
ಮೈಸೂರು (ಮೇ.14): ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಎಸ್‌ಐಆರ್ ವಿರುದ್ಧ ಸುಗ್ರೀವಾಜ್ಞೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು. 2028ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಕೈ ಹಾಕಿದೆ.
ಮತದಾರರ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆಲ್ಲಲಾಗದ ಬಿಜೆಪಿ ನಾಯಕರು ಮತದಾರರನ್ನು ಕದಿಯುವ ಕೆಲಸ ಮಾಡುತ್ತಿದ್ದಾರೆ. ಹರಿಯಾಣದಲ್ಲಿ 65 ಲಕ್ಷ, ಬಿಹಾರದಲ್ಲಿ 85 ಲಕ್ಷ ಮತದಾರರನ್ನು ಕೈಬಿಟ್ಟು ಅಧಿಕಾರಕ್ಕೆ ಬಂದು ಈಗ ಪಶ್ಚಿಮ ಬಂಗಾಳದಲ್ಲಿ 92 ಲಕ್ಷ ಮತದಾರರನ್ನು ಕೈಬಿಟ್ಟು ಅಧಿಕಾರಕ್ಕೆ ಬಂದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ಈಗ ಕರ್ನಾಟಕದಲ್ಲಿ 2028ಕ್ಕೆ ನಡೆಯಲಿರುವ ಚುನಾವಣೆ ಮುಂದಿಟ್ಟುಕೊಂಡು ಮತದಾರರನ್ನು ಕದಿಯುವ ಕೆಲಸಕ್ಕೆ ಇಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಮಾತನ್ನು ನೋಡಿದರೆ ಮತದಾರರನ್ನು ಕೈ ಬಿಡುವ ಷಡ್ಯಂತ್ರ ನಡೆಯುತ್ತಿದೆ. ಕರ್ನಾಟಕದಲ್ಲಿ 5.5 ಕೋಟಿ ಮತದಾರರಲ್ಲಿ ಶೇ. 15 ರಷ್ಟು ಮತದಾರರನ್ನು ಬಿಡುತ್ತಿದ್ದು, ಅಂದಾಜು 83 ಲಕ್ಷ ಮತದಾರರನ್ನು ಕೈ ಬಿಡುವ ಕೆಲಸವಾಗಿದೆ ಎಂದರು.
ಚುನಾವಣಾ ಆಯೋಗ ಈ ಮತದಾರರನ್ನು ಡಿಲೀಟ್ ಮಾಡದೆ ಇದ್ದರೂ ಆಕ್ಷೇಪಣೆ ಕೇಳಿದ್ದೇವೆ ಎನ್ನುತ್ತಿದೆ. ಆದರೆ, ಆಯೋಗ ಇದನ್ನು ಕೈಬಿಡಲಿದೆ. ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 71 ಸಾವಿರ, ನರಸಿಂಹರಾಜ ಕ್ಷೇತ್ರದಲ್ಲಿ 60 ಸಾವಿರ ಮತದಾರರನ್ನು ಕೈಬಿಡಲಾಗುತ್ತಿದೆ. ಮುಸ್ಲಿಂ ಮತದಾರರು 45 ಸಾವಿರ ಸೇರಿದ್ದಾರೆ. ಮತದಾರರ ಪಟ್ಟಿಯಿಂದ ತೆಗೆದು ಚುನಾವಣೆಯಲ್ಲಿ ಲಾಭ ಮಾಡುವುದಕ್ಕೆ ಹೊರಟಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು.
ದೇಶದಲ್ಲಿ ತುರ್ತು ಆರ್ಥಿಕ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಒಂದು ವರ್ಷದ ಮಟ್ಟಿಗೆ ಚಿನ್ನ ಖರೀದಿಸದಂತೆ ಹೇಳಿದ್ದಾರೆ. ವಾಹನ ಬಿಟ್ಟು ಬಸ್, ರೈಲುಗಳಲ್ಲಿ ಓಡಾಡುವಂತೆ ಹೇಳಿರುವುದಕ್ಕೆ ಅಂಧಭಕ್ತರು ಸ್ವಾಗತಿಸಿದ್ದಾರೆ. ಅರ್ಥ ವ್ಯವಸ್ಥೆ ಹಾಳು ಮಾಡಿರುವುದನ್ನು ನೋಡಿದರೆ ಮುಂದೆ ದೊಡ್ಡ ಕಂಟಕವಾಗಲಿದೆ ಎಂದರು.
ಇದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ವಾಗತಿಸಿದ್ದಾರೆ. ಚಿನ್ನ ಖರೀದಿಸಬೇಡಿ ಎಂದ ಮೇಲೆ ಟಿ.ಎ. ಶರವಣರಿಗೆ ಮುಖವೇ ಇಲ್ಲದಂತಾಗಿದೆ. ಟಿ.ಎ. ಶರವಣ ಅವರೇ ಎಲ್ಲಿ ಹೋಗಿದ್ದೀರಾ? ನಿಮ್ಮ ಮೋದಿ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಮೈಸೂರು ಅಭಿವೃದ್ದಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸರ್ಕಾರದಿಂದ ಹತ್ತು ರೂಪಾಯಿ ತಂದಿಲ್ಲ. ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ರಾಜ್ಯ ಸರ್ಕಾರವೇ ಅನುದಾನ ನೀಡಿದೆ. ಎನ್‌ಎಚ್‌ಐಎ ನಿಂದ ಬೈಪಾಸ್ ರಸ್ತೆಗೆ ಅನುಮೋದನೆ ಕೊಡಿಸಿಲ್ಲ. ಪ್ರಸಾದ್ ಯೋಜನೆ, ಯೂನಿಟಿ ಮಾಲ್ ಯೋಜನೆಗೆ ತಡೆಯಾಜ್ಞೆ ತರಲಾಗಿದೆ. ಮೊದಲು ಕೇಂದ್ರದಿಂದ ನೀವು ಏನು ತಂದಿದ್ದೀರಾ ಎಂದು ಹೇಳಿ ಎಂದು ಪ್ರಶ್ನಿಸಿದರು?
ಬಿಜೆಪಿಯ ಬಹುತೇಕ ನಾಯಕರು ಜೋಕರ್ ಗಳಾಗಿದ್ದಾರೆ. ಆರ್. ಅಶೋಕ್ ನಂಬರ್ ಒನ್ ಜೋಕರ್, ಛಲವಾದಿ ನಾರಾಯಣಸ್ವಾಮಿ ನಂಬರ್ ಟು ಜೋಕರ್. ಈಗ ಮೊದಲನೇ ಸ್ಥಾನಕ್ಕೆ ಬರಲು ಕೇಂದ್ರ ಸಚಿವ ವಿ. ಸೋಮಣ್ಣ ಪೈಪೋಟಿ ನೀಡುತ್ತಿದ್ದಾರೆ. ಆರ್. ಅಶೋಕ್ ಅವರಂತಹ ಮೂರ್ಖ ಬೇರೆ ಯಾರಿಲ್ಲ ಎಂದು ಅವರು ಟೀಕಿಸಿದರು.