ಶೃಂಗೇರಿ [ಜ.30]:  ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ನಂತರ ಆಕೆಯ ಮೃತದೇಹವನ್ನು ಬಾವಿಗೆ ಹಾಕಿದ ಪ್ರಕರಣದಲ್ಲಿ ಮರಣ ದಂಡನೆ (2020, ಜ.18ರಂದು ತೀರ್ಪು)ಗೆ ಗುರಿಯಾಗಿರುವ ವೈಕುಂಠ ಗ್ರಾಮದ ಅಪರಾಧಿ ಪ್ರದೀಪ್‌ಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಮತ್ತೊಂದು ಶಿಕ್ಷೆಯನ್ನು ನೀಡಿ ಬುಧವಾರ ತೀರ್ಪು ನೀಡಿದೆ.

ಆತ ಆತ್ಮಹತ್ಯೆಗೆ ಯತ್ನಿಸಿದ ಕಾರಣಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಶೃಂಗೇರಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸೂರ್ಯನಾರಾಯಣ ಅವರು ಪ್ರದೀಪನಿಗೆ 1 ವರ್ಷ ಸಾದಾ ಶಿಕ್ಷೆ ಹಾಗೂ 2000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಘಟನೆಯ ವಿವರ:

ಇಲ್ಲಿನ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಮೆಣಸೆ ಸಮೀಪದ ವೈಕುಂಠ ಗ್ರಾಮದ ತನ್ನ ಮನೆಗೆ 2016ರ ಫೆ.16ರಂದು ಮಧ್ಯಾಹ್ನ ಕಾಲುದಾರಿಯಲ್ಲಿ ಹೋಗುತ್ತಿದ್ದಳು. ಈ ಸಂದರ್ಭ ಪ್ರದೀಪ ಹಾಗೂ ಸಂತೋಷ್‌ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಮೃತದೇಹವನ್ನು ಬಾವಿಗೆ ಹಾಕಿದ್ದರು.

ಕಾಡು ಪ್ರಾಣಿಗಳನ್ನು ಕಟ್ಟಿ ನಾಯಿಗಳಿಂದ ಕಚ್ಚಿಸ್ತಾರೆ..!..

ಈ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ತನಗೆ ಶಿಕ್ಷೆಯಾಗಲಿದೆ ಎಂಬ ಭಯದಿಂದ ಮರುದಿನ ರಾತ್ರಿ ಪ್ರದೀಪ್‌ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಸಂಬಂಧ ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸರು ಸಲ್ಲಿಸಿದ ದೋಷರೋಪಣಾ ವರದಿಯನ್ನು ಆಲಿಸಿದ ನ್ಯಾಯಾಧೀಶರು ಪ್ರದೀಪ ತಪ್ಪಿತಸ್ಥನೆಂದು ತೀರ್ಮಾನಿಸಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಅರುಣ್‌ಕುಮಾರ್‌ ವಾದ ಮಂಡಿಸಿದ್ದರು.