ತನ್ನನ್ನು ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಆಟೋ ಚಾಲಕ ಒತ್ತಾಯಿಸುತ್ತಿದ್ದ. ಆದರೆ ಆಕೆ ಒಪ್ಪದಿದ್ದಾಗ ಆಕೆಯನ್ನು ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಮೂಡಿಗೆರೆ [ಫೆ.07]: ಇಲ್ಲಿನ ಡಿಎಸ್‌ಬಿಜಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ರಶ್ಮಿ (19) ಅವರನ್ನು ಆಟೋ ಚಾಲಕ ಕೊಲೆ ಮಾಡಿದ್ದಾನೆ ಎಂದು ವಿದ್ಯಾರ್ಥಿನಿಯ ತಾಯಿ ಶೈಲಾ ಮಂಗಳವಾರ ರಾತ್ರಿ 8.30 ಗಂಟೆಗೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಬಾನಳ್ಳಿಯ ಆಟೋ ಚಾಲಕ ಚೇತನ್ ಆರೋಪಿಯಾಗಿದ್ದು, ಗ್ರಾಮದ ರಮೇಶ್ ಮತ್ತು ಶೈಲಾ ದಂಪತಿ ಪುತ್ರಿ ರಶ್ಮಿಯನ್ನು ಪ್ರೀತಿಸುವಂತೆ ಕಳೆದ ಕೆಲ ತಿಂಗಳಿಂದ ಪೀಡಿಸುತ್ತಿದ್ದನು. ಇದಕ್ಕೆ ರಶ್ಮಿ ನಿರಾಕರಿಸಿದ್ದಾಳೆ. ಪ್ರತಿದಿನವೂ ಆತನ ಉಪಟಳ ಹೆಚ್ಚಾಗಿದ್ದರಿಂದ 6 ತಿಂಗಳ ಹಿಂದೆ ಬಣಕಲ್ ಪೊಲೀಸರಿಗೆ ಚೇತನ್ ವಿರುದ್ಧ ದೂರು ನೀಡಿದ್ದರು. ಪೊಲೀಸರು ಚೇತನ್‌ಗೆ ಎಚ್ಚರಿಕೆಯನ್ನೂ ಸಹ ನೀಡಿದ್ದರು. ಆದರೂ ಆರೋಪಿ ಚೇತನ್ ತನ್ನ ಹಳೆ ಚಾಳಿ ಮುಂದುವರಿಸಿದ್ದ.
ಮಂಗಳವಾರ ಎಂದಿನಂತೆ ಕಾಲೇಜಿಗೆ ತೆರಳಿದ್ದ ರಶ್ಮಿ ಮಧ್ಯಾಹ್ನ 1.30 ಗಂಟೆಗೆ ಕಾಲೇಜು ಮುಗಿಸಿ ವಾಪಾಸು ಮನೆಗೆ ತೆರಳಲು ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗತ್ತಿದ್ದರು. ಆಗ, ಚೇತನ್ ವಿದ್ಯಾರ್ಥಿನಿ ರಶ್ಮಿ ಅವರನ್ನು ತನ್ನ ಆಟೋದಲ್ಲಿ ಬಲವಂತದಿಂದ ಹತ್ತಿಸಿಕೊಂಡು, ಲೋಕವಳ್ಳಿ ರಸ್ತೆ ಮೂಲಕ ಸಾಗಿದ್ದಾನೆ. ಲೋಕವಳ್ಳಿ ಮುಂದೆ ಬಸವನಹಳ್ಳಿ ಬಳಿ ಚಲಿಸುವ ಆಟೋದಿಂದಲೇ ವಿದ್ಯಾರ್ಥಿನಿಯನ್ನು ಹೊರದೂಡಿದ್ದಾನೆ ಎಂದು ಹೇಳಲಾಗಿದೆ.
ರಶ್ಮಿಯು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರಿಂದ ಕೂಡಲೇ ಪಟ್ಟಣದ ಎಂಜಿಎಂ ಆಸ್ಪತ್ರೆಗೆ ಸಾಗಿಸಿದ್ದ. ಪ್ರಾಥಮಿಕ ಚಿಕಿತ್ಸೆ ಕಲ್ಪಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ರಶ್ಮಿ ಮೃತಪಟ್ಟಿದ್ದರು. ಆರಂಭದಲ್ಲಿ ವಿದ್ಯಾರ್ಥಿನಿ ಆಟೋದಿಂದ ಬಿದ್ದು ಸಾವನಪ್ಪಿದ್ದಾಳೆ ಎಂದು ಆರೋಪಿ ಚೇತನ್ ಕಥೆ ಕಟ್ಟಿನಂಬಿಸಿದ್ದ. ಆದರೆ ಪೊಲೀಸರು ಸತ್ಯಾಸತ್ಯತೆ ತಿಳಿಯಲು ತನಿಖೆ ಕೈಗೊಂಡಿದ್ದರು.
ಮಂಗಳವಾರ ರಾತ್ರಿ ರಶ್ಮಿ ತಾಯಿ ಶೈಲಾ ಮೂಡಿಗೆರೆ ಪೊಲೀಸ್ ಠಾಣೆಗೆ ಆಗಮಿಸಿ ಈ ಹಿಂದೆ ನಡೆದಿದ್ದ ಎಲ್ಲ ಘಟನೆಗಳನ್ನು ವಿವರಿಸಿದ್ದಾರೆ. ತನ್ನ ಮಗಳನ್ನು ಆಟೋ ಚಾಲಕ ಚೇತನ್ ಕೊಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಚೇತನ್‌ನನ್ನು ಬಂಧಿಸಿ, ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿ ಶವವನ್ನು ಬುಧವಾರ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ವಾರಸುದಾರರಿಗೆ ನೀಡಲಾಯಿತು.
ಅತ್ಯಾಚಾರಿಗೆ ಮರಣ ದಂಡನೆ : ಶಿಕ್ಷೆಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ರಶ್ಮಿ ಕೊಲೆ ಪ್ರಕರಣ ಖಂಡಿಸಿ ಡಿಎಸ್‌ಬಿಜಿ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಮೂಡಿಗೆರೆ ಪಟ್ಟಣದ ಎಂಜಿಎಂ ಆಸ್ಪತ್ರೆಯಿಂದ ತಾಲೂಕು ಕಚೇರಿವರೆಗೂ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು. 2 ನಿಮಿಷ ಮೌನಾಚರಣೆಯ ಬಳಿಕ ಸಂತಾಪ ಸೂಚಿಸಿದರು. ವಿದ್ಯಾರ್ಥಿನಿ ರಶ್ಮಿ ಅವರನ್ನು ಕೊಲೆಗೈದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಿದರು.