ಧಾರವಾಡ: ಕಾಯಂ ಕುಲಪತಿಗಳಿಲ್ಲದೇ ಸೊರಗುತ್ತಿದೆ ಕರ್ನಾಟಕ ವಿವಿ!

By Kannadaprabha NewsFirst Published Feb 7, 2020, 11:41 AM IST
Highlights

ಏಳು ತಿಂಗಳಿಂದ ಪ್ರಭಾರಿ ಕುಲಪತಿಗಳ ಮೂಲಕ ವಿವಿ ಚಟುವಟಿಕೆ| ಪ್ರಮುಖ ನಿರ್ಧಾರ, ಹಣಕಾಸಿನ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ| ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಘಟಿಕೋತ್ಸವ ಸಹ ನಡೆದಿಲ್ಲ| ಶಿಕ್ಷಕ-ಶಿಕ್ಷಕೇತರ ಹುದ್ದೆಗಳ ನೇಮಕಾತಿ, ಹಣಕಾಸಿನ ವ್ಯವಹಾರಕ್ಕೆ ತೊಂದರೆ|
 

ಬಸವರಾಜ ಹಿರೇಮಠ

ಧಾರವಾಡ(ಫೆ.07): ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ, ಧಾರವಾಡ, ಹಾವೇರಿ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಏಳು ತಿಂಗಳಿಂದ ಕಾಯಂ ಕುಲಪತಿಗಳಿಲ್ಲದೇ ಸೊರಗುತ್ತಿದೆ.

2019ರ ಜೂನ್‌ ತಿಂಗಳಲ್ಲಿ ಕುಲಪತಿಗಳಾಗಿದ್ದ ಡಾ. ಪಿ.ಬಿ. ಗಾಯಿ ಅವರ ಅವಧಿ ಮುಗಿಯಿತು. ಅವರ ನಂತರ ಏಳು ತಿಂಗಳಿಂದ ಪ್ರಭಾರಿ ಕುಲಪತಿಗಳ ಹೆಸರಿನಲ್ಲಿಯೇ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ, ಹಣಕಾಸಿನ ಹಾಗೂ ಇತರೆ ಚಟುವಟಿಕೆಗಳನ್ನು ನಡೆಸುತ್ತಿದ್ದು, ಕಾಯಂ ಕುಲಪತಿಗಳ ಕೊರತೆ ವಿವಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

ಇಬ್ಬರು ಪ್ರಭಾರಿ ವಿಸಿ

ನಿಯಮದ ಪ್ರಕಾರ, ವಿವಿಯ ವಿವಿಧ ವಿಭಾಗಗಳಲ್ಲಿ ಯಾರು ಹಿರಿಯ ಡೀನ್‌ ಇರುತ್ತಾರೆಯೋ ಅವರು ಪ್ರಭಾರಿ ಕುಲಪತಿಗಳಾಗುತ್ತಾರೆ. ಅಂತೆಯೇ ಏಳು ತಿಂಗಳ ಕಾಲ ಡಾ. ಶಿರಾಳ ಶೆಟ್ಟರ್‌ ಎಂಬುವರು ಪ್ರಭಾರಿ ಕುಲಪತಿಗಳಾಗಿ ಕೆಲಸ ಮಾಡಿದರು. ಇದೀಗ ಅವರ ಡೀನ್‌ಶಿಪ್‌ ಮುಗಿದ ನಂತರ ಕಳೆದ ಫೆ. 1ರಿಂದ ಡಾ. ಭಾಸ್ಕರ್‌ ಎಂಬುವರು ವಿವಿಯ ಚುಕ್ಕಾಣಿ ಹಿಡಿದಿದ್ದಾರೆ.

ಏತಕ್ಕೆ ಬೇಕು ಕಾಯಂ ವಿಸಿ..

ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗೆ ಕಾಯಂ ಕುಲಪತಿಗಳೇ ಬೇಕು. ಅವರಿಲ್ಲದೇ ವಿವಿಯಲ್ಲಿ ಯಾವ ದೊಡ್ಡ ಬೆಳವಣಿಗೆ ಸಾಧ್ಯವಿಲ್ಲ. ಸಾಮಾನ್ಯವಾಗಿ ಪ್ರಭಾರಿ ಕುಲಪತಿಗಳ ಮೂಲಕ ವಿಶ್ವವಿದ್ಯಾಲಯವು ಎಂದಿನಂತೆ ಶೈಕ್ಷಣಿಕ ಹಾಗೂ ಇತರೆ ಚಟುವಟಿಕೆಗಳನ್ನು ನಡೆಸಬಹುದು. ಆದರೆ, ಪ್ರಭಾರಿ ಕುಲಪತಿಗಳಿಗೆ ಯಾವುದೇ ದೊಡ್ಡ ಮಟ್ಟದ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ತುಂಬ ಜವಾಬ್ದಾರಿಯುತ ಸ್ಥಾನ ಇದಾಗಿರುವುದರಿಂದ ಕಾಯಂ ಪ್ರಭಾರಿ ಇರುವುದರಿಂದ ಅವರು ಸಹ ವಿವಿಯಲ್ಲಿ ಗಟ್ಟಿನಿರ್ಧಾರ ತೆಗೆದುಕೊಳ್ಳಲು ಹಿಂದೆ-ಮುಂದೆ ನೋಡುವುದು ಸ್ವಾಭಾವಿಕ. ಹೀಗಾಗಿ ವಿವಿ ಬೆಳವಣಿಗೆ ಕುಂಠಿತವಾಗುವುದರಲ್ಲಿ ಸಂಶಯವೇ ಇಲ್ಲ.

ವಿಳಂಬವಾದ ಘಟಿಕೋತ್ಸವ

ಜೊತೆಗೆ ಹಣಕಾಸು ವ್ಯವಹಾರ ಸೇರಿದಂತೆ ನೇಮಕಾತಿಗೂ ಅವಕಾಶವಿಲ್ಲ. ಸರ್ಕಾರದಿಂದ ಅನುದಾನ ತರಲು ಅದನ್ನು ಬಳಸಲು ಕಾಯಂ ಕುಲಪತಿಗಳೇ ಬೇಕು. ಇದಕ್ಕಿಂತ ಮುಖ್ಯವಾಗಿ ಸದ್ಯ ವಿವಿಯಲ್ಲಿ ಶಿಕ್ಷಕ-ಶಿಕ್ಷಕೇತರ ಹುದ್ದೆಗಳು ಖಾಲಿ ಇದ್ದು ಈ ಕುರಿತ ಸರ್ಕಾರದೊಂದಿಗೆ ನಡೆಸಬೇಕಾದ ಪ್ರಕ್ರಿಯೆಗೆ ಕಾಯಂ ಕುಲಪತಿಗಳೇ ಬೇಕು. ನಂತರ ಪ್ರತಿವರ್ಷ ಪದವಿ ಪ್ರದಾನಕ್ಕೋಸ್ಕರ ಡಿಸೆಂಬರ್‌ ತಿಂಗಳಲ್ಲಿ ಘಟಿಕೋತ್ಸವ ನಡೆಸಬೇಕು. ಪದವಿ ಪಡೆಯಲು ವಿದ್ಯಾರ್ಥಿಗಳು ತುಂಬ ಕಾತುರರಾಗಿರುತ್ತಾರೆ. ಈ ಬಾರಿ ಕಾಯಂ ಕುಲಪತಿಗಳ ಇಲ್ಲದ ಕಾರಣ ಫೆಬ್ರವರಿ ತಿಂಗಳು ಬಂದರೂ ಈ ಕುರಿತು ಹೇಳಿಕೊಳ್ಳುವ ಸಿದ್ಧತೆ ನಡೆದಿಲ್ಲ.

ಆಯ್ಕೆ ಸಮಿತಿ ಇಲ್ಲ

ಒಂದು ವಿಶ್ವವಿದ್ಯಾಲಯಕ್ಕೆ ಕುಲಪತಿಗಳ ಅಗತ್ಯತೆ ಸಾಕಷ್ಟಿದ್ದರೂ ಸಹ ಸರ್ಕಾರ ಮಾತ್ರ ಈವರೆಗೂ ಆಯ್ಕೆ ಸಮಿತಿ ಕೂಡಾ ರಚಿಸಿಲ್ಲ ಎಂಬುದು ಬೇಸರ ಸಂಗತಿ. ಹೀಗಾಗಿ ಕುಲಪತಿ ಸ್ಥಾನಕ್ಕೆ ಯಾರು ಪೈಪೋಟಿ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆಯ್ಕೆ ಸಮತಿ ರಚನೆಯ ನಂತರ ಕುಲಪತಿ ಆಗುವ ತಜ್ಞರು ಮುನ್ನಲೆಗೆ ಬರುತ್ತಾರೆ. ಅಲ್ಲಿಯ ವರೆಗೂ ಕುಲಪತಿ ಸ್ಥಾನದ ಮೇಲೆ ಕಣ್ಣಿಟ್ಟವರು ಒಳಗೊಳಗೆ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯದಲ್ಲಿಯೇ ಆಯ್ಕೆ ಸಮಿತಿ ರಚಿಸಬಹುದು ಎಂಬ ಭರವಸೆಯೂ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಟ್ಟಾರೆ ವಿಶ್ವವಿದ್ಯಾಲಯ ಬೆಳವಣಿಗೆಯತ್ತ ಸಾಗಬೇಕಾದರೆ ಕಾಯಂ ಕುಲಪತಿ ಅಗತ್ಯತೆ ಸಾಕಷ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಆದಷ್ಟುಬೇಗ ಕವಿವಿಗೆ ಕಾಯಂ ಕುಲಪತಿಯನ್ನು ನೇಮಕ ಮಾಡುವುದು ಮೊದಲ ಆದ್ಯತೆಯಾಗಬೇಕಿದೆ.

ಈ ಬಗ್ಗೆ ಮಾತನಾಡಿದ ಕವಿವಿ ಮೌಲ್ಯಮಾಪನ ಕುಲಸಚಿವರು ಡಾ. ಎಂ.ಎನ್‌. ಸಾಲಿ ಅವರು, ವಿಶ್ವವಿದ್ಯಾಲಯದ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಕಾಯಂ ಕುಲಪತಿಗಳ ನೇಮಕ ಶೀಘ್ರ ಆಗಬೇಕು. ಪ್ರಭಾರಿ ಕುಲಪತಿ, ಕುಲಸಚಿವರ ಮೂಲಕ ಆಡಳಿತ ನಡೆದರೂ ಪ್ರಮುಖ ತೀರ್ಮಾನ, ನಿರ್ಧಾರಗಳಿಗೆ ಕಾಯಂ ವಿಸಿ ಬೇಕು. ಸರ್ಕಾರ ಆದಷ್ಟು ಶೀಘ್ರ ಕಾಯಂ ಕುಲಪತಿ ನೇಮಕ ಮಾಡುವ ಭರವಸೆ ಇದೆ ಎಂದು ತಿಳಿಸಿದ್ದಾರೆ. 

click me!