ಕೊಪ್ಪಳ(ಆ.15): ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರ ಜಿಲ್ಲಾ ಉಸ್ತುವಾರಿ ಇರುವ ಕೊಪ್ಪಳ ಜಿಲ್ಲೆಯಲ್ಲಿಯೇ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರಿತಪಿಸುತ್ತಿದ್ದಾರೆ. ರಸಗೊಬ್ಬರ ಪಡೆಯಲು ಬಂದಿದ್ದ ರೈತರು ಪರದಾಡುವಂತೆ ಆಗಿದೆ.

ಯೂರಿಯಾ ಕೊರತೆ ವಿಪರೀತ ಇದ್ದು, ಇದನ್ನು ಭರ್ತಿ ಮಾಡುವ ಪ್ರಯತ್ನ ನಡೆಯುತ್ತಲೇ ಇಲ್ಲ. 4-5 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಅಗತ್ಯವಿದ್ದರೂ ಸಾವಿರ ಮೆಟ್ರಿಕ್‌ ಟನ್‌ ಸಹ ಬಂದಿಲ್ಲ. ಹೀಗಾಗಿ, ರೈತರು ಟಿಎಪಿಎಂಸಿಯ ಮುಂದೆ ಗೊಬ್ಬರಕ್ಕಾಗಿ ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು. ಕಳೆದೆರಡು ದಿನಗಳಿಂದ ಟಿಎಪಿಎಂಸಿ ಮತ್ತು ಸಹಕಾರಿ ಸಂಘಗಳಲ್ಲಿ ಯೂರಿಯಾ ವಿತರಣೆ ಮಾಡಲಾಗುತ್ತದೆಯಾದರೂ ಇನ್ನಿಲ್ಲದ ಷರತ್ತು ವಿಧಿಸಲಾಗಿದೆ.

ಎರಡು ಚೀಲ ಯೂರಿಯಾ ಗೊಬ್ಬರಕ್ಕೆ 1 ಚೀಲ ಪೊಟ್ಯಾಶ್‌ ಗೊಬ್ಬರವನ್ನು ಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ರೈತರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ನಮಗೆ ಪೊಟ್ಯಾಶ್‌ ಅಗತ್ಯ ಇಲ್ಲದಿದ್ದರೂ ಕೊಳ್ಳಬೇಕಾದ ಅನಿವಾರ್ಯತೆಯನ್ನು ಗೊಬ್ಬರ ಮಾರಾಟಗಾರರು ಸೃಷ್ಟಿಸುತ್ತಿದ್ದಾರೆ ಎನ್ನುವುದು ರೈತರ ಅಂಬೋಣ.

ಲಕ್ಷ್ಮೇಶ್ವರ: ಸುರಿವ ಮಳೇಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ..!

ಶಿಸ್ತುಬದ್ಧವಾಗಿ ಹಂಚುತ್ತಿಲ್ಲ:

ರೈತರಿಗೆ ಬಂದಿರುವ ಯೂರಿಯಾ ರಸಗೊಬ್ಬರವನ್ನು ಶಿಸ್ತುಬದ್ಧವಾಗಿ ಹಂಚಿಕೆ ಮಾಡುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಅಗತ್ಯವಿದೆಯೋ ಇಲ್ಲವೋ ಎನ್ನುವುದನ್ನು ನೋಡುವುದೇ ಇಲ್ಲ. ಆಧಾರ ಕಾರ್ಡ್‌ನ ಮೇಲೆ ಯೂರಿಯಾ ರಸಗೊಬ್ಬರದ ಪ್ರಮಾಣ ನಿಗದಿ ಮಾಡಲಾಗುತ್ತಿದೆ. ಹೀಗಾಗಿಯೇ ಸಮಸ್ಯೆಯಾಗುತ್ತಿದೆ.

ದಲ್ಲಾಳಿಗಳು ಅವರಿವರ ಆಧಾರ ಕಾರ್ಡ್‌ ಸಂಗ್ರಹ ಮಾಡಿ, ಯೂರಿಯಾ ರಸಗೊಬ್ಬರ ಖರೀದಿ ಮಾಡುತ್ತಾರೆ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಇರುವ ರಸಗೊಬ್ಬರ ಅಂಗಡಿಯವರು ರೈತರ ಹೆಸರಿನಲ್ಲಿ ಖರೀದಿ ಮಾಡಿ, ಸಂಗ್ರಹಿಸಿಕೊಂಡು ಮಾರುತ್ತಿದ್ದಾರೆ ಎನ್ನುವ ಆರೋಪವೂ ಇದ್ದು, ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ, ಕ್ರಮಕೈಗೊಳ್ಳಬೇಕಾಗಿದೆ.

ಷರತ್ತುಗಳೇನು?:

ಯೂರಿಯಾ ರಸಗೊಬ್ಬರ ಬೇಕು ಎಂದರೆ ಪೋಟ್ಯಾಶ್‌ ಖರೀದಿ ಮಾಡಬೇಕು ಮತ್ತು ಜೊತೆಗೆ ರೈತರಿಗೆ ಅಗತ್ಯವಿಲ್ಲದಿದ್ದರೂ ನೀಡುವ ಟಾನಿಕ್‌ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ಯೂರಿಯಾ ರಸಗೊಬ್ಬರದ ದರವನ್ನು ಹೆಚ್ಚೇನೂ ಮಾಡುವುದಿಲ್ಲವಾದರೂ ಅದರ ಜೊತೆಗೆ ಮಾರಾಟ ಮಾಡುವ ಟಾನಿಕ್‌ ದರ ಬೇಕಾಬಿಟ್ಟಿಹಾಕುತ್ತಿದ್ದಾರೆ ಎನ್ನುವುದು ರೈತರ ವಾದ. ಒಂದು ಚೀಲ ಯೂರಿಯಾಕ್ಕೆ .360 ಬೆಲೆ ಇದೆ. ಇನ್ನು ಒಂದು ಚೀಲ ಪೊಟ್ಯಾಶ್‌ಗೆ . 1160 ರಿಂದ 1250ರ ವರೆಗೆ ಬೆಲೆಯಿದೆ. ಒಬ್ಬ ರೈತ ಯೂರಿಯಾ ಖರೀದಿಸಬೇಕೆಂದರೆ ಅದರೊಂದಿಗೆ ಪೊಟ್ಯಾಶ್‌ ಖರೀದಿಸುವುದು ಅನಿವಾರ್ಯವಾಗಿದೆ. ನಾಲ್ಕಾರು ನೂರು ರುಪಾಯಿಗೆ ಸಿಗುವುದು ಸಾವಿರ ರುಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ವಸಿ ನೋಡಿ ಇಲ್ಲಿ:

ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಆ. 15 ರಂದು ಕೊಪ್ಪಳಕ್ಕೆ ಆಗಮಿಸಿ, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇವಲ ಕಾರ್ಯಕ್ರಮಕ್ಕೆ ಬಂದು ಹೋದರೆ ಆಗದು, ರೈತರ ಸಮಸ್ಯೆಯತ್ತವೂ ಗಮನ ಹರಿಸಬೇಕಾಗಿದೆ. ಯೂರಿಯಾ ಸಮಸ್ಯೆಯ ಕುರಿತು ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳುವರೇ ಎನ್ನುವುದು ರೈತರ ಪ್ರಶ್ನೆಯಾಗಿದೆ.

ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾರುಕಟ್ಟೆಯಲ್ಲಿ ಇಂಥ ಷರತ್ತುಬದ್ಧ ಮಾರಾಟಕ್ಕೆ ಕಡಿವಾಣ ಹಾಕಬೇಕು. ಬೇಡವಾಗಿರುವುದನ್ನು ಯೂರಿಯಾ ರಸಗೊಬ್ಬರದ ಜೊತೆ ಸೇರಿಸಿ ಮಾರಾಟ ಮಾಡುವುದು ಕಾನೂನು ಪ್ರಕಾರ ತಪ್ಪು ಎನ್ನುವುದು ಗೊತ್ತಿದ್ದರೂ ಅಧಿಕಾರಿಗಳು ಯಾಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ರೈತರು ಕಿಡಿಕಾರುತ್ತಾರೆ.

ಯೂರಿಯಾ ರಸಗೊಬ್ಬರ ಸಮಸ್ಯೆ ಇದ್ದರೂ ರೈತರು ದುಬಾರಿ ಬೆಲೆ ನೀಡಿ ಖರೀದಿಸುತ್ತಿದ್ದಾರೆ. ಹೀಗೆ ಮಾಡದೆ ಹೋರಾಟಕ್ಕೆ ಮುಂದಾಗಬೇಕು. ಅಂದಾಗಲೇ ಅವರು ಎಚ್ಚರವಾಗುತ್ತಾರೆ ಎಂದು ಕೊಪ್ಪಳ ರೈತರ ಸಂಘದ ಅಧ್ಯಕ್ಷ ಹನುಮಂತಪ್ಪ ಹೊಳಿಯಾಚೆ ಅವರು ತಿಳಿಸಿದ್ದಾರೆ.