
ಬೆಂಗಳೂರು/ಮೈಸೂರು (ನ.25): ಲೋಕಾಯುಕ್ತ ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 10 ಪ್ರದೇಶದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಒಟ್ಟು 100ಕ್ಕೂ ಅಧಿಕ ಸಿಬ್ಬಂದಿಗಳು ಬ್ರಹ್ಮಾಂಡ ಭ್ರಷ್ಟಾಚಾರಿಗಳು ನಿದ್ರೆಯಿಂದ ಏಳುವ ಮುನ್ನವೇ ಅಂದರೆ ಮುಂಜಾವಿನ 6 ಗಂಟೆಗೆ ಅವರ ಮನೆಯ ಕದ ತಟ್ಟಿದ್ದಾರೆ. ಇದರಿಂದಾಗಿ ಲಕ್ಷಾಂತರ ಹಣ, ಚಿನ್ನ, ಬೆಳ್ಳಿಯ ಆಭರಣಗಳು ಇವರ ಮನೆಯಲ್ಲಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಒಟ್ಟು 10 ಕಡೆ ದಾಳಿ ಮಾಡಿರುವ ಬಗ್ಗೆ ಅಧಿಕೃತ ಪ್ರಕಟಣೆಯನ್ನೂ ನೀಡಿದ್ದು, ಯಾವೆಲ್ಲಾ ಅಧಿಕಾರಿಗಳ ಮನೆಯ ಮೇಳೆ ದಾಳಿ ಮಾಡಲಾಗಿದೆ ಎನ್ನುವ ವಿವರವನ್ನೂ ಹಂಚಿಕೊಂಡಿದೆ.
ಮಂಡ್ಯ ನಗರಸಭೆಯ ಮುಖ್ಯ ಲೆಕ್ಕಾಧಿಕಾರಿ ಪುಟ್ಟಸ್ವಾಮಿ, ಬೀದರ್‌ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್, ಮೈಸೂರಿನ ಹೂಟಗಳ್ಳಿ ಪುರಸಭೆಯ ಕಂದಾಯ ಅಧಿಕಾರಿ ರಾಮಸ್ವಾಮಿ, ಧಾರವಾಡದ ಕರ್ನಾಟಕ ಯುನಿವರ್ಸಿಟಿ ಸಹಾಯಕ ಪ್ರಾಧ್ಯಾಪಕ ಸುಭಾಷ್ ಚಂದ್ರ, ಹುಯಿಲ್‌ಗೋಳದ ಪ್ರಾಥಮಿಕ ಪಶು ಕ್ಲಿನಿಕ್‌ನ ಹಿರಿಯ ವೆಟರ್ನರಿ ಎಕ್ಸಾಮಿನರ್ ಸತೀಶ್, ದಾವಣಗೆರೆಯ ಪ್ರಾಜೆಕ್ಟ್ ಡೈರೆಕ್ಟರ್ ಆಫೀಸ್‌ನ ಎಕ್ಸಿಕ್ಯೂಟಿವ್ ಇಂಜಿನಿಯರ್ ಶೇಖಪ್ಪ, ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ RTO ಇಲಾಖೆಯ ಆಫೀಸ್ ಸೂಪರಿಟೆಂಡೆಂಟ್ ಪಿ.ಕುಮಾರಸ್ವಾಮಿ, ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಲಕ್ಷ್ಮೀಪತಿ, ದಾವಣಗೆರೆ ಎಪಿಎಂಸಿ ಅಗ್ರಿಕಲ್ಚರ್ ಸೇಲ್ಸ್ ಡಿಪಾರ್ಟ್‌ಮೆಂಟ್‌ನ ಅಸಿಸ್ಟೆಂಟ್ ಡೈರೆಕ್ಟರ್ ಪ್ರಭು ಜೆ ಹಾಗೂ ಮೈಸೂರು (ಮಡಿಕೇರಿ) ಲೋಕೋಪಯೋಗಿ ಇಲಾಖೆಯ ಸಹಾಯಕ ವ್ಯವಸ್ಥಾಪಕ ಇಂಜಿನಿಯರ್ ಗಿರೀಶ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ RTO ಸೂಪರಿಂಡೆಂಟ್ ಕುಮಾರಸ್ವಾಮಿ ಅವರ ಕಾಮಾಕ್ಷಿಪಾಳ್ಯ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಕಂಡಕಂಡಲೆಲ್ಲಾ ಚಿನ್ನ, ಬೆಳ್ಳಿ ಹಾಗೂ ಹಣ ಸಿಕ್ಕಿದೆ. ಇವರ ನಿವಾಸದಲ್ಲಿ ಒಟ್ಟು15 ಲಕ್ಷ ರೂಪಾಯ ನಗದು ಹಣ ಪತ್ತೆಯಾಗಿದೆ.
ದಾವಣಗೆರೆ ಎಪಿಎಂಸಿ ಅಸಿಸ್ಟೆಂಟ್ ಡೈರೆಕ್ಟರ್ ಪ್ರಭು ನಿವಾಸದಲ್ಲಿ ಭಾರೀ ಪ್ರಮಾಣದಲ್ಲಿ ನಗದು ಹಾಗೂ ಚಿನ್ನಾಭರಣ ಪತ್ತೆಯಯಾಗಿದೆ. ಮೈಸೂರು ರಾಮಸ್ವಾಮಿ ಅವರ ನಿವಾಸದಲ್ಲಿ ಹಾಗೂ ಮಂಡ್ಯ ನಗರಸಭೆಯ ಲೆಕ್ಕಾಧಿಕಾರಿ ಪುಟ್ಟಸ್ವಾಮಿ ಮನೆಯಲ್ಲೂ ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ.
ದಾವಣಗೆರೆ ಎಪಿಎಂಸಿ ಅಸಿಸ್ಟೆಂಟ್ ಡೈರೆಕ್ಟರ್ ಪ್ರಭು ಪತ್ತೆಯಾದ ಆಸ್ತಿ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ RTO ಸೂಪರಿಂಡೆಂಟ್ ಕುಮಾರಸ್ವಾಮಿ ಅವರ ಮನೆಯಲ್ಲಿ ಸಿಕ್ಕ ಹಣ
ಮೈಸೂರಿನ ರಾಮಸ್ವಾಮಿ ನಿವಾಸದಲ್ಲಿ ಪತ್ತೆಯಾದ ಚಿನ್ನ, ಹಣ