
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.20): ನಗರಸಭೆಯ ಯಾವುದೇ ಆಸ್ತಿಗಳಿಂದ ಬರುವ ಆದಾಯ ನಗರಸಭೆಗೆ ಸೇರಬೇಕು ಅಲ್ವಾ. ಆದರೆ ಇಲ್ಲಿ ಕೆಲವು ಆಟೋ ಚಾಲಕರು ಮತ್ತು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದ ವ್ಯಕ್ತಿಗಳು ಬಯಲು ರಂಗ ಮಂದಿರವನ್ನು ಅನಧಿಕೃತವಾಗಿ ಯಾರಿಗೋ ಬಾಡಿಗೆಗೆ ನೀಡಿ ರಂಗಮಂದಿರವನ್ನು ದುರುಪಯೋಗ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೌದು ಮಡಿಕೇರಿ ನಗರಸಭೆಯ ಸಮೀಪದಲ್ಲೇ ಗಾಂಧಿ ಮೈದಾನವಿದೆ. ಅದರ ಕೊನೆಯಲ್ಲಿ ಒಂದು ರಂಗಮಂದಿರವೂ ಇದೆ. ರಂಗಮಂದಿರದ ಕೆಳಭಾಗದಲ್ಲಿ ಒಂದು, ರಂಗಮಂದಿರದ ಒಂದು ಭಾಗದಲ್ಲಿ ಒಂದು ಕೊಠಡಿ ಇವೆ.
ಜೊತೆಗೆ ರಂಗ ಮಂದಿರದ ಪಕ್ಕದಲ್ಲಿಯೇ ಶೌಚಾಲಯವಿದ್ದು ಅದೇ ಕಟ್ಟಡದಲ್ಲಿ ಸಣ್ಣದೊಂದು ಕೋಣೆಯೂ ಇದೆ. ಇವೆಲ್ಲವುಗಳಲ್ಲಿ ನಾಲ್ಕೈದು ಜನರು ಅನಧಿಕೃತವಾಗಿ ತಂಗಿರುವುದು ಬೆಳಕಿಗೆ ಬಂದಿದೆ. ಹೌದು ರಂಗಮಂದಿರ ಮತ್ತು ಅದರ ಪಕ್ಕದಲ್ಲಿರುವ ಶೌಚಾಲಯದ ಸ್ವಚ್ಛತೆಯನ್ನು ಮಾಡಬೇಕು. ಅದಕ್ಕಾಗಿ ನಗರಸಭೆಯ ಡಿ ಗ್ರೂಪ್ ನೌಕರರೊಬ್ಬರಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಆ ವ್ಯಕ್ತಿ ಹಾವೇರಿ ಜಿಲ್ಲೆಯಿಂದ ಬಂದಿರುವ ಅಡವಿಸ್ವಾಮಿ ಎಂಬ ವ್ಯಕ್ತಿಯನ್ನು ತನ್ನ ಸ್ವಂತ ವೆಚ್ಚದಲ್ಲಿ ರಂಗಮಂದಿರದ ಸ್ವಚ್ಛತೆಗೆ ಇರಿಸಿಕೊಂಡಿದ್ದಾನೆ. ಈ ಅಡವಿಸ್ವಾಮಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಿಂದ ಬಂದಿರುವ ರೂಪೇಶ್ ಎಂಬಾತನನ್ನು ಇರಿಸಿಕೊಂಡಿದ್ದಾನೆ.
ಮಡಿಕೇರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಈ ರೂಪೇಶ್ ಡಾರ್ಜಿಲಿಂಗ್ ನಿಂದಲೇ ಬಂದಿರುವ ಸುನಿಲ್ ಮತ್ತು ಮಾಮು ಎಂಬಿಬ್ಬರನ್ನು ರಂಗಮಂದಿರದ ಕೆಳಭಾಗದಲ್ಲಿ ಇರುವ ಕೊಠಡಿಯಲ್ಲಿ ಇರಿಸಿಕೊಂಡಿದ್ದಾನೆ. ಇವರಿಬ್ಬರಿಂದಲೂ ರೂಪೇಶ್ ಬಾಡಿಗೆ ಪಡೆಯುತ್ತಿದ್ದಾನೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಒಟ್ಟು ನಾಲ್ವರು ಬಯಲು ರಂಗಮಂದಿರದಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದಾರೆ. ಒಂದೆಡೆ ರೂಪೇಶ್ ಇಬ್ಬರನ್ನು ಒಂದು ಕೊಠಡಿಯಲ್ಲಿ ಇರಿಸಿ ಬಾಡಿಗೆ ಪಡೆಯುತ್ತಿದ್ದರೆ ಮತ್ತೊಂದೆಡೆ ಓಪನ್ ಸ್ಟೇಜ್ ಅನ್ನೇ ಹೊರ ಜಿಲ್ಲೆಯಿಂದ ಬರುವ ಬಡ ಪ್ರವಾಸಿಗರಿಗೆ ರಾತ್ರಿ ತಂಗುವುದಕ್ಕೆ ಬಾಡಿಗೆ ನೀಡುತ್ತಿರುವುದು ಗೊತ್ತಾಗಿದೆ.
ಮಡಿಕೇರಿಗೆ ಪ್ರವಾಸಕ್ಕೆ ಬಂದವರು ರಾತ್ರಿ ತಂಗಲು ಕೊಠಡಿಗಳು ಸಿಗದೆ ಪರದಾಡುತ್ತಿರುವವರನ್ನು ಕರೆದುಕೊಂಡು ಬರುವ ಕೆಲವು ಆಟೋ ಚಾಲಕರು ಈ ಸ್ಟೇಜಿನಲ್ಲಿ ಉಳಿದುಕೊಳ್ಳಿ ಎಂದು ಹೇಳಿ ಅದನ್ನು ತೋರಿಸಿ ಪ್ರವಾಸಿಗರಿಂದ 600 ರಿಂದ 800 ರೂಪಾಯಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸದಂತೆ ಅಲ್ಲಿಯೇ ವಾಸಿಸುತ್ತಿರುವ ರೂಪೇಶನಿಗೆ ಅದರಲ್ಲಿ ಒಂದಷ್ಟು ಹಣವನ್ನು ನೀಡಿ ಸಮಾಧಾನ ಪಡಿಸುತ್ತಿರುವ ವಿಷಯವೂ ಗೊತ್ತಾಗಿದೆ. ನಿನ್ನೆ ರಾತ್ರಿಯೂ ಆಂಧ್ರದಿಂದ ಬಂದಿದ್ದ ಮುಸ್ಲಿಂ ಕುಟುಂಬವೊಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ಇರುವ ರಂಗಮಂದಿರಲ್ಲಿ ತಂಗಿದೆ.
ಬೆಳಿಗ್ಗೆ ಎದ್ದು ಅಲ್ಲಿಯೇ ತಿಂಡಿಯನ್ನು ಸಿದ್ಧಗೊಳಿಸಿದೆ. ತಿಂಡಿ ಸಿದ್ಧಗೊಳಿಸುತ್ತಿರುವುದನ್ನು ಗಮನಿಸಿದ ಕೊಡಗು ಅಭಿವೃದ್ಧ ಸಮಿತಿ ಮುಖಂಡರು ಇಲ್ಲೇಕೆ ಮಲಗಿದ್ದೀರಿ ಮತ್ತು ಅಡುಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 600 ರೂಪಾಯಿ ಬಾಡಿಗೆ ನೀಡಿ ಉಳಿದುಕೊಂಡಿದ್ದೇವೆ. ನೀವ್ಯಾರು ಪ್ರಶ್ನಿಸುವುದಕ್ಕೆ ಎಂದಿದ್ದಾರೆ. ಕೂಡಲೇ ರೂಪೇಶನನ್ನು ಪ್ರಶ್ನಿಸಿದಾಗ ಬಯಲು ರಂಗಮಂದಿರವನ್ನು ಆಗಿಂದಾಗ್ಗೆ ಯಾರಿಗೂ ತಿಳಿಯದಂತೆ ಬಡ ಪ್ರವಾಸಿಗರಿಗೆ ತಂಗಲು ಬಾಡಿಗೆಗೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸಿಡುಕುಗೊಂಡ ಕೊಡಗು ಅಭಿವೃದ್ಧಿ ಸಮಿತಿ ಮುಖಂಡರು ಕೊಡಗಿನಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳು ಪ್ರವಾಸಿಗರಿಗೆ ಕೊಡಗಿನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿವೆ.
ಕೊಡಗಿಗೆ ಹೋಗಬೇಕೋ ಬೇಡವೋ ಎಂದು ಅನುಮಾನ ಮೂಡಿಸಿವೆ. ಹೀಗಿರುವಾಗ ಇಂತಹ ತೆರದ ರಂಗಮಂದಿರಲ್ಲಿ ಪ್ರವಾಸಿಗರನ್ನು ಅಕ್ರಮವಾಗಿ ಉಳಿಸುತ್ತಿರುವುದು ನಗರಸಭೆ ಗಮನಕ್ಕೆ ಬಂದಿಲ್ಲವೇ. ಅಥವಾ ಗಮನಕ್ಕೆ ಬಂದಿದ್ದರೂ ಸುಮ್ಮನಿದೆಯೇ.? ರಂಗಮಂದಿರದ ಕೊಠಡಿಗಳಲ್ಲಿ ನಾಲ್ವರು ಅನಧಿಕೃತವಾಗಿ ತಂಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಇದೆಲ್ಲದರ ವಿರುದ್ಧ ಅಧಿಕಾರಿಗಳು ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ತಮ್ಮೆದುರಿಗೆ ನಡೆಯುತ್ತಿರುವ ಈ ಅನಧಿಕೃತ ಚಟುವಟಿಕೆಗಳು ನಗರಸಭೆಗೆ ಕಾಣಿಸದೆ ಮೌನವಹಿಸಿರುವುದು ಮಾತ್ರ ಅನುಮಾನ ಮೂಡಿಸಿದೆ.