ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಬೇಡಿ: ಸಿಎಂ ಬೊಮ್ಮಾಯಿ

By Kannadaprabha News  |  First Published Dec 3, 2022, 9:37 AM IST

ಸದ್ಯದ ಸ್ಥಿತಿಯಲ್ಲಿ ಬರಬೇಡಿ ಎಂದು ಸಿಎಸ್‌ ಮೂಲಕ ಫ್ಯಾಕ್ಸ್‌ ರವಾನೆ, ಆದರೂ ಬಂದರೆ ಸೂಕ್ರ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 


ಬೆಳಗಾವಿ(ಡಿ.03): ರಾಜ್ಯ ಸರ್ಕಾರದ ಸಲಹೆಯ ಹೊರತಾಗಿಯೂ ಗಡಿ ಬಿಕ್ಕಟ್ಟು ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರಿಬ್ಬರು ಡಿ.6ರಂದು ಬೆಳಗಾವಿಗೆ ಭೇಟಿ ನೀಡಿದರೆ ಅದನ್ನು ತಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಸಚಿವರ ಭೇಟಿಗೆ ನಿರ್ಬಂಧ ಹೇರುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದೊಡಮಂಗಡಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡೂ ರಾಜ್ಯಗಳ ಮಧ್ಯೆ ಪ್ರಕ್ಷುಬ್ಧ ಪರಿಸ್ಥಿತಿ ಇರುವಾಗ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವುದು ಸೂಕ್ತ ಅಲ್ಲ. ಈ ಸಂಬಂಧ ಬೆಳಗಾವಿಗೆ ಭೇಟಿ ನೀಡಬೇಡಿ ಎಂದು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್‌ ಮೂಲಕ ಸಂದೇಶ ರವಾನಿಸಲಾಗಿದೆ. ಆದರೂ ಅವರು ಭೇಟಿ ನೀಡಲು ಮುಂದಾದರೆ ಇಂಥ ಪರಿಸ್ಥಿತಿಯಲ್ಲಿ ಈ ಹಿಂದೆ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿದೆಯೋ? ಅದೇ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

ಬೆಳಗಾವಿಯಲ್ಲಿ ಕನ್ನಡ ಬಾವುಟ ಸಂಘರ್ಷ: ಒಬ್ಬ ಸೆರೆ, ಮೂವರು ವಶ

ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕದಡುತ್ತಾ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಾಯಕರ ಆಹ್ವಾನದ ಮೇರೆಗೆ ಡಿ.6ರಂದು ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ್‌ ಹಾಗೂ ಶಂಭುರಾಜೆ ಅವರು ಬೆಳಗಾವಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಈ ವೇಳೆ ಅವರು ಬೆಳಗಾವಿಯಲ್ಲಿ ಮರಾಠಿಗರ ಜತೆಗೆ ಸರಣಿ ಸಭೆ ನಡೆಸಲೂ ಉದ್ದೇಶಿಸಿದ್ದಾರೆ. ಈ ಕುರಿತು ಕನ್ನಡಪರ ಸಂಘಟನೆಗಳಿಂದ ಈಗಾಗಲೇ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.

ಕಳೆದ ವರ್ಷ ಕನ್ನಡಧ್ವಜದ ಗಲಾಟೆ ಸಂದರ್ಭದಲ್ಲೂ ಶಿವಸೇನೆ ಸಚಿವರು, ಮುಖಂಡರು ಇದೇ ರೀತಿ ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದರು. ಆಗ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಸರ್ಕಾರ ಅವರ ಭೇಟಿಗೆ ನಿಷೇಧ ಹೇರಿತ್ತು.
 

click me!