ಲೋಕಸಭೆ ಚುನಾವಣೆ: ಒಗ್ಗಟ್ಟಿನ ಮಂತ್ರದ ಮೊರೆ ಹೋದ ಕಾಂಗ್ರೆಸ್‌

By Suvarna NewsFirst Published Apr 23, 2024, 2:22 PM IST
Highlights

ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಶತಾಯ-ಗತಾಯ ಕಾಂಗ್ರೆಸ್‌ ಗೆಲುವು ಸಾಧಿಸಬೇಕು. ಇದಕ್ಕಾಗಿ ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದು ಮೂವರು ಸಚಿವರಿಗೆ ಕೆಪಿಸಿಸಿ ಟಾಸ್ಕ್‌ ನೀಡಿದೆ.

 ಕೃಷ್ಣ ಎನ್‌. ಲಮಾಣಿ

ಹೊಸಪೇಟೆ :  ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಶತಾಯ-ಗತಾಯ ಕಾಂಗ್ರೆಸ್‌ ಗೆಲುವು ಸಾಧಿಸಬೇಕು. ಇದಕ್ಕಾಗಿ ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದು ಮೂವರು ಸಚಿವರಿಗೆ ಕೆಪಿಸಿಸಿ ಟಾಸ್ಕ್‌ ನೀಡಿದೆ. ಕೈ ಅಭ್ಯರ್ಥಿ ಗೆಲ್ಲಿಸಲು ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನ ಮಂತ್ರ ಜಪಿಸಲಾರಂಭಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಳ್ಳಾರಿ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್‌ ಬಾವುಟ ಹಾರಿಸಲು ಶ್ರಮಿಸಿದರೆ ಫಲ ದೊರೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಚಿವರಿಗೆ ಸೂಚನೆ ರವಾನಿಸಿದ್ದಾರೆ.

ಸಚಿವರಾದ ಸಂತೋಷ್‌ ಲಾಡ್‌, ಬಿ. ನಾಗೇಂದ್ರ, ಜಮೀರ್‌ ಅಹಮದ್ ಖಾನ್‌ ಅವರಿಗೆ ಈಗಾಗಲೇ ಸೂಚನೆ ನೀಡಿರುವ ಅವರು, ಕಾಂಗ್ರೆಸ್ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಸಂದೇಶ ರವಾನಿಸಿದ್ದಾರೆ.

 ಕಾಂಗ್ರೆಸ್‌ನ ಆರು ಶಾಸಕರು 

ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಆರು ಶಾಸಕರು ಇದ್ದಾರೆ. ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಅದರಲ್ಲೂ ಸಂಡೂರಿನ ಶಾಸಕ ಈ. ತುಕಾರಾಂ ಅವರೇ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದಾರೆ. ಎಸ್ಟಿ ಮೀಸಲು ಕ್ಷೇತ್ರವಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ. ಶ್ರೀರಾಮುಲು ಅವರಿಗೆ ಟಕ್ಕರ್‌ ಕೊಡುವ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಾಗಿದೆ. ಹಾಗಾಗಿ ಎಲ್ಲರೂ ಸೇರಿ ಕೆಲಸ ಮಾಡಬೇಕು ಎಂದು ಈಗಾಗಲೇ ಪಕ್ಷದ ವರಿಷ್ಠರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈಗ ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲಾಗುತ್ತಿದೆ.

ಬಳ್ಳಾರಿ ಲೋಕ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಸರದಾರರು

ಹೊಸಪೇಟೆ (ವಿಜಯನಗರ ವಿಧಾನಸಭಾ ಕ್ಷೇತ್ರ) ಹಾಗೂ ಕೂಡ್ಲಿಗಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್‌ ಶಾಸಕರಿದ್ದರೆ, ಹೂವಿನಹಡಗಲಿಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಎರಡು ಕ್ಷೇತ್ರಗಳಲ್ಲೂ ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಎಸ್. ಭೀಮನಾಯ್ಕ ಅವರಿಗೆ ಸಕ್ರಿಯರಾಗಿರಲು ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಹಾಗಾಗಿ ಇವರಿಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

 ಗೆಲುವಿಗಾಗಿ ಒಗ್ಗಟ್ಟಿನ ಮಂತ್ರ ಜಪ 

ಬಳ್ಳಾರಿ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ವಿಜಯನಗರ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್ ಖಾನ್‌ ಈಗಾಗಲೇ ಪಕ್ಷದ ಮುಖಂಡರು ಹಾಗೂ ಶಾಸಕರ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಭಿನ್ನಾಭಿಪ್ರಾಯ ಇರುವ ಕಡೆಗಳಲ್ಲಿ ಪಕ್ಷದ ಮುಖಂಡರ ಜತೆಗೂ ಚರ್ಚಿಸಿ ಅಸಮಾಧಾನ ಶಮನ ಮಾಡುತ್ತಿದ್ದಾರೆ.

ಇನ್ನು ಕಾಂಗ್ರೆಸ್‌ ಶಾಸಕರಾದ ಎಚ್‌.ಆರ್‌. ಗವಿಯಪ್ಪ, ಜೆ.ಎನ್‌. ಗಣೇಶ, ಭರತ್‌ ರೆಡ್ಡಿ, ಡಾ. ಎನ್‌.ಟಿ. ಶ್ರೀನಿವಾಸ್‌ ಜತೆಗೆ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಸಭೆ ನಡೆಸಿ ಸಚಿವರು ಚರ್ಚಿಸಿದ್ದಾರೆ.

ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಎಸ್‌. ಭೀಮನಾಯ್ಕ ಜತೆಗೂ ಚರ್ಚಿಸಿದ್ದಾರೆ. ಈ ಸಭೆಯ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಅವರನ್ನು ಬಹಿರಂಗ ಪ್ರಚಾರಕ್ಕೆ ಕರೆತರಲು ಶಾಸಕರು, ಮಾಜಿ ಶಾಸಕರು ಸಲಹೆ ನೀಡಿದ್ದಾರೆ. ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

 ಶ್ರೀರಾಮುಲುಗೆ ಅಮಿತ್‌ ಶಾ ಬಲ 

ಇನ್ನು ಕಾಂಗ್ರೆಸ್‌ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಬಿಜೆಪಿಯು ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಅವರನ್ನು ಪ್ರಚಾರಕ್ಕೆ ಕರೆತರಲು ತಯಾರಿ ನಡೆಸಿದೆ. ಈಗಾಗಲೇ ಎಂಟು ಕ್ಷೇತ್ರಗಳಲ್ಲೂ ಭರದ ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್‌ನ ಗ್ಯಾರಂಟಿಗೆ ಪ್ರತಿಯಾಗಿ ಬಿಜೆಪಿ ಮೋದಿ ಗ್ಯಾರಂಟಿಯ ಮಂತ್ರ ಜಪಿಸುತ್ತಿದೆ.

ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಒಗ್ಗಟ್ಟಾಗಿದ್ದೇವೆ. ಈಗಾಗಲೇ ಸಚಿವರಾದ ಸಂತೋಷ್ ಲಾಡ್‌, ಬಿ. ನಾಗೇಂದ್ರ, ಜಮೀರ್‌ ಅಹಮದ್ ಖಾನ್‌ ಪ್ರಚಾರ ನಡೆಸಿದ್ದಾರೆ. ಎಐಸಿಸಿ ನಾಯಕ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ನ ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌.

click me!