
ಬೆಂಗಳೂರು (ಸೆ.26): ಶಾಲಾ ಮಕ್ಕಳಿಗೆ ಈ ಬಾರಿ ಕಳಪೆ ಗುಣಮಟ್ಟದ ಶೂ, ಸಾಕ್ಸ್ ವಿತರಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶೂ-ಸಾಕ್ಸ್ ಗುಣಮಟ್ಟ ಕಳಪೆ ಎಂಬುದು ಸುಳ್ಳು. ಈ ಆರೋಪ ಸಂಬಂಧ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಎರಡು ದಿನಗಳ ಮೊದಲೇ ಇಲಾಖೆಯಿಂದ ಪರಿಶೀಲಿಸಲಾಯಿತು. ಯಾರೋ ಕೆಲವರು ಕಳೆದ ವರ್ಷದ ಹಳೆಯ ಶೂ ಫೋಟೋ ತೋರಿಸಿ ಇಂಥ ಆರೋಪ ಮಾಡಿದ್ದಾರೆ. ಆದರೂ, ಎಲ್ಲ ಜಿಪಂ ಸಿಇಒಗಳಿಗೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಹೋಗಿ ಖುದ್ದು ಪರಿಶೀಲಿಸಿ ವರದಿ ನೀಡಲು ಹೇಳಿದ್ದೇನೆ. ಜೊತೆಗೆ, ಯಾವುದೇ ಶಾಲೆಯಲ್ಲಿ ಕಳಪೆ ಶೂ, ಸಾಕ್ಸ್ ನೀಡಿರುವುದು ಕಂಡು ಬಂದರೆ ತಮಗೆ ದೂರು ನೀಡಿದರೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಟೆಂಡರ್‌ದಾರರಿಗೆ ದಂಡ, ಶಿಕ್ಷೆಗೆ ಗುರಿಪಡಿಸಲು ನಿಯಮಗಳಲ್ಲಿ ಅವಕಾಶವಿದೆ ಎಂದರು.
ಕೆಲವೆಡೆ ಮಕ್ಕಳಿಗೆ ಶೂ, ಸಾಕ್ಸ್‌ಗಳ ಅಳತೆಯಲ್ಲಿ ವ್ಯತ್ಯಾಸವಾಗಿದೆ. ಮತ್ತೆ ಶೂ, ಸಾಕ್ಸ್ ಶಾಲೆಗಳಿಗೆ ತಲುಪಿಸುವಲ್ಲೂ ವಿಳಂಬವಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ. ಆಗ ನಾನು ಸಚಿವನಾಗಿರಲಿಲ್ಲ. ಯಾವ ಮಕ್ಕಳಿಗೆ ಸೈಜ್ ಸಮಸ್ಯೆ ಇದೆಯೋ ಅಂತಹ ಮಕ್ಕಳಿಗೆ ಬೇರೆ ಶೂ ಮತ್ತು ಸಾಕ್ಸ್ ವಿತರಿಸುವಂತೆ ಸೂಚಿಸಲಾಗಿದೆ ಎಂದರು.
ಕಲಬುರಗಿ ನಗರದ ತಾರಫೈಲ್ ಬಡಾವಣೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ನೀಡಿರುವ ಶೂಗಳು ವಿತರಣೆಯಾಗುವ ಮೊದಲೇ ಹರಿದುಹೋಗಿವೆ. ಇವುಗಳನ್ನು ಧರಿಸುವುದರಿಂದ ಕಾಲಿನಲ್ಲಿ ಗುಳ್ಳೆಗಳು ಏಳುತ್ತಿದ್ದು, ಇಂತಹ ಕಳಪೆ ಪಾದರಕ್ಷೆಗಳನ್ನು ನೀಡಲು ಸರ್ಕಾರಕ್ಕೆ ಹೇಗೆ ಮನಸ್ಸು ಬಂತು ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಕಳೆದ ವರ್ಷ ಬ್ರಾಂಡೆಡ್ ಕಂಪನಿಯ ಶೂ ಹಾಗೂ ಎರಡು ಜೊತೆ ಸಾಕ್ಸ್ ನೀಡಲಾಗಿತ್ತು, ಆದರೆ ಈ ಬಾರಿ ಕೇವಲ ಒಂದೇ ಜೊತೆ ಸಾಕ್ಸ್ ನೀಡಲಾಗಿದೆ. ಇದರಿಂದಾಗಿ ಹಲವು ವಿದ್ಯಾರ್ಥಿಗಳು ಇಂದಿಗೂ ಹಳೆಯ ಶೂಗಳನ್ನೇ ಧರಿಸಿ ಶಾಲೆಗೆ ಬರುತ್ತಿದ್ದಾರೆ.
ಇದೇ ರೀತಿಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ವರದಿಯಾಗಿದೆ. ಕಳಪೆ ಶೂಗಳನ್ನು ನೀಡಿದ್ದಕ್ಕೆ ಬೇಸತ್ತ ವಿದ್ಯಾರ್ಥಿಗಳು ಅವುಗಳನ್ನು ರಸ್ತೆಗೆ ಎಸೆದು ಪ್ರತಿಭಟಿಸಿದ್ದರು. ಈ ಕುರಿತು ವರದಿ ಬಂದ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಪೆ ಶೂಗಳನ್ನು ವಾಪಸ್ ಪಡೆದು ಸಂಬಂಧಪಟ್ಟ ಕಂಪನಿ ಹಾಗೂ ಸರ್ಕಾರಕ್ಕೆ ಹಿಂತಿರುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.