ಖಾಸಗಿ ಹೋಟೆಲ್‌ನಲ್ಲಿ ಸಿಲೆಂಡರ್‌ನಲ್ಲಿ ಕಾಣಿಸಿಕೊಂಡ ಬೆಂಕಿ| ನೀರಿನ ಮೂಲಕ ಬೆಂಕಿ ನಂದಿಸಿದ ಸಾರ್ವಜನಿಕರು| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ ಸಮೀಪದ ಮುದೇನೂರು ಗ್ರಾಮದಲ್ಲಿ ನಡೆದ ಘಟನೆ| ಅನಿಲ ಸೋರಿಕೆಯಿಂದ ಯಾವುದೇ ಆಸ್ತಿ, ಪಾಸ್ತಿಗಳಿಗೆ ಹಾಗೂ ಜನರ ಜೀವಕ್ಕೆ ಹಾನಿಯಾಗಿಲ್ಲ|
ದೋಟಿಹಾಳ(ಆ.15): ಸಮೀಪದ ಮುದೇನೂರ ಗ್ರಾಮದ ಹೃದಯ ಭಾಗದಲ್ಲಿನ ಕುಡ್ಲೂರು ಮಖ್ಯರಸ್ತೆ ಬದಿಯ ಹೋಟೆಲ್ ಒಂದರಲ್ಲಿ ಆಕಸ್ಮಿಕವಾಗಿ ಅಡುಗೆ ಅನಿಲ ಹೊರಸೂಸುವಿಕೆಯಿಂದ ಹತ್ತಿದ್ದ ಬೆಂಕಿಯನ್ನು ಸಾರ್ವಜನಿಕರು ನಂದಿಸಿದರು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಮುಂದೆ ನಡೆಯುವ ಬಾರಿ ದುರಂತ ತಪ್ಪಿದೆ.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಹೋಟೆಲ್ ಮಾಲೀಕರು ಉಪಾಹಾರ ತಯಾರಿಸಿದ್ದಾರೆ. ನಂತರ ಗ್ಯಾಸ್ ಬಂದ್ ಮಾಡಲಾಗಿತ್ತು. ಆಕಸ್ಮಿಕವಾಗಿ ಸಿಲೆಂಡರ್‌ನ ಮುಚ್ಚಳಿಕೆಯಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಹತ್ತಿಕೊಂಡಿದೆ. ಹೋಟೆಲ್ ಮಾಲೀಕ ಜಾಣತನದಿಂದ ಗ್ಯಾಸ್ ಸಿಲೆಂಡರ್, ಎರಡು ಒಲೆಗಳನ್ನು ಜಾಗೃತಿಯಿಂದ ಕಿತ್ತು ರಸ್ತೆಗೆ ತಂದಿದ್ದಾನೆ. ರಸ್ತೆ ಮಧ್ಯದಲ್ಲಿ ಬೆಂಕಿ ಹೆಚ್ಚಾಗುತ್ತಿದ್ದಂತೆ ಅಲ್ಲಿರುವ ಸಾರ್ವಜನಿಕರು ಸಿಲೆಂಡರ್ ಟ್ಯಾಂಕ್ ಮೇಲೆ ನೀರಿನಿಂದ ತೋಯಿಸಿದ ಚೀಲಗಳನ್ನು ಹಾಕಿದರು ಅಲ್ಲಿಯೇ ಹೋಟೆಲ್ ಪಕ್ಕದಲ್ಲಿರುವ ಅಮರೇಗೌಡ ಪಾಟೀಲ್ ಅವರ ಮನೆಯ ನೀರಿನ ಮೋಟರ್ ಸಹಾಯದೊಂದಿಗೆ ಹತ್ತಿ ಉರಿಯುತ್ತಿರುವ ಬೆಂಕಿಗೆ ನೀರು ಸಿಂಪರಣೆ ಮಾಡಿದರು.
undefined
ಕೊಪ್ಪಳ: ಕೃಷಿ ಸಚಿವರ ಜಿಲ್ಲೆಯಲ್ಲೇ ಯೂರಿಯಾಕ್ಕಾಗಿ ಪರದಾಟ..!
ಸುಮಾರು 20 ನಿಮಿಷಗಳ ಕಾಲ ಬಿಟ್ಟು ಬಿಡದಂತೆ ಬೆಂಕಿ ಧಗ ಧಗ ಹತ್ತಿ ಉರಿಯುತ್ತಿತ್ತು. ಮೋಟರ್ ಪೈಪ್ ಮೂಲಕ ನೀರು ಸಿಂಪರಣೆ ಮಾಡಿದರು ಬಳಿಕ ಗ್ಯಾಸ್‌ನ ಟ್ಯಾಂಕಿನಲ್ಲಿರುವ ಅನಿಲ ಖಾಲಿಯಾಗಿದೆ. ದೊಡ್ಡನಗೌಡ ಹಳೇಗೌಡರ, ಅಮರೇಗೌಡ ಪಾಟೀಲ್ ಸೇರಿದಂತೆ ಇತರರ ಸಮಯ ಪ್ರಜ್ಞೆಯಿಂದ ಮುಂದೆ ನಡೆಯುವ ದೊಡ್ಡ ದುರಂತವೆ ತಪ್ಪಿದೆ. ಈ ಹೋಟೆಲ್ ಸುತ್ತಲೂ ಅಂದಾಜು 150ಕ್ಕೂ ಹೆಚ್ಚು, ಮನೆಗಳು ಇದ್ದವು, ಕೆಲ ಹೊತ್ತು ಇಲ್ಲಿನ ಜನರು ಭಯ ಭೀತರಾಗಿದ್ದರು.
ಮುದೇನೂರ ಗ್ರಾಮದ ವ್ಯಕ್ತಿಯೊಬ್ಬರು ಅಗ್ನಿಶಾಮಕ ದಳದವರಿಗೆ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮೂಲಕ ಅಗ್ನಿಶಾಮಕ ದಳದ ಅಧಿಕಾರಿ ರಾಜು ಪಿ. ಅವರಿಗೆ ದೃಶ್ಯ ಮುಟ್ಟಿಸಿದರು. ಅಗ್ನಿಶಾಮಕ ದಳದ ಅಧಿಕಾರಿಗಳು ಜನರಿಗೆ ಧೈರ್ಯ ನೀಡುತ್ತ, ಬೆಂಕಿ ನಂದಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳ ಮಾಹಿತಿಯಿಂದ ಬೆಂಕಿ ಬೇಗ ನಂದಲು ಸಾಧ್ಯವಾಯಿತು. ಈ ಅನಿಲ ಸೋರಿಕೆಯಿಂದ ಯಾವುದೇ ಆಸ್ತಿ, ಪಾಸ್ತಿಗಳಿಗೆ ಹಾಗೂ ಜನರ ಜೀವಕ್ಕೆ ಹಾನಿಯಾಗಿಲ್ಲ.