ಕುಮಾರ್ ಟೀಕೆಗೆ ಈಗ ಪ್ರತಿಕ್ರಿಯಿಸಲ್ಲ

By Web DeskFirst Published Oct 23, 2018, 8:13 PM IST
Highlights

ನಮ್ಮ ತಂದೆ ಬಂಗಾರಪ್ಪರ ಶ್ರೀ ರಕ್ಷೆಯೇ ನನಗೆ ಬಲ. ಬಂಗಾರಪ್ಪರ ಹೆಸರಿನಿಂದಾಗಿ ಬೈಂದೂರಿನಲ್ಲಿಯೂ ಉತ್ತಮ ಬೆಂಬಲ ದೊರಕಿದೆ. ಬಂಗಾರಪ್ಪ ಹೆಸರು ಎಂದಿಗೂ ಅಜರಾಮರ - ಮಧು ಬಂಗಾರಪ್ಪ

ಶಿವಮೊಗ್ಗ(ಅ.23): ಚುನಾವಣೆ ಮುಗಿಯುವವರೆಗೂ ಸಹೋದರ ಕುಮಾರ್ ಬಂಗಾರಪ್ಪ ಮತ್ತು ಸಾಗರ ಶಾಸಕ ಹಾಲಪ್ಪ ತಮ್ಮ ಮೇಲೆ ಮಾಡಿರುವ ಯಾವುದೇ ಟೀಕೆಗಳಿಗೆ ಉತ್ತರ ನೀಡುವುದಿಲ್ಲ ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೀಕೆ ಮಾಡುವುದೇ ಅವರ ಕೆಲಸವಾಗಿದೆ. ಚುನಾವಣೆ ಫಲಿತಾಂಶವೇ ಅವರಿಗೆ ಉತ್ತರ ನೀಡಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ತನ್ನ ಪರವಾಗಿ ಪ್ರಚಾರಕ್ಕೆಂದು ಆಗಮಿಸಿರುವುದು ಉಪಚುನಾವಣೆಯಲ್ಲಿ ತಮಗೆ ಆನೆ ಬಲ ಬಂದಂತಾಗಿದೆ. ತಮ್ಮ ಪರ ಕಾಂಗ್ರೆಸ್-ಜೆಡಿಎಸ್ ಪಕ್ಷದ ಅನೇಕ ಹಿರಿಯ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರ್‌ಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ದೇವೇಗೌಡರು, ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ ಹೀಗೆ ಅನೇಕ ನಾಯಕರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ -ಕಾಂಗ್ರೆಸ್ ಒಮ್ಮತ ಅಭ್ಯರ್ಥಿಯಾಗಿ ಆಯ್ಕೆ ಆಗಿರುವುದು ತಮ್ಮ ಜವಾಬ್ದಾರಿ ಹೆಚ್ಚಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ನವೆಂಬರ್ 6 ರಂದು ಬರಲಿರುವ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದರು.

ನಮ್ಮ ತಂದೆ ಬಂಗಾರಪ್ಪರ ಶ್ರೀ ರಕ್ಷೆಯೇ ನನಗೆ ಬಲ. ಬಂಗಾರಪ್ಪರ ಹೆಸರಿನಿಂದಾಗಿ ಬೈಂದೂರಿನಲ್ಲಿಯೂ ಉತ್ತಮ ಬೆಂಬಲ ದೊರಕಿದೆ. ಬಂಗಾರಪ್ಪ ಹೆಸರು ಎಂದಿಗೂ ಅಜರಾಮರ ಎಂದು ಹೇಳಿದರು.

click me!