ಕರ್ನಾಟಕಕ್ಕೆ ಸೇರುವ ಠರಾವು ಪಾಸು ಮಾಡಿದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಕೆಲವೊಂದು ಗ್ರಾಮ ಪಂಚಾಯತಿಗಳು.
ಕಲಬುರಗಿ(ಡಿ.03): ಮಹಾರಾಷ್ಟ್ರ ಗಡಿಯಲ್ಲಿರುವ ಹಳ್ಳಿಗರಿಂದ ಕರ್ನಾಟಕ ಸೇರುವ ಕೂಗು ಇನ್ನೂ ನಿಂತಿಲ್ಲ. ಮತ್ತೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಕೆಲವೊಂದು ಗ್ರಾಮ ಪಂಚಾಯತಿಗಳು ಕರ್ನಾಟಕಕ್ಕೆ ಸೇರುವ ಠರಾವು ಪಾಸು ಮಾಡಿವೆ.
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಅಕ್ಕಲಕೋಟ ತಾಲೂಕಿನ ಅಪ್ಪಟ ಕನ್ನಡ ಗ್ರಾಮವಾದ ಉಡಗಿ ಗ್ರಾಮದ ಜನರು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಕರ್ನಾಟಕ ಪರವಾಗಿ ಜೈ ಘೋಷಣೆ ಕೂಗಿದರು. ಕರ್ನಾಟಕ ಸರ್ಕಾರವು ಬೇಗ ಮುಂದೆ ಬಂದು ಗಡಿನಾಡಿನ ಕನ್ನಡಿಗರ ಬೆಂಬಲಕ್ಕೆ ನಿಲ್ಲಬೇಕು ಎಂದು ಸಹ ಇಲ್ಲಿನ ಕನ್ನಡಿಗರು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಕ್ಯಾತೆಗೆ ಸೊಲ್ಲಾಪುರ ಗಡಿಯಲ್ಲಿ ಕನ್ನಡಿಗರ ಗುಟುರು..!
ಸ್ವಾತಂತ್ರ್ಯ ಸಿಕ್ಕು ಇಲ್ಲಿಯವರೆಗೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ರಸ್ತೆಗಳಿಲ್ಲ, ಕುಡಿಯುವ ನೀರಿನ ಸಮಸ್ಯೆ, ಮಹಾರಾಷ್ಟ್ರ ಸರ್ಕಾರ ನಮಗೆ ಮಲತಾಯಿ ಧೋರಣೆ ತೋರುತ್ತ ಬಂದಿದೆ. ಇಲ್ಲಿ ಸರ್ಕಾರಿ ಆಸ್ಪತ್ರೆಯೂ ಕೂಡ ಕಾರ್ಯನಿರ್ವಹಿಸುತ್ತಿಲ್ಲ ಏಕೆಂದರೆ ಇದು ಇಂದಲ್ಲ ನಾಳೆ ಕರ್ನಾಟಕಕ್ಕೆ ಸೇರುತ್ತದೆ ಎಂದು ಅಲಕ್ಷಿಸಲಾಗುತ್ತಿದೆ ಎಂದು ಜನ ಗೋಳಾಡುತ್ತಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಮಲತಾಯಿ ಧೋರಣೆ ಮತ್ತು ನಿರ್ಲಕ್ಷ್ಯತನದಿಂದ ಇಂದು ಗಡಿನಾಡಿನಲ್ಲಿ ಕನ್ನಡ ಮಾತನಾಡುವ ಬಹುತೇಕ ಹಳ್ಳಿಗಳು ಕರ್ನಾಟಕಕ್ಕೆ ಸೇರುವ ಠರಾವು ಪಾಸು ಮಾಡುತ್ತಿವೆ.