ವ್ಯಕ್ತಿಯೋರ್ವ ತನ್ನ ಮನೆಗೆ ಬಂದ ಗೆಳತಿಯನ್ನು ಹತ್ಯೆ ಮಾಡಿ ತಾನೂ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮುನಿಸೇ ಈ ಘಟನೆಗೆ ಕಾರಣವಾಗಿದೆ.
ಬೆಂಗಳೂರು (ಏ.06): ಬಂಡೆಪಾಳ್ಯದ ಸೋಮಸಂದ್ರಪಾಳ್ಯದಲ್ಲಿ ಪ್ರೇಯಸಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ಪ್ರಿಯಕರ ತಾನೂ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ 17 ವರ್ಷದ ಬಾಲಕಿ ಹತ್ಯೆಯಾದವಳು. ಕೊಲೆ ಆರೋಪಿ ರಾಜು (25) ಆತ್ಮಹತ್ಯೆಗೆ ಯತ್ನಿಸಿದವನು.
ರಾಜು ಫುಡ್ ಡೆಲಿವರಿ ಬಾಯ್ ಆಗಿದ್ದು, ಸೊಮಸಂದ್ರಪಾಳ್ಯದಲ್ಲಿ ಬಾಡಿಗೆ ರೂಂನಲ್ಲಿ ವಾಸಿಸುತ್ತಿದ್ದ. ಈತನ ರೂಂ ಸಮೀಪದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಬಾಲಕಿ ವಾಸವಿದ್ದಳು. ಕಳೆದ ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಪ್ರೇಯಸಿಯ ಮೇಲೆ ರಾಜು ಮುನಿಸಿಕೊಂಡಿದ್ದ. ಏ.3ರಂದು ಕಾಲೇಜು ಮುಗಿಸಿಕೊಂಡು ಸಹಪಾಠಿಗಳ ಜತೆ ಸಂಜೆ ಸೋಮಸಂದ್ರ ವೃತ್ತದವರೆಗೆ ಬಂದಿದ್ದಳು. ನಂತರ ಮನೆಗೆ ವಾಪಾಸ್ಸಾಗದೇ ರಾಜು ರೂಂಗೆ ಹೋಗಿದ್ದಾಳೆ ಎನ್ನಲಾಗುತ್ತಿದೆ. ಆ ವೇಳೆ ರಾಜು ಹಾಗೂ ಯುವತಿಯ ನಡುವೆ ಜಗಳ ನಡೆದಿದ್ದು, ಆಕ್ರೋಶಗೊಂಡ ರಾಜು ಯುವತಿಯ ಕತ್ತು ಬಿಗಿದು ಕೊಲೆ ಮಾಡಿರುವ ಸಾಧ್ಯತೆ ಇದೆ.
ಇತ್ತ ಕಾಲೇಜಿಗೆ ತೆರಳಿದ ಮಗಳು ಮನೆಗೆ ವಾಪಸ್ಸಾಗದೇ ಇದ್ದ ಹಿನ್ನೆಲೆಯಲ್ಲಿ ಏ.3ರಂದು ರಾತ್ರಿ ಯುವತಿಯ ಪಾಲಕರು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರು. ದೂರಿನಲ್ಲಿ ರಾಜು ಜತೆ ತೆರಳಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದರು.
ಮಧ್ಯವರ್ತಿಗೆ 3 ಲಕ್ಷ ಕೊಟ್ಟು ಮದುವೆಯಾದ.. 13 ದಿನಕ್ಕೆ ಹೆಂಡತಿ ಎಂತಾ ಕಿತಾಪತಿ!
ಆತ್ಮಹತ್ಯೆಗೆ ಯತ್ನ: ಪ್ರೇಯಸಿ ಹತ್ಯೆ ಮಾಡಿದ ಬಳಿಕ ಭಾನುವಾರ ಬೆಳಗ್ಗೆ ರಾಜು ಮಲ್ಲೇಶ್ವರದಿಂದ ಯಶವಂತಪುರಕ್ಕೆ ತೆರಳುವ ರೈಲಿನಲ್ಲಿ ಪ್ರಯಾಣಿಸಿ ಮಾರ್ಗ ಮಧ್ಯೆ ಯಶವಂತಪುರ ಬಳಿ ಚಲಿಸುತ್ತಿರುವ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜುವನ್ನು ಸ್ಥಳೀಯರು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ರಾಜುಗೆ ಪ್ರಜ್ಞೆ ಬಂದ ಬಳಿಕ ತನ್ನ ರೂಂನಲ್ಲಿ ಬಾಲಕಿ ಮೃತಪಟ್ಟಿರುವ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದ.
ವೈದ್ಯರು ಪೊಲೀಸರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದರು. ಈ ಮಾಹಿತಿ ಆಧರಿಸಿ ಬಂಡೆಪಾಳ್ಯ ಪೊಲೀಸರು ಸೋಮಸಂದ್ರದಲ್ಲಿರುವ ರಾಜುವಿನ ರೂಂಗೆ ಹೋಗಿ ಪರಿಶೀಲಿಸಿದಾಗ ಅನುಮಾನಾಸ್ಪದ ರೀತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆಕೆಯ ಕತ್ತಿನಲ್ಲಿ ಯಾವುದೋ ಹಗ್ಗದಂತಹ ವಸ್ತುವಿನಿಂದ ಬಿಗಿದ ಕಲೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಕೊಲೆ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಚೇತರಿಸಿಕೊಂಡು ಹೇಳಿಕೆ ನೀಡಿದ ಬಳಿಕ ಯುವತಿಯ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.