Lumpy Skin Disease: ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಬಂತು ಪರಿಹಾರ!

By Kannadaprabha News  |  First Published Oct 23, 2022, 12:16 PM IST
  • ಚರ್ಮಗಂಟು ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಬಂತು ಪರಿಹಾರ
  • ಜಿಲ್ಲೆಯ 351 ಜಾನುವಾರುಗಳ ಮಾಲೀಕರ ಖಾತೆಗೆ ಪರಿಹಾರ ಜಮಾ
  • ಜಿಲ್ಲೆಯಲ್ಲಿ ಈವರೆಗೆ 1080 ಜಾನುವಾರು ಲಂಪಿ ಸ್ಕಿನ್‌ಗೆ ಬಲಿ
  • ಸರ್ಕಾರದಿಂದ 89 ಲಕ್ಷ ರು. ಪರಿಹಾರ ಬಿಡುಗಡೆ

ನಾರಾಯಣ ಹೆಗಡೆ

ಹಾವೇರಿ (ಅ.23) : ಚರ್ಮ ಗಂಟು ರೋಗದಿಂದ ಮೃತಪಟ್ಟಜಾನುವಾರುಗಳಿಗೆ ಪರಿಹಾರ ಘೋಷಣೆ ಮಾಡಿದ ಕೇವಲ 15 ದಿನಗಳಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ 351 ರೈತರಿಗೆ . 89 ಲಕ್ಷ ಪರಿಹಾರ ಜಮಾ ಆಗಿದೆ. ಇದರ ಬೆನ್ನಲ್ಲೇ ಲಂಪಿ ಸ್ಕಿನ್‌ಗೆ ಜಿಲ್ಲೆಯಲ್ಲಿ ಬಲಿಯಾದ ಜಾನುವಾರುಗಳ ಸಂಖ್ಯೆ ಒಂದು ಸಾವಿರ ದಾಟಿದೆ.

Tap to resize

Latest Videos

undefined

Lumpy Skin Disease: ಚರ್ಮಗಂಟಿಗೆ ಹೆದರಿ ಹೈನುತ್ಪನ್ನ ಖರೀದಿಗೆ ಗ್ರಾಹಕ ಹಿಂದೇಟು..!

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಲಂಪಿ ಸ್ಕಿನ್‌ ಡಿಸೀಸ್‌ (ಎಲ್‌ಎಸ್‌ಡಿ) ವ್ಯಾಪಿಸುತ್ತಲೇ ಇದೆ. ಹಿಂಗಾರು ಹಂಗಾಮು ಆರಂಭದಲ್ಲೇ ಜಾನುವಾರುಗಳಿಗೆ ತಗಲಿರುವ ಈ ಕಾಯಿಲೆಯಿಂದ ರೈತರು ಕಂಗಾಲಾಗಿದ್ದಾರೆ. 10 ದಿನಗಳ ಹಿಂದೆ ಚರ್ಮ ಗಂಟು ರೋಗದಿಂದ ಮೃತಪಟ್ಟಜಾನುವಾರುಗಳ ಸಂಖ್ಯೆ 700ರಷ್ಟಿದ್ದದ್ದು ಈಗ 1080ಕ್ಕೆ ತಲುಪಿದೆ. ನಿತ್ಯವೂ ಹತ್ತಾರು ಜಾನುವಾರುಗಳು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿವೆ. ನೆರೆ, ಅತಿವೃಷ್ಟಿಯಿಂದ ಕಂಗೆಟ್ಟಿರುವ ರೈತರಿಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ರಾಜ್ಯದಲ್ಲೇ ಅತಿಹೆಚ್ಚು ಜಾನುವಾರುಗಳು ಜಿಲ್ಲೆಯಲ್ಲಿ ಎಲ್‌ಎಸ್‌ಡಿಗೆ ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪರಿಹಾರ ಬಿಡುಗಡೆ

ಕಳೆದ ಸೆ. 29ರಂದು ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಮೆಗಾ ಡೈರಿಗೆ ಶಂಕು ಸ್ಥಾಪನೆ ನೆರವೇರಿಸಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಮ ಗಂಟು ರೋಗದಿಂದ ಮೃತಪಟ್ಟಜಾನುವಾರುಗಳಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಎತ್ತಿಗೆ . 30 ಸಾವಿರ, ಆಕಳಿಗೆ . 20 ಸಾವಿರ ಮತ್ತು ಕರು ಸತ್ತರೆ . 5 ಸಾವಿರ ಪರಿಹಾರ ನೀಡಲಾಗುತ್ತಿದೆ. ಕೇವಲ 15 ದಿನಗಳಲ್ಲೇ ಸರ್ಕಾರದಿಂದ ಜಿಲ್ಲೆಗೆ . 89 ಲಕ್ಷ ಪರಿಹಾರ ಬಿಡುಗಡೆಯಾಗಿದೆ. ಜಾನುವಾರುಗಳನ್ನು ಕಳೆದುಕೊಂಡಿರುವ 351 ರೈತರಿಗೆ ಪರಿಹಾರವನ್ನು ನೇರವಾಗಿ ಜಮಾ ಮಾಡುವ ಪ್ರಕ್ರಿಯೆ ಶುರುವಾಗಿದೆ. ಪಶು ವೈದ್ಯಕೀಯ ಇಲಾಖೆಯಿಂದ ತುರ್ತಾಗಿ ಪರಿಹಾರ ನೀಡುವ ಕಾರ್ಯ ನಡೆದಿದೆ.

1080 ಜಾನುವಾರು ಸಾವು

ಜಿಲ್ಲೆಯಲ್ಲಿ ಇದುವರೆಗೆ 13 ಸಾವಿರಕ್ಕೂ ಅಧಿಕ ಜಾನುವಾರುಗಳಲ್ಲಿ ಲಂಪಿ ಸ್ಕಿನ್‌ ರೋಗ ಕಾಣಿಸಿಕೊಂಡಿದ್ದು, ಸುಮಾರು 7 ಸಾವಿರ ಜಾನುವಾರುಗಳು ಚೇತರಿಸಿಕೊಂಡಿವೆ. ಇನ್ನೂ ಐದಾರು ಸಾವಿರ ಜಾನುವಾರುಗಳು ಕಾಯಿಲೆಯಿಂದ ಬಳಲುತ್ತಿವೆ. ನಿತ್ಯವೂ ಹತ್ತಾರು ಜಾನುವಾರುಗಳು ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಲೇ ಇವೆ. ಇದುವರೆಗೆ 1080 ಜಾನುವಾರುಗಳು ಮೃತಪಟ್ಟಿವೆ. ಮೃತ ಜಾನುವಾರುಗಳಿಗೆ ಪರಿಹಾರ ನೀಡಲು . 2.20 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಜಿಲ್ಲೆಯಿಂದ ಪ್ರಸ್ತಾಪನೆ ಸಲ್ಲಿಕೆಯಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ 89 ಲಕ್ಷ ರು. ಬಿಡುಗಡೆಯಾಗಿದೆ.

ಎಲ್ಲಿ? ಎಷ್ಟುಪರಿಹಾರ?

ಲಂಪಿ ಸ್ಕಿನ್‌ ಕಾಯಿಲೆಯಿಂದ ಮೃತಪಟ್ಟಜಾನುವಾರುಗಳಿಗೆ ಸಂಬಂಧಿಸಿದಂತೆ ಹಾವೇರಿ ತಾಲೂಕಿನ 133 ರೈತರಿಗೆ . 35.40 ಲಕ್ಷ, ಬ್ಯಾಡಗಿ ತಾಲೂಕಿನ 96 ರೈತರಿಗೆ . 19.7 ಲಕ್ಷ, ಹಾನಗಲ್ಲ ತಾಲೂಕಿನ 15 ರೈತರಿಗೆ . 4.10 ಲಕ್ಷ, ಹಿರೇಕೆರೂರು ತಾಲೂಕಿನ 10 ರೈತರಿಗೆ . 2.45 ಲಕ್ಷ, ರಟ್ಟೀಹಳ್ಳಿ ತಾಲೂಕಿನ 4 ರೈತರಿಗೆ . 1.10 ಲಕ್ಷ, ಶಿಗ್ಗಾಂವಿಯಲ್ಲಿ 10 ರೈತರಿಗೆ . 2.60 ಲಕ್ಷ, ರಾಣಿಬೆನ್ನೂರಿನ 35 ರೈತರಿಗೆ . 9.05 ಲಕ್ಷ, ಸವಣೂರು ತಾಲೂಕಿನ 43 ರೈತರಿಗೆ . 11.5 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗಿದೆ.

ಕೃಷಿ ಕಾರ್ಯಕ್ಕೂ ಹಿನ್ನಡೆ

ಚರ್ಮ ಗಂಟು ಕಾಯಿಲೆಯಿಂದ ಜಾನುವಾರುಗಳು ಬಳಲುತ್ತಿರುವುದರಿಂದ ಹಿಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೂ ಹಿನ್ನಡೆಯಾಗುತ್ತಿದೆ. ಜಿಲ್ಲಾದ್ಯಂತ ಜಾನುವಾರು ಸಂತೆ, ದನದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಎತ್ತುಗಳ ಖರೀದಿ ಸಾಧ್ಯವಾಗುತ್ತಿಲ್ಲ. ಜತೆಗೆ, ಅನೇಕ ಉಳುಮೆ ಎತ್ತುಗಳು ಚರ್ಮ ಗಂಟು ಕಾಯಿಲೆಯಿಂದ ಬಳಲುತ್ತಿವೆ. ಮೇವು, ನೀರು ಸೇವಿಸದೇ ನಿತ್ರಾಣಗೊಂಡಿವೆ. ಆಕಳುಗಳು ಹಾಲು ಕೊಡುವುದನ್ನು ನಿಲ್ಲಿಸಿವೆ. ಇದರಿಂದ ಹೈನೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ನಿರಂತರ ಮಳೆಯಿಂದ ಕಂಗೆಟ್ಟಿರುವ ಜಿಲ್ಲೆಯ ರೈತರು ಮುಂಗಾರು ಹಂಗಾಮಿನ ಎಲ್ಲ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಹಿಂಗಾರು ಹಂಗಾಮು ಶುರುವಾದರೂ ಬಿತ್ತನೆಗೆ ಸಾಧ್ಯವಾಗುತ್ತಿಲ್ಲ. ಮೇಲಾಗಿ ಲಂಪಿ ಸ್ಕಿನ್‌ ರೋಗದಿಂದ ಜಾನುವಾರುಗಳು ಸಾಯುತ್ತಿರುವುದರಿಂದ ರೈತರ ಆರ್ಥಿಕತೆಯೇ ಬುಡಮೇಲಾಗಿದೆ. ಲಕ್ಷಾಂತರ ರು. ಬೆಲೆ ಬಾಳುವ ಉಳುಮೆ ಎತ್ತುಗಳನ್ನು ಕಳೆದುಕೊಂಡು ಅನ್ನದಾತ ಕಣ್ಣೀರು ಹಾಕುವಂತಾಗಿದೆ.

ಜಾನುವಾರುಗಳಿಗೆ Lumpy skin disease; ಹೈನೋದ್ಯಮಕ್ಕೆ ಪೆಟ್ಟು

ಚರ್ಮ ಗಂಟು ರೋಗದಿಂದ ಮೃತಪಡುತ್ತಿರುವ ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದಿಂದ ಈಗಾಗಲೇ ಪರಿಹಾರ ಬಿಡುಗಡೆಯಾಗಿದ್ದು, ರೈತರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ನಡೆದಿದೆ.

-ಸತೀಶ ಸಂತಿ, ಪಶು ಇಲಾಖೆ ಉಪನಿರ್ದೇಶಕರು

click me!