ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ ಜೆಡಿಎಸ್‌ ಬಾಯಿಗೆ ಸಿಹಿ

By Web DeskFirst Published Sep 3, 2018, 6:14 PM IST
Highlights

ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಒಂದು ಸಣ್ಣ ಅಗ್ನಿ ಪರೀಕ್ಷೆಯಂತಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದ ಈ ಚುನಾವಣೆ ಫಲಿತಾಂಶದ ಆಧಾರದ ಮೇಲೆ ಲೋಕಸಭಾ ಚುನಾವಣೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಿರ್ಧರಿಸಲಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಜೆಡಿಎಸ್‌ ಫುಲ್ ಸ್ವೀಪ್ ಆಗಿದೆ.

ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದ ರಾಜಕೀಯ ಲೆಕ್ಕಾಚಾರದಲ್ಲಿ ಜೆಡಿಎಸ್ ನೆಲೆಯೂರಿದೆ. ಕಾಂಗ್ರೆಸ್ ಕುಸಿದಿದೆ, ಬಿಜೆಪಿ ದಿಕ್ಕು ತಪ್ಪಿದೆ. 

- ಇದು ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದ ನಂತರ ಮಂಡ್ಯ ಜಿಲ್ಲೆಯ ರಾಜಕಾರಣ ಚಿತ್ರಣದ ಒಂದು ಪಕ್ಷಿ ನೋಟ. ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಮತ್ತೆ ಹೀನಾಯವಾಗಿ ಸೋತು, ಕುಸಿದು ಹೋಗಿದೆ. ಬಿಜೆಪಿ ನೆಲೆ ಕಾಣಲೂ ತಿಣುಕಾಡಿದೆ.

ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕುಸಿದಿದ್ದು ನೋಡಿದರೆ, ಭವಿಷ್ಯದಲ್ಲಿ ಪಕ್ಷದ ಸ್ಥಾನ ಏನೆಂಬುದನ್ನು ಕಂಡು ಹಿಡಿಯಲೂ ಕಷ್ಟವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಂದಾಣಿಕೆ ಕೊರತೆಯಿಂದಲೇ ಕಾಂಗ್ರೆಸ್ ಸೋಲು ಕಾಣುತ್ತಿದೆ ಎನ್ನಲಾಗುತ್ತಿದೆ. ಅಲ್ಲದೇ ಟಿಕೆಟ್ ಹಂಚಿಕೆ ವೇಳೆಯಲ್ಲೂ ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ವಿಫಲವಾಗಿತ್ತು.

ಕಳೆದ ಬಾರಿ ಮಂಡ್ಯ ನಗರಸಭೆಯಲ್ಲಿ 15 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್,  ಕೇವಲ 9 ಸ್ಥಾನಗಳನ್ನು ಗೆದ್ದಿದೆ. 
ಕಳೆದ ಬಾರಿ 9 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ಈ ಬಾರಿ 18 ಸ್ಥಾನಗಳನ್ನು ಪಡೆಯುವ ಮೂಲಕ, ತನ್ನ ಕೋಟೆಯನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. 

ದಿಕ್ಕು ತಪ್ಪಿದ ಬಿಜೆಪಿ 
ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣ ದಿಕ್ಕು ತಪ್ಪಿದೆ. ರಾಜ್ಯ ಮತ್ತು ಜಿಲ್ಲಾ ನಾಯಕರು ಯಾವುದೇ ಹೊಂದಾಣಿಕೆ ಇಲ್ಲದಿರುವುದು, ರಾಜ್ಯ ನಾಯಕರಿಗೆ ಸ್ಥಳೀಯ ಸಂಸ್ಥೆಯ ಚುನಾವಣೆಯ ಬಗ್ಗೆ ಯಾವುದೇ ಕಾಳಜಿ, ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ಮನೋಭಾವ ತೋರಿದ ಪರಿಣಾಮವನ್ನು ಬಿಜೆಪಿ ಫಲಿತಾಂಶದಲ್ಲಿ ಅನುಭವಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಪಡೆದಿತ್ತು. ಈ ಬಾರಿ 2 ಸ್ಥಾನಗಳನ್ನು ಗೆದ್ದಿದೆ ಎನ್ನುವುದ ಬಿಟ್ಟರೆ, ಮತ್ಯಾವ ಧನಾತ್ಮಕ ಬೆಳವಣಿಗೆಯನ್ನೂ ಕಂಡಿಲ್ಲ. ಆ ಗೆಲವು ಅಭ್ಯರ್ಥಿಗಳ ಶ್ರಮದ ಗೆಲುವೇ ಹೊರತು, ಪಕ್ಷದ ವರ್ಚಸ್ಸು ಕಾರಣವಲ್ಲವೆಂಬುವದು ಸ್ಪಷ್ಟ.


ಮಂಡ್ಯದ ಒಟ್ಟು ಸ್ಥಾನಗಳು: 117 ಸ್ಥಾನಗಳು 
* ಜೆಡಿಎಸ್- 45
* ಕಾಂಗ್ರೆಸ್ - 35
* ಬಿಜೆಪಿ  - 04
*ಪಕ್ಷೇತರರು -18 ಸ್ಥಾನ 
 

ಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು  
ಮಂಡ್ಯ ನಗರಸಭೆ 35 02 09 18 06  
ಮದ್ದೂರು ಪುರಸಭೆ 23 02 04 12 06  
ಪಾಂಡವಪುರ ಪುರಸಭೆ 23 00 03 18 02  
ನಾಗಮಂಗಲ ಪುರಸಭೆ 23 00 11 12 00  
ಬೆಳ್ಳೂರು ಪ.ಪಂ. 13 00 07 04 02  

ರಾಜ್ಯವಾರು ಚಿತ್ರಣ

ಪುರಸಭೆ - 53
ಕಾಂಗ್ರೆಸ್ - ​21
ಬಿಜೆಪಿ - 11
ಜೆಡಿಎಸ್​ - 11
ಅತಂತ್ರ - 10

ನಗರಸಭೆ - 29
ಕಾಂಗ್ರೆಸ್​ - 05
ಬಿಜೆಪಿ - 10
ಜೆಡಿಎಸ್ - ​03
ಅತಂತ್ರ - 11

ಪಟ್ಟಣ ಪಂಚಾಯಿತಿ - 20
ಕಾಂಗ್ರೆಸ್ -​ 07
ಬಿಜೆಪಿ -07
ಜೆಡಿಎಸ್​ - 02
ಅತಂತ್ರ - 04

ಮಹಾನಗರ ಪಾಲಿಕೆ - 3
ಶಿವಮೊಗ್ಗ - ಬಿಜೆಪಿ
ಮೈಸೂರು - ಅತಂತ್ರ
ತುಮಕೂರು - ಅತಂತ್ರ

click me!