20 ವರ್ಷದ ಹಿಂದೆ ಪಡೆದ ಸಾಲ ಪಾವತಿಸಿಲ್ಲ ಎಂದು ಜಪ್ತಿಗೆ ಬಂದ ಅಧಿಕಾರಿಗಳು ಬರಿಗೈಯಲ್ಲಿ ಹಿಂದಿರುಗಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಟ್ರ್ಯಾಕ್ಟರ್ ಖರೀದಿಗಾಗಿ ಸಾಲ ಮಾಡಿದ್ದು ರೈತ ಇನ್ನೂ ಸಾಲ ಪಾವತಿ ಮಾಡದ ಕಾರಣ ಅಧಿಕಾರಿಗಳು ಜಪ್ತಿಗೆ ಮುಂದಾಗಿದ್ದರು.
ಮಡಿಕೇರಿ(ಜ.09): ರೈತರೊಬ್ಬರು 20 ವರ್ಷಗಳ ಹಿಂದೆ ಬ್ಯಾಂಕ್‌ನಲ್ಲಿ ಟ್ರ್ಯಾಕ್ಟರ್ ಖರೀದಿಗಾಗಿ ಸಾಲ ಮಾಡಿದ್ದು ರೈತ ಅಸಲು, ಬಡ್ಡಿ ಬಾಕಿ ಮಾಡಿದ್ದ ಹಿನ್ನೆಲೆ ಬ್ಯಾಂಕ್ ಅಧಿಕಾರಿಗಳು ಜಪ್ತಿಗೆ ಬಂದಾಗ ರೈತರು ಮನವೊಲಿಸಿ ಕಳುಹಿಸಿದ ಘಟನೆ ಶನಿವಾರಸಂತೆ ಹೋಬಳಿಯಲ್ಲಿ ನಡೆದಿದೆ.
ಪ್ರಕರಣ ವಿವರ:
ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಕಾಜೂರು ಗ್ರಾಮದ ರೈತರೊಬ್ಬರು 20 ವರ್ಷಗಳ ಹಿಂದೆ ವ್ಯವಸಾಯಕ್ಕಾಗಿ ಟ್ರ್ಯಾಕ್ಟರ್ ಖರೀದಿಸಲು ಸೋಮವಾರಪೇಟೆ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ಇದೀಗ ಪಿಎಲ್‌ಡಿ ಬ್ಯಾಂಕಿನಲ್ಲಿ ರೈತನ ಸಾಲ 3 ಲಕ್ಷ ರು ಬಾಕಿಯಾಗಿತು. ಬ್ಯಾಂಕ್ ನಿಯಮದ ಪ್ರಕಾರ ರೈತನಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಲಾಗುತಿತ್ತು. ಆದರೆ ರೈತನಿಗೆ ಸಾಲ ಮರುಪಾವತಿಸಲು ಅರ್ಥಿಕ ಸ್ಥಿತಿ ಉತ್ತಮವಾಗಿರದ ಹಿನ್ನೆಲೆ ಸಾಲವನ್ನು ಮರುಪಾವತಿಸದೆ ಬಾಕಿ ಮಾಡಿಕೊಂಡಿದ್ದರು.
ಬ್ಯಾಂಕ್ ಆದೇಶದಂತೆ ರೈತನಿಗೆ ಸೇರಿದ ವಾಹನವನ್ನು ಜಪ್ತಿ ಮಾಡಲು ಬುಧವಾರ ಪಿಎಲ್‌ಡಿ ಬ್ಯಾಂಕ್ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ರೈತನಿಗೆ ಸೇರಿದ ವಾಹನ ಜಪ್ತಿ ಮಾಡುವುದಾಗಿ ತಿಳಿಸಿದರು. ಮಾಹಿತಿ ತಿಳಿದ ಮಾಜಿ ಜಿ.ಪಂ.ಸದಸ್ಯ ಡಿ.ಬಿ.ಧರ್ಮಪ್ಪ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ರೈತನ ಮನೆಗೆ ಬಂದು ಬ್ಯಾಂಕ್ ಅಧಿಕಾರಿಗಳಿಗೆ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಜಪ್ತಿ ಮಾಡುವ ಕ್ರಮವನ್ನು ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ.
ವೇದಿಕೆಯಲ್ಲೇ ಕುಸಿದು ಬಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್
ರೈತ ತಮ್ಮ ಬ್ಯಾಂಕಿನಲ್ಲಿ ಟ್ರ್ಯಾಕ್ಟರ್ ಖರಿದಿಸಲು ಸಾಲ ಪಡೆದಿರುವುದು ನಿಜವಾಗಿದ್ದರೂ ಈ ಭಾಗದಲ್ಲಿ ಪ್ರತಿವರ್ಷ ಅತಿ ಹೆಚ್ಚು ಮಳೆ ಹಾಗೂ ಅತೀ ಕಡಿಮೆ ಮಳೆಯಾಗುವುದ್ದರಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಾರೆ, ಈ ಹಿನ್ನೆಲೆಯಲ್ಲಿ ಅವರು ಮಾಡಿರುವ ಸಾಲವನ್ನು ತೀರಿಸುವ ಸ್ಥಿತಿಯಲ್ಲಿಲ್ಲ, ಈಗ ನೀವು ರೈತನಿಗೆ ಸೇರಿದ ವಾಹನವನ್ನು ಜಪ್ತಿ ಮಾಡಲು ಬಂದಿರುವುದ್ದರಿಂದ ಉಳಿದ ಕಡೆಯಲ್ಲಿ ಸಾಲ ಮಾಡಿದ ರೈತರು ಹತಾಶರಾಗುತ್ತಾರೆ. ಈ ನಿಟ್ಟಿನಲ್ಲಿ ನೀವು ಜಪ್ತಿ ಮಾಡುವ ಕ್ರಮವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ಕೊನೆಗೆ ರೈತರು, ರೈತ ಬಾಕಿ ಮಾಡಿರುವ ಸಾಲವನ್ನು ಅವರ ಸಂಬಂಧಿಗಳು ಕಂತಿನ ಪ್ರಕಾರ ಹಂತಹಂತವಾಗಿ ತೀರಿಸುತ್ತಾರೆ, ನಿಮ್ಮ ಬ್ಯಾಂಕ್ ಸಾಲವನ್ನು ಉಳಿಸಿಕೊಳ್ಳುವುದಿಲ್ಲ, ರೈತನಿಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡಾಗ ಬ್ಯಾಂಕ್ ಅಧಿಕಾರಿಗಳು ರೈತರ ಮನವಿಗೆ ಸ್ಪಂದಿಸಿ ವಾಹನ ಜಪ್ತಿ ಕ್ರಮವನ್ನು ಕೈಬಿಟ್ಟು ವಾಪಾಸಾದರು. ಸೋಮವಾರಪೇಟೆ ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ಬಿ.ವಿ.ಶಿವಕುಮಾರ್, ಪಿಎಲ್‌ಡಿ ಬ್ಯಾಂಕ್ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕೃಷ್ಣಾ ಬೋವಿ ಮತ್ತು ಬ್ಯಾಂಕ್ ಸಿಬ್ಬಂದಿ ಇದ್ದರು.