ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ 35000 ಹನುಮ ಮಾಲಾಧಾರಿಗಳು

By Suvarna News  |  First Published Dec 6, 2019, 8:39 AM IST

ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮ| ಡಿ. 9ರಂದು ಭಕ್ತರ ಆಗಮನಕ್ಕೆ ಸಕಲ ಸಿದ್ಧತೆ| ವಾಹನಗಳ ನಿಲುಗಡೆಗೆ 15 ಎಕರೆ ಪ್ರದೇಶದಲ್ಲಿ ವ್ಯವಸ್ಥೆ| ಪೊಲೀಸ್‌ ಬಿಗಿ ಭದ್ರತೆ, ಸಿಸಿ ಕ್ಯಾಮೆರಾ ಕಣ್ಗಾವಲು| 15 ಎಕರೆಯಲ್ಲಿ ಪಾರ್ಕಿಂಗ್‌| 


ರಾಮಮೂರ್ತಿ ನವಲಿ

ಗಂಗಾವತಿ(ಡಿ.06): ಹನುಮನ ಜನ್ಮಸ್ಥಳವಾದ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಡಿ. 9 ರಂದು ನಡೆಯಲಿರುವ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮದಲ್ಲಿ 35 ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆ ಜಿಲ್ಲಾಡಳಿತ ಬರುವ ಭಕ್ತರಿಗೆ ಸೌಲಭ್ಯ ಒದಗಿಸಲು ಭರದ ಸಿದ್ಧತೆ ಆರಂಭಿಸಿದೆ.

Tap to resize

Latest Videos

ಕಳೆದ ವರ್ಷ 10 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ಬಂದಿದ್ದರು. ಈ ಬಾರಿ 35 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ಬರುವ ನಿರೀಕ್ಷೆ ಇರುವ ಕಾರಣ ಜಿಲ್ಲಾಡಳಿತ ಬೆಟ್ಟದ ಕೆಳಗೆ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ, ಊಟ, ಕುಡಿಯುವ ನೀರು, ಬೆಟ್ಟಕ್ಕೆ ತೆರಳಲು ಎರಡು ಮಾರ್ಗಗಳನ್ನು ನಿರ್ಮಿಸುತ್ತಿದೆ.

15 ಎಕರೆಯಲ್ಲಿ ಪಾರ್ಕಿಂಗ್‌:

ಬೆಟ್ಟದ ಕೆಳಗೆ 4 ಎಕರೆ ಹಾಗೂ ಬೆಟ್ಟದ ಹಿಂಭಾಗದಲ್ಲಿ 11 ಎಕರೆ ಪ್ರದೇಶದಲ್ಲಿ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಐದು ಜೆಸಿಬಿ ಯಂತ್ರಗಳು ಭೂಮಿಯನ್ನು ಸಮತಟ್ಟು ಮಾಡುವ ಜತೆಗೆ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ವಿದ್ಯುತ್‌ ದೀಪ ಅಳವಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಅಗಳಕೇರಾ ರಸ್ತೆ ಮಾರ್ಗದಲ್ಲಿ ಬರುವ ಭಕ್ತರು ಬೆಟ್ಟಕೆಳಗೆ ಹಾಗೂ ಗಂಗಾವತಿ, ರಾಯಚೂರು ಮತ್ತು ಕಾರಟಗಿಯಿಂದ ಬರುವ ಭಕ್ತರು ಬೆಟ್ಟದ ಹಿಂಭಾಗದಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಬಿಗಿ ಭದ್ರತೆ:

ಮೂರು ವರ್ಷಗಳ ಹಿಂದೆ ಹನುಮಮಾಲಾ ಸಂಕೀರ್ತನೆ ಯಾತ್ರೆ ಸಂದರ್ಭದಲ್ಲಿ ನಡೆದ ಗಲಭೆಯಂತಹ ಘಟನೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್‌ ಇಲಾಖೆ ಈ ಬಾರಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದೆ. ಗಂಗಾವತಿ ಹಾಗೂ ಅಗಳಕೇರಾ ಮಾರ್ಗ ಸೇರಿದಂತೆ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇಬ್ಬರು ಎಸ್‌ಪಿ ಸೇರಿದಂತೆ 100 ಅಧಿಕಾರಿಗಳು, 1200ಕ್ಕೂ ಹೆಚ್ಚು ಪೊಲೀಸ್‌ ಮತ್ತು ಡಿಆರ್‌ಪಿ, ಹೋಂ ಗಾರ್ಡ್‌ಗಳನ್ನು ಸಂಕೀರ್ತನ ಯಾತ್ರೆಯ ಭದ್ರತೆಗೆ ನಿಯೋಜಿಸಲಾಗಿದೆ.

ಸಿಸಿ ಕ್ಯಾಮೆರಾ ಕಣ್ಗಾವಲು:

ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಯಾತ್ರೆ ನಡೆದ ಮಾರ್ಗ, ಬೆಟ್ಟದ ಮೇಲೆ, ಮೆಟ್ಟಿಲುಗಳ ಪ್ರತಿ ಹಂತದಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈಗಾಗಲೇ ಪಾರ್ಕಿಂಗ್‌ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆದಿದೆ. ಜತೆಗೆ ಪೊಲೀಸ್‌ ಇಲಾಖೆ ವಿಡಿಯೋ ಚಿತ್ರೀಕರಣವನ್ನು ಮಾಡಲಿದೆ.

ಡಿ. 8ರಂದು ಗಂಗಾವತಿಗೆ 6 ಸಾವಿರ ಹನುಮಮಾಲಾಧಾರಿಗಳು ಆಗಮಿಸಿ ಡಿ. 9ರಂದು ಗಂಗಾವತಿಯ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯಿಂದ ಹನುಮಮಾಲಾ ಭಕ್ತರಿಂದ ಸಂರ್ಕೀತನೆ ನಡೆಯಲಿದೆ. ಬೆಳಗ್ಗೆ 7ರಿಂದ ಮೆರವಣಿಗೆ ಪ್ರಾರಂಭವಾಗಲಿದ್ದು ಸಿಬಿಎಸ್‌, ಗಾಂಧಿ, ಮಹಾವೀರ, ನೀಲಕಂಠೇಶ್ವರ ಹಾಗೂ ಕೃಷ್ಣದೇವರಾಯ ವೃತ್ತದ ಮೂಲಕ ಅಂಜನಾದ್ರಿ ಪರ್ವತ ತಲುಪಲಿದೆ. ಸಂರ್ಕೀತನೆ ಯಾತ್ರೆ ವೇಳೆ ಮಹಾತ್ಮಗಾಂಧಿ ವೃತ್ತದಲ್ಲಿ ಮುಸ್ಲಿಂ ಬಾಂಧವರಿಂದ ಹಣ್ಣುಗಳ ವಿತರಣಾ ಕಾರ್ಯ ನಡೆಯಲಿದೆ. ಕಳೆದ ತಿಂಗಳು ಗಂಗಾವತಿಯಲ್ಲಿ ನಡೆದ ಪೈಗಂಬರ್‌ ದಿನಾಚರಣೆ ಮೆರವಣಿಗೆ ಸಂದರ್ಭದಲ್ಲಿ ಹಿಂದೂಗಳು ತಂಪು ಪಾನೀಯ ನೀಡಿ ಸೌಹಾರ್ದತೆ ಮೆರೆದಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಂಜನಾದ್ರಿ ಬೆಟ್ಟಕ್ಕೆ ಈ ಬಾರಿ ಹನಮ ಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದ್ದು ಅವರಿಗೆ ಸೌಲಭ್ಯ ಕಲ್ಪಿಸುವ ಹಾಗೂ ಭದ್ರತೆ ಒದಗಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಎಲ್ಲರು ಸೌಹಾರ್ದತೆ ಕಾಪಾಡುವ ಜತೆಗೆ ಸಂಕೀರ್ತನೆ ಯಾತ್ರೆ ಯಶಸ್ವಿಗೊಳಿಸಬೇಕು. ವಾಹನಗಳ ಪಾರ್ಕಿಂಗ್‌ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಅವರು ಹೇಳಿದ್ದಾರೆ.  

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಗೀತ ಅವರು, ಹನುಮಮಾಲಾ ಸಂಕೀರ್ತನೆ ಯಾತ್ರೆ ಸಂದರ್ಭದಲ್ಲಿ ಅಹಿತಕರ ಘಟನೆಗೆ ಆಸ್ಪದ ನೀಡುವುದಿಲ್ಲ. ಶಾಂತಿ ಸೌಹಾರ್ದತೆಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸಂಕೀರ್ತನ ಯಾತ್ರೆಯ ಎರಡು ದಿನ ಮೊದಲೆ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

click me!