ಅನುಕಂಪದ ನೇಮಕ ನಿರಂತರ ಹಕ್ಕಲ್ಲ ಒಮ್ಮೆಯಷ್ಟೇ ಲಭಿಸುವ ಸೌಲಭ್ಯ: ಕೆಎಟಿ ಆದೇಶ ರದ್ದುಗೊಳಿಸಿದ ಹೈಕೋರ್ಟ್‌

Published : Sep 26, 2026, 08:50 AM IST
Justice Nagaprasanna

ಸಾರಾಂಶ

ಅನುಕಂಪದ ಆಧಾರದ ಮೇಲಿನ ನೇಮಕಾತಿಯು ಕೇವಲ ಒಂದು ಬಾರಿಯ ಕ್ರಮವಾಗಿದ್ದು, ಶೈಕ್ಷಣಿಕ ಅರ್ಹತೆ ಮುಂದಿಟ್ಟು ಉನ್ನತ ಹುದ್ದೆ ಕೇಳುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರಿಗಣಿಸುವಂತೆ ಕೆಎಟಿ ನೀಡಿದ್ದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.26): ಕುಟುಂಬದ ಆಧಾರಸ್ತಂಭ ಹಾಗೂ ಮುಖ್ಯ ಆದಾಯದ ಮೂಲವಾಗಿರುವ ಸರ್ಕಾರಿ ನೌಕರನ ಸಾವಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಆತನ ಕುಟುಂಬಕ್ಕೆ ತಕ್ಷಣದ ನೆರವು ನೀಡುವುದೇ ಅನುಕಂಪದ ಆಧಾರದ ಮೇಲಿನ ನೇಮಕಾತಿಯ ಮೂಲ ಉದ್ದೇಶ. ಕೇವಲ ಒಂದು ಬಾರಿಯ ಕ್ರಮ ಇದಾಗಿದ್ದು, ನಿರಂತರವಾಗಿ ಲಭ್ಯವಿರುವ ಸೌಲಭ್ಯವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದ ಇಬ್ಬರು ನೌಕರರಿಗೆ ಉನ್ನತ ಶೈಕ್ಷಣಿಕ ಅರ್ಹತೆ ಇದೆ ಎಂಬ ಕಾರಣಕ್ಕೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್‌ ಈ ಆದೇಶ ಮಾಡಿದೆ. ಕೆಎಟಿ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಒಮ್ಮೆ ಅನುಕಂಪದ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗ ದೊರೆತು ಆ ನೇಮಕಾತಿಯನ್ನು ಸ್ವೀಕರಿಸಿದ ನಂತರ, ನೇಮಕಗೊಂಡ ವ್ಯಕ್ತಿ ನಿರ್ದಿಷ್ಟ ಹುದ್ದೆಗಳಿಗೆ ಅಗತ್ಯ ಅರ್ಹತೆ ಹೊಂದಿದ್ದಾರೆ ಎಂಬ ಕಾರಣಕ್ಕಾಗಿಯೇ ಆ ಅನುಕಂಪದ ಆಧಾರ ಬಳಸಿಕೊಂಡು ಉನ್ನತ ಹುದ್ದೆಗಳು, ಉತ್ತಮ ಶ್ರೇಣಿ ಅಥವಾ ಹೆಚ್ಚಿನ ಸೇವಾ ಸೌಲಭ್ಯಗಳಿಗಾಗಿ ನಿರಂತರವಾಗಿ ಬೇಡಿಕೆ ಸಲ್ಲಿಸಲು ಅವಕಾಶ ನೀಡುವುದಿಲ್ಲ. ಆ ಯೋಜನೆಯಡಿ ಉದ್ದೇಶಿಸಲಾದ ಹುದ್ದೆಗೆ ನೇಮಕಾತಿ ಮಾಡುವ ಮೂಲಕ ಯೋಜನೆಯ ಮೂಲ ಉದ್ದೇಶ ಈಡೇರಿದ ನಂತರ, ಮತ್ತೊಂದು ಅಥವಾ ಉನ್ನತ ಹುದ್ದೆ ಪಡೆಯಲು ಅನುಕಂಪದ ಆಧಾರವನ್ನು ಮತ್ತೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ನೇಮಕ ಆದವರು ಹೊಂದಿರುವ ಉನ್ನತ ಶೈಕ್ಷಣಿಕ ಅರ್ಹತೆಗಳ ಬಲದ ಆಧಾರದ ಮೇಲೆ ಗ್ರೂಪ್-ಸಿ ಒಳಗೆ ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ವರ್ಗಾವಣೆ ಮಾಡುವ ಮನವಿಗಳನ್ನು ಪರಿಗಣಿಸುವಾಗ ರಾಜ್ಯ ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಅಂತಹ ಔದಾರ್ಯಕ್ಕಾಗಿ ವ್ಯಕ್ತಿಗಳನ್ನು ಪಿಕ್‌ ಆ್ಯಂಡ್‌ ಚೂಸ್ ಮಾಡುವುದು ಇಡೀ ಯೋಜನೆಯನ್ನು ತಿರಸ್ಕರಿಸಿದಂತಾಗುತ್ತದೆ. ಇದು ಆಡಳಿತಾತ್ಮಕ ಶಿಸ್ತಿಗೆ ತೊಂದರೆ ಉಂಟು ಮಾಡುತ್ತದೆ. ನಿಯಮ ಮೀರಿ ಕೆಲವರಿಗೆ ಸೌಲಭ್ಯ ನೀಡುವುದರಿಂದ ಅಸಮಾನತೆ ಹಾಗೂ ಅನಗತ್ಯ ವ್ಯಾಜ್ಯಗಳು ಸೃಷ್ಟಿಯಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸುವುದು ಅತ್ಯಗತ್ಯ ಎಂದು ಪೀಠ ನುಡಿದಿದೆ.

ಪ್ರಕರಣದ ವಿವರ

ಬೆಳಗಾವಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ನೌಕರರು ನಿಧನರಾದ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ 2018ರ ಮಾ.26ರಂದು ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ (ಎಸ್‌ಡಿಎ) ನೇಮಕಾತಿ ನೀಡಲಾಗಿತ್ತು. ಉದ್ಯೋಗಕ್ಕೆ ಸೇರಿದ ಏಳು ತಿಂಗಳ ಬಳಿಕ, ತಮ್ಮ ಉನ್ನತ ಶೈಕ್ಷಣಿಕ ಅರ್ಹತೆ ಪರಿಗಣಿಸಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರ ಇದನ್ನು ತಿರಸ್ಕರಿಸಿದಾಗ, ನೌಕರರು ಕೆಎಟಿ ಮೆಟ್ಟಿಲೇರಿದ್ದರು. ಕೆಎಟಿ ನೌಕರರ ಪರವಾಗಿ ಆದೇಶ ನೀಡಿತ್ತು.

PREV
Read more Articles on
click me!

Recommended Stories

ಕೆ.ಆರ್.ಮಾರ್ಕೆಟ್‌ನಲ್ಲಿ ಮಳಿಗೆಗಳ ಮಾಲೀಕರಿಗೆ ಜಗದೀಶ್‌ ಎಚ್ಚರಿಕೆ, 15 ದಿನಗಳಲ್ಲಿ ಬಾಕಿ ಬಾಡಿಗೆ ಕಟ್ಟದಿದ್ದರೆ ಬೀಗ!
ಯಲಹಂಕ, ಆನೇಕಲ್ ತಾಲೂಕುಗಳು ಈಗ ಬೆಂಗಳೂರು ಜಲಮಂಡಳಿ ವ್ಯಾಪ್ತಿಗೆ, ಆದ್ರೆ ಸದ್ಯಕ್ಕೆ ಕಾವೇರಿ ನೀರಿಲ್ಲ