ಬೆಳಗಾವಿ ಸ್ಥಳಿಯ ಸಂಸ್ಥೆ ಫಲಿತಾಂಶ: ಕುಂದಾ, ಕರದಂಟು ಎಲ್ಲಾ ಕಾಂಗ್ರೆಸ್‌ಗೆ!

By Web DeskFirst Published Sep 3, 2018, 4:56 PM IST
Highlights

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ! ಕಾಂಗ್ರೆಸ್ ಕೈ ಹಿಡಿದ ಬೆಳಗಾವಿ ಜಿಲ್ಲಾ ಮತದಾರ! ಒಟ್ಟು 14 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ! ಕಾಂಗ್ರೆಸ್ 6, ಬಿಜೆಪಿ 3, ಅತಂತ್ರ 5 ಫಲಿತಾಂಶ! ಬಿಜೆಪಿಯ ಘಟಾನುಘಟಿ ಜಿಲ್ಲಾ ನಾಯಕರಿಗೆ ಮುಖಭಂಗ! ಜಿಲ್ಲಾದ್ಯಂತ ಜಾರಕಿಹೋಳಿ ಸಹೋದರರ ಕಮಾಲ್ 

ಬೆಳಗಾವಿ(ಸೆ.3): ಕರ್ನಾಟಕ ನಗರ ಸ್ಥಳೀಯ ಸಂಸ್ಥೆ  ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಅದರಂತೆ ರಾಜ್ಯದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವೇ ಮೇಲುಗೈ ಸಾಧಿಸಿದೆ. ಜಿಲ್ಲೆಯ 14 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ 6ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಮತ್ತು ಇನ್ನುಳಿದ 5ರಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿಯ ಘಟಾನುಘಟಿ ಜಿಲ್ಲಾ ನಾಯಕರಿಗೆ ಈ ಫಲಿತಾಂಶ ಮುಖಭಂಗ ಉಂಟು ಮಾಡಿದೆ. ಹಾಲಿ ಶಾಸಕ ಉಮೇಶ ಕತ್ತಿ ಅವರ ವ್ಯಾಪ್ತಿಗೆ ಬರುವ ಹುಕ್ಕೇರಿ ಪುರಸಭೆ, ಸಂಕೇಶ್ವರ ಪುರಸಭೆ, ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ನಿಪ್ಪಾಣಿ ನಗರ ಸಭೆ, ದುರ್ಯೋಧನ ಐಹೊಳೆ ಪ್ರತಿನಿಧಿಸುವ ರಾಯಭಾಗ, ಪಿ.ರಾಜೀವ ಪ್ರತಿನಿಧಿಸುವ ಕುಡಚಿ ಪುರಸಭೆ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಮೂಡಲಗಿ ಪುರಸಭೆಯಲ್ಲಿ ಬಿಜೆಪಿ ನೆಲಕಚ್ಚಿದೆ.

ಇನ್ನು ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿ ಪ್ರತಿನಿಧಿಸುವ ಚಿಕ್ಕೋಡಿ-ಸದಲಗಾ ಕ್ಷೇತ್ರದ ಚಿಕ್ಕೋಡಿ ಮತ್ತು ಸದಲಗಾ ಪುರಸಭೆ, ಅಂಜಲಿ ನಿಂಬಾಳ್ಕರ್ ಪ್ರತಿನಿಧಿಸುವ ಖಾನಾಪುರ ಕ್ಷೇತ್ರದ ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೋಕಾಕ ನಗರಸಭೆ ಹಾಗೂ ಕೊಣ್ಣೂರು ಪುರಸಭೆಯಲ್ಲಿ ಸಚಿವ ಜಾರಕಿಹೊಳಿ ಅವರ ಬೆಂಬಲಿತ ಎಲ್ಲಾ ಪಕ್ಷೇತರರು ಗೆಲುವು ದಾಖಲಿಸಿದ್ದಾರೆ. 


ಹುಕ್ಕೇರಿ ಪುರಸಭೆ, ರಾಯಭಾಗ ಪಟ್ಟಣ ಪಂಚಾಯಿತ್, ಕುಡಚಿ ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಬೈಲಹೊಂಗದಲ್ಲಿ ಕಾಂಗ್ರೆಸ್, ಗೋಕಾಕ ಮತ್ತು ಕೊಣ್ಣೂರಿನಲ್ಲಿ ಸಚಿವ ಜಾರಕಿಹೊಳಿ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಚಿಕ್ಕೋಡಿ, ರಾಮದುರ್ಗ ಹಾಗೂ ಸವದತ್ತಿಯಲ್ಲಿ ಬಿಜೆಪಿ ಗೆದ್ದಿದೆ. ಸಂಕೇಶ್ವರ, ನಿಪ್ಪಾಣಿ ನಗರಸಭೆ, ಸದಲಗಾ ಪುರಸಭೆ, ಮೂಡಲಗಿ ಪುರಸಭೆ, ಖಾನಾಪುರ ಪುರಸಭೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ.

23 ಸದಸ್ಯರನ್ನು ಹೊಂದಿರುವ ಮೂಡಲಗಿ ಪುರಸಭೆಯಲ್ಲಿ ಬಿಜೆಪಿ 11, ಜೆಡಿಎಸ್ 8 ಹಾಗೂ ನಾಲ್ವರು ಪಕ್ಷೇತರರು ಗೆಲುವು ದಾಖಲಿಸಿದ್ದು, ಗದ್ದುಗೆಗಾಗಿ ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ. 23 ಸದಸ್ಯರನ್ನು ಹೊಂದಿರುವ ಸಂಕೇಶ್ವರ ಪುರಸಭೆಯಲ್ಲಿ 11 ಬಿಜೆಪಿ, 11 ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಗೆಲುವು ದಾಖಲಿಸಿದ್ದಾರೆ. 

31 ವಾರ್ಡ್ ಹೊಂದಿರುವ ನಿಪ್ಪಾಣಿ ಪುರಸಭೆಯಲ್ಲಿ ಬಿಜೆಪಿ 13, ಕಾಂಗ್ರೆಸ್ 12 ಹಾಗೂ 6 ಜನ ಪಕ್ಷೇತರರ ಗೆದ್ದಿದ್ದಾರೆ. ಸದಲಗಾ ಪುರಸಭೆಯಲ್ಲಿ 10 ಕಾಂಗ್ರೆಸ್, 10 ಬಿಜೆಪಿ, 2 ಜೆಡಿಎಸ್ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದು, ಜೆಡಿಎಸ್ ನಿರ್ಣಾಯಕವಾಗಿದೆ. ಖಾನಾಪುರ ಪಟ್ಟಣ ಪಂಚಾಯಿತಿಯ 20 ವಾರ್ಡ್ ಪೈಕಿ ಎಲ್ಲರೂ ಪಕ್ಷೇತರರೇ ಗೆಲುವು ದಾಖಲಿಸಿದ್ದು, ಇಲ್ಲಿಯೂ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದೆ. 

click me!