ಕೊಡಗು ಜಿಲ್ಲೆಯಲ್ಲಿ ಹರಡುತ್ತಿದೆ ಮದ್ರಾಸ್‌ ಐ ಸೋಂಕು: 10 ದಿನಗಳಲ್ಲಿ 136 ಜನರಿಗೆ ಹರಡಿದ ರೋಗ

By Govindaraj S  |  First Published Aug 7, 2023, 11:41 PM IST

ಕೋವಿಡ್ ವೈರಸ್ ಸೃಷ್ಟಿಸಿದ ಸಾವು ನೋವು ಅಷ್ಟಿಷ್ಟಲ್ಲ. ಆ ಸಾಂಕ್ರಾಮಿಕ ರೋಗ ಇಂದಿಗೂ ಪೂರ್ಣ ಪ್ರಮಾಣದಲ್ಲಿ ತೊಲಗಿಲ್ಲ. ಈ ನಡುವೆ ಮದ್ರಾಸ್‌ ಹೈ ಎನ್ನುವ ಸೋಂಕು ತೀವ್ರ ವೇಗದಲ್ಲಿ ಹರಡುತ್ತಿದ್ದು ಜನರು ಆ ಸೋಂಕಿನಿಂದ ಬಳಲುವಂತೆ ಆಗಿದೆ.


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.07): ಕೋವಿಡ್ ವೈರಸ್ ಸೃಷ್ಟಿಸಿದ ಸಾವು ನೋವು ಅಷ್ಟಿಷ್ಟಲ್ಲ. ಆ ಸಾಂಕ್ರಾಮಿಕ ರೋಗ ಇಂದಿಗೂ ಪೂರ್ಣ ಪ್ರಮಾಣದಲ್ಲಿ ತೊಲಗಿಲ್ಲ. ಈ ನಡುವೆ ಮದ್ರಾಸ್‌ ಹೈ ಎನ್ನುವ ಸೋಂಕು ತೀವ್ರ ವೇಗದಲ್ಲಿ ಹರಡುತ್ತಿದ್ದು ಜನರು ಆ ಸೋಂಕಿನಿಂದ ಬಳಲುವಂತೆ ಆಗಿದೆ. ಮದ್ರಾಸ್‌ ಐ ಸೋಂಕು ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹರಡುತ್ತಿದ್ದು ಕಳೆದ ಒಂದು ವಾರದಲ್ಲಿ 136 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಜನರು ಕಣ್ಣು ನೋವಿನಿಂದ ಬಳಲುವಂತೆ ಆಗಿದೆ. ಕೊಡಗು ಜಿಲ್ಲೆಯಲ್ಲಿ ಜುಲೈ 25 ರಿಂದ ಆಗಸ್ಟ್ ತಿಂಗಳ 4 ನೇ ತಾರೀಖಿನವರೆಗೆ 136 ಪ್ರಕರಗಳು ಪತ್ತೆಯಾಗಿವೆ. 

Latest Videos

undefined

ಈ ಸೋಂಕು ಬಂದರೆ ಕಣ್ಣು ಕೆಂಪಾಗಿ ಉರಿಯೂತ ಉಂಟಾಗುತ್ತದೆ. ಜೊತೆಗೆ ಕಣ್ಣುಗಳಲ್ಲಿ ಪಿಸುರೆ ಆಗಿ ಕಣ್ಣು ಬಿಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ. ಈ ಸಾಂಕ್ರಾಮಿಕ ಕಾಯಿಲೆ ತೀವ್ರತರವಾದ ಸಮಸ್ಯೆ ಉಂಟು ಮಾಡುವುದಿಲ್ಲವಾದರೂ ನಾಲ್ಕೈದು ದಿನಗಳ ಕಾಲ ಕಣ್ಣು ನೋವಿನಿಂದ ಮಕ್ಕಳು, ಜನ ಸಾಮಾನ್ಯರು ಪರದಾಡಬೇಕಾಗುತ್ತದೆ. ಇದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಸೋಂಕು ಎಲ್ಲರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ. ಇದನ್ನು ನಿಯಂತ್ರಿಸಬೇಕಾದರೆ ರೋಗ ಭಾದಿತರು ಇತರರಿಂದ ದೂರವಿದ್ದು ಐಸೋಲೆಷನ್ ನಲ್ಲಿ ಇರಬೇಕಾಗುತ್ತದೆ ಎಂದು ಕುಟುಂಬ ಕಲ್ಯಾಣಧಿಕಾರಿ ಡಾ. ಆನಂದ ಹೇಳುತ್ತಾರೆ. 

ಕಾಂಗ್ರೆಸ್ಸಿಂದ ದೇಶದ ಆರ್ಥಿಕತೆ ಸದೃಢ: ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ

ಜಿಲ್ಲೆಯಲ್ಲಿ ಈಗಾಗಲೇ 136 ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕಿತರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಗ್ರಾಮ ಮಟ್ಟದಲ್ಲಿಯೇ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಒಟ್ಟಿಗೆ ಕುಳಿತುಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಮದ್ರಾಸ್‌ ಐ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಸೋಂಕಿತರ ಬರುತ್ತಿರುವುದರಿಂದ ಆಸ್ಪತ್ರೆಗಳು ತುಂಬುತ್ತಿವೆ. ಸೋಂಕಿತರ ಜೊತೆಗೆ ಹೆಚ್ಚಿನ ಸಮಯ ಇದ್ದರೆ, ಇತರರಿಗೂ ಈ ರೋಗ ಹರಡುತ್ತದೆ. 

ಆದ್ದರಿಂದ ಸೋಂಕಿತರಿಂದ ದೂರವಿರಬೇಕು, ಸೋಂಕಿತರು ಬಳಸಿದ ಟವಲ್ ಅಥವಾ ಇತರೆ ವಸ್ತುಗಳನ್ನು ಬಳಸಬಾರದು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಹೀಗೆಲ್ಲಾ ಮಾಡುವುದರಿಂದ ಸೋಂಕನ್ನು ನಿಯಂತ್ರಿಸಬಹುದು ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ್ ಹೇಳಿದ್ದಾರೆ. ಸದ್ಯ ಇದನ್ನು ನಿಯಂತ್ರಿಸಬೇಕಾದರೆ ಅರಿವು ಅತೀ ಮುಖ್ಯ. ಹೀಗಾಗಿ ನಮ್ಮ ಸಿಬ್ಬಂದಿ ಪ್ರತೀ ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಶಾಲಾ, ಕಾಲೇಜು ಮತ್ತು ಹಾಸ್ಟೆಲ್ ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಅರಿವು ಮಾಡಿಸಲಾಗುತ್ತಿದೆ. 

ಅಡಕೆ ಬೆಳೆ​ಗಾ​ರರ ಸಮಸ್ಯೆ ಪರಿ​ಹಾ​ರಕ್ಕೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ

ಜೊತೆಗೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರ ಆಕಾಶವಾಣಿ ಕೇಳುವುದರಿಂದ ಆಕಾಶವಾಣಿಯ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ. ಆನಂದ ಅವರು ಹೇಳಿದ್ದಾರೆ. ಈ ಸೋಂಕಿಗೆ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಸ್ವಚ್ಛತೆ ಕಾಪಾಡಿಕೊಂಡರೆ ನಾಲ್ಕೈದು ದಿನಗಳಲ್ಲಿ ತಾನಾಗಿಯೇ ವಾಸಿಯಾಗಲಿದೆ. ಆದರೆ ಸೋಂಕು ಹರಡದಂತೆ ಜನರು ಎಚ್ಚರ ವಹಿಸಬೇಕಾಗಿದೆ ಎಂದು ಡಾ. ಆನಂದ್ ಹೇಳಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮದ್ರಾಸ್‌ ಐ ಸೋಂಕು ತೀವ್ರ ಗತಿಯಲ್ಲಿ ಹರಡುತ್ತಿದ್ದು ಜನರು ಎಚ್ಚರ ವಹಿಸಬೇಕಾಗಿದೆ. ಇಲ್ಲದಿದ್ದರೆ ಸೋಂಕಿಗೆ ಒಳಗಾಗಿ ವಾರಗಳ ಕಾಲ ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. 

click me!