.
 

click me!