ಬಿರು ಬಿಸಿಲಿನ ಬೇಸಿಗೆಯಲ್ಲೂ ಹಾರಂಗಿಯಿಂದ ನೀರು ಬಿಡುಗಡೆ: ಕೊಡಗಿನ ರೈತರಿಂದ ಆಕ್ರೋಶ

Published : May 13, 2026, 11:21 PM IST
Harangi dam

ಸಾರಾಂಶ

ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಹಿಂದೆಂದು ಕಂಡು ಕೇಳರಿಯದಂತಹ ಸ್ಥಿತಿಯಲ್ಲಿ ಸುಡು ಬಿಸಿಲು ಹೊಡೆಯುತ್ತಿದೆ. ಈ ಬಿಸಿಲಿನ ತಾಪಕ್ಕೆ ಹಳ್ಳ ಕೊಳ್ಳಗಳು ಬತ್ತಿ ಹೋಗುತ್ತಿವೆ. ಅಷ್ಟೇ ಏಕೆ ಜಲಾಶಯಗಳ ನೀರು ಕೂಡ ಬಹುತೇಕ ತಳ ಸೇರುತ್ತಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮೇ.13): ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಹಿಂದೆಂದು ಕಂಡು ಕೇಳರಿಯದಂತಹ ಸ್ಥಿತಿಯಲ್ಲಿ ಸುಡು ಬಿಸಿಲು ಹೊಡೆಯುತ್ತಿದೆ. ಈ ಬಿಸಿಲಿನ ತಾಪಕ್ಕೆ ಹಳ್ಳ ಕೊಳ್ಳಗಳು ಬತ್ತಿ ಹೋಗುತ್ತಿವೆ. ಅಷ್ಟೇ ಏಕೆ ಜಲಾಶಯಗಳ ನೀರು ಕೂಡ ಬಹುತೇಕ ತಳ ಸೇರುತ್ತಿದೆ. ಇಷ್ಟೊಂದು ಬಿರುಬಿಸಿಲಿನ ಬೇಸಿಗೆಯಲ್ಲೂ ಕೊಡಗಿನ ಹಾರಂಗಿ ಜಲಾಶಯದಿಂದ ಅಧಿಕಾರಿಗಳು ನದಿಗೆ ನೀರು ಹರಿಸುತ್ತಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ಜನರು, ರೈತ ಮುಖಂಡರು ಆಕ್ರೋಶಗೊಳ್ಳುತ್ತಿದ್ದಾರೆ.

ಕುಶಾಲನಗರ ತಾಲ್ಲೂಕಿನಲ್ಲಿ ಇರುವ ಹಾರಂಗಿ ಜಲಾಶಯದಿಂದ ಕಳೆದ ನಾಲ್ಕು ದಿನಗಳಿಂದ ನದಿಗೆ ನಿತ್ಯ 500 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಇದರಿಂದ ಜಲಾಶಯ ಸಂಪೂರ್ಣ ಖಾಲಿಯಾಗುವ ಆತಂಕ ಎದುರಾಗಿದೆ. ಒಟ್ಟು 2859 ಅಡಿ (8.5 ಟಿಎಂಸಿ) ಸಾಮರ್ಥ್ಯದ ಜಲಾಶಯದಿಂದ ಸದ್ಯ ಜಲಾಶಯದಲ್ಲಿ ಕೇವಲ 2.03 ಟಿಎಂಸಿ ನೀರು ಇದೆ. ಅದರಲ್ಲಿ ಬಳಕೆಗೆ ಸಿಗುವುದೇ ಕೇವಲ 1 ಟಿಎಂಸಿ ನೀರು ಮಾತ್ರ. ಇನ್ನುಳಿದ 1 ಟಿಎಂಸಿ ನೀರು ಡೆಡ್ ಸ್ಟೋರೇಜ್. ಅರ್ಥಾತ್ ಈ ಡೆಡ್ ಸ್ಟೋರೇಜ್ ನೀರು ಬಳಕೆಗೆ ಸಿಗುವುದಿಲ್ಲ.

ಹೀಗಿದ್ದರೂ ಜಲಾಶಯದಿಂದ ನಿತ್ಯ 500 ಕ್ಯೂಸೆಕ್ ನೀರನ್ನು ಅಧಿಕಾರಿಗಳು ನದಿಗೆ ಹರಿಸುತ್ತಿದ್ದಾರೆ. ಇದೇ ರೀತಿ ನೀರು ಹರಿಸಿದರೆ ಜಲಾಶಯ ಸಂಪೂರ್ಣ ಖಾಲಿಯಾಗುವ ಆತಂಕ. ಒಂಂದು ವೇಳೆ ಜಲಾಶಯ ಸಂಪೂರ್ಣ ಖಾಲಿಯಾದರೆ ತಾಲ್ಲೂಕು ಕೇಂದ್ರ ಸೋಮವಾರಪೇಟೆ ಜನರಿಗೆ ಕುಡಿಯುವ ನೀರಿಗೂ ಆಹಾಕಾರ ಎದುರಾಗಲಿದೆ. ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಕೊಡಗಿನಲ್ಲಿ ಮಳೆ ಆರಂಭವಾಗುತ್ತದೆ.

ಆಹಾಕಾರ ಎದುರಾಗುವ ಆತಂಕ

ಒಂದು ವೇಳೆ ನಿರೀಕ್ಷೆ ಮತ್ತು ವಾಡಿಕೆಯಂತೆ ಜೂನ್ ಆರಂಭದಿಂದಲೇ ಮಳೆ ಬಾರದಿದ್ದಲ್ಲಿ ಕುಶಾಲನಗರ ಮತ್ತು ಸೋಮವಾರಪೇಟೆ ಭಾಗದ ಜನರಿಗೆ ಕುಡಿಯುವ ನೀರಿಗೂ ಆಹಾಕಾರ ಎದುರಾಗುವ ಆತಂಕ ಮೂಡಿದೆ. ಮತ್ತೊಂದೆಡೆ ಕುಶಾಲನಗರ ತಾಲ್ಲೂಕು ಭಾಗದ ಹತ್ತಾರು ಹಳ್ಳಿಗಳ ಜನ, ಜಾನುವಾರುಗಳಿಗೂ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಲಿದೆ. ಹೀಗಾಗಿ ಜಲಾಶಯದಿಂದ ನದಿಗೆ ನೀರು ಹರಿಸದಂತೆ ಜನರು, ರೈತ ಮುಖಂಡರು ಆಗ್ರಹಿಸಿದ್ದಾರೆ. ಕೂಡಲೇ ನದಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಕ್ರೋಶ ಹೊರಹಾಕಿದ್ದಾರೆ.

ಕೊಡಗಿನ ಭೂಮಿ, ಬೆಳೆಗಳನ್ನು ಹಾಳು ಮಾಡಿಕೊಂಡು ಜಲಾಶಯದಲ್ಲಿ ನೀರು ನಿಲ್ಲಿಸುತ್ತೇವೆ. ಆದರೆ ನಮಗೆ ಜಲಾಶಯದ ನೀರು ಉಪಯೋಗವೇ ಆಗುವುದಿಲ್ಲ. ಕನಿಷ್ಠ ಬೇಸಿಗೆ ಸಂದರ್ಭದಲ್ಲಾದರೂ ಜಲಾಶಯದ ನೀರು ನಮಗೆ ಸಿಗಲಿ ಎಂದರೆ ಹೇಗೆ. ಆದರೆ ಅಧಿಕಾರಿಗಳು ಪಿರಿಯಾಪಟ್ಟಣ, ಹುಣುಸೂರು, ಕೆ.ಆರ್ ನಗರ ಭಾಗದ ಜನರಿಗಾಗಿ ನೀರು ಬಿಟ್ಟಿದ್ದಾರೆ. ಮೈಸೂರು ಜಿಲ್ಲೆಯ ಜನರಿಗಾಗಿ ಇಲ್ಲಿ ನದಿಗೆ ನೀರು ಹರಿಸುತ್ತಿದ್ದಾರೆ. ಇದೇ ನೀರು ನಿಲ್ಲಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

ಕೊಡಗಿನ ತೋರ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’: ಎ.ಎಸ್.ಪೊನ್ನಣ್ಣ ಹೇಳೋದೇನು?
ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ: ನಳಿನ್ ಕುಮಾರ್ ಕಟೀಲ್