ಕೈ ಬೀಸಿ ಕರೆಯುತ್ತಿದೆ ಧಾರವಾಡ ಕೃಷಿ ಮೇಳ: ಗಮನ ಸೆಳೆದ ಜಾನುವಾರು ಪ್ರದರ್ಶನ

By Kannadaprabha NewsFirst Published Jan 20, 2020, 7:36 AM IST
Highlights

ಇಂದು ಮೇಳಕ್ಕೆ ತೆರೆ, ಗಮನ ಸೆಳೆದ ಜಾನುವಾರು, ಫಲಪುಷ್ಪ ಪ್ರದರ್ಶನ| ಸಾಧಕ ರೈತರಿಗೆ ಪ್ರಶಸ್ತಿಗಳ ಸುರಿಮಳೆ, ಭಾನುವಾರ 2.5 ಲಕ್ಷ ಜನರ ಭೇಟಿ|ಹುಬ್ಬಳ್ಳಿ-ಧಾರವಾಡ ನಗರದ ಜನರೇ ಈ ಬಾರಿಯ ಕೃಷಿ ಮೇಳದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ|

ಧಾರವಾಡ(ಜ.20): ರೈತರ ತೀವ್ರ ಕೊರತೆ ಮಧ್ಯೆಯೂ ಕಳೆದ ಎರಡು ದಿನಗಳಿಂದ ಇಲ್ಲಿನ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಇಂದು(ಸೋಮವಾರ) ತೆರೆ ಬೀಳಲಿದೆ.

ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಯಲ್ಲಿ ಬಹುತೇಕ ರೈತರು ತೊಡಗಿಕೊಂಡ ಕಾರಣ ಈ ಬಾರಿಯ ಕೃಷಿ ಮೇಳಕ್ಕೆ ರೈತರ ಸಂಖ್ಯೆ ತೀರಾ ಕಡಿಮೆ. ಧಾರವಾಡ ಹಾಗೂ ಸುತ್ತಲಿನ ಎರಡ್ಮೂರು ಜಿಲ್ಲೆಗಳ ರೈತರು ಮಾತ್ರ ಭಾಗವಹಿಸಿದ್ದು, ಹುಬ್ಬಳ್ಳಿ-ಧಾರವಾಡ ನಗರದ ಜನರೇ ಈ ಬಾರಿಯ ಕೃಷಿ ಮೇಳದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ. ಭಾನುವಾರವಂತೂ ಮಹಾನಗರದ ಜನರಿಂದ ಮೇಳ ತುಂಬಿತ್ತು. ರೈತರು ಕೃಷಿ ಚಟುವಟಿಕೆಗಳತ್ತ ಗಮನ ಹರಿಸುತ್ತಿದ್ದರೆ, ನಗರದ ಜನರು ಮೇಳವನ್ನು ಶಾಂಪಿಂಗ್‌ ರೀತಿಯಲ್ಲಿ ಪರಿಗಣಿಸಿದಂತೆ ಕಂಡುಬಂತು.

ಕಬ್ಬಿನ ಬೆಳೆ ಕಾರ್ಯಾಗಾರ:

ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕಬ್ಬು ಬೆಳೆಯ ಅಧಿಕ ಉತ್ಪಾದನಾ ತಾಂತ್ರಿಕತೆ ಕುರಿತು ನಡೆದ ಕಾರ್ಯಾಗಾರವನ್ನು ಕುಲಪತಿ ಡಾ. ಎಂ.ಬಿ. ಚೆಟ್ಟಿಉದ್ಘಾಟಿಸಿದರು. ಹೆಚ್ಚಿನ ಕಬ್ಬು ಸಾಗುವಳಿ ಕ್ಷೇತ್ರ ಇರುವ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ ಹಾಗೂ ಇತರೆ ಭಾಗಗಳಲ್ಲಿ ಅಧಿಕ ಇಳುವರಿ ಪಡೆಯುವುದು ಕಷ್ಟವಾಗಿದ್ದು, ವೈಜ್ಞಾನಿಕವಾಗಿ ನಿರ್ವಹಿಸಿದಾಗ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದರು.

ಕಬ್ಬಿನ ಬೆಳೆಯಲ್ಲಿ ಹೊಸ ತಳಿಗಳು, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಕಳೆ ನಿರ್ವಹಣೆ, ಗೊಣ್ಣೆ ಹುಳುವಿನ ನಿರ್ವಹಣೆ, ಕಡಿಮೆ ಖರ್ಚಿನಲ್ಲಿ ಕಬ್ಬಿನ ಸಸಿ ಉತ್ಪಾದನೆ, ಕುಳೆ ಕಬ್ಬು ನಿರ್ವಹಣೆ ಕುರಿತು ವಿವಿಧ ವಿಜ್ಞಾನಿಗಳು ರೈತರೊಂದಿಗೆ ಚರ್ಚಿಸಿದರು. ಎಕರೆಗೆ 150 ಟನ್‌ ಕಬ್ಬು ಇಳುವರಿ ಪಡೆಯುವ ಕುರಿತು ಮಹಾರಾಷ್ಟ್ರದ ಪ್ರಗತಿಪರ ರೈತ ಸಂಜಯ ಮಾನೆ, ಅಶೋಕ ಕೊತ, ಸುರೇಶ ಕಬಾಡಿ ಅನಿಸಿಕೆ ಹಂಚಿಕೊಂಡರು.

ಸಮುದಾಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೌಶಲ್ಯ ಆಧಾರಿತ ಗೃಹವಿಜ್ಞಾನ ತಾಂತ್ರಿಕತೆಗಳು ವಿಷಯದ ಮೇಲೆ ಚರ್ಚಾಕೂಟ ನಡೆಯಿತು. 46 ಅಭ್ಯರ್ಥಿಗಳು ಭಾಗವಹಿಸಿದ್ದು, ಡಾ. ಉಷಾ ಮಳಗಿ ವಹಿಸಿದ್ದರು. ಮೌಲ್ಯವರ್ಧಿತ ಆಹಾರಗಳ ಕುರಿತು ಹಾಗೂ ಹಣ್ಣು ಮತ್ತು ತರಕಾರಿಗÜಳ ಸಂಸ್ಕರಣೆ ಬಗ್ಗೆ ಡಾ. ಪುಷ್ಪಾ ಭಾರತಿ ಮಾಹಿತಿ ನೀಡಿದರು.

ಸಾಧಕ ರೈತರಿಗೆ ಪ್ರಶಸ್ತಿ:

ಹಾಗೆಯೇ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ರೈತರಿಗೆ ತಾಲೂಕು ಮಟ್ಟದ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿ ವಿಶ್ರಾಂತ ಕುಲಪತಿ ಡಾ. ಎಸ್‌.ಎ. ಪಾಟೀಲ ಮಾತನಾಡಿ, ರೈತರು ಆದಾಯವನ್ನು ಹೆಚ್ಚಿಸಲು ವೈವಿಧ್ಯಮಯ ಕೃಷಿ, ಮೌಲ್ಯವರ್ಧನೆ, ಮಿಶ್ರ ಬೆಳೆ, ಪಶುಸಂಗೋಪನೆ ಮತ್ತು ವಿವಿಧ ಕೃಷಿಯೇತರ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಆಡಳಿತ ಮಂಡಳಿ ಸದ್ಯ ಶಶಿಮೌಳಿ ಕುಲಕರ್ಣಿ ಇದ್ದರು.

ಜಾನುವಾರು ಪ್ರದರ್ಶನ:

ಜಾನುವಾರುಗಳ ಪ್ರದರ್ಶನ ವಿಭಾಗದಲ್ಲಿ ವಿವಿಧ ಜಾತಿಯ ಆಕಳು, ಎಮ್ಮೆ, ಕುರಿ, ಆಡು, ಕೋಳಿ ತಳಿಗಳು, ಎತ್ತು, ಹೋರಿ ಮತ್ತು ಕುದುರೆ ಹಾಗೂ ಇದಲ್ಲದೇ ವಿವಿಧ ಮೇವಿನ ತಳಿಗಳನ್ನು ಪ್ರದರ್ಶಿಸಲಾಯಿತು. ಹಾಗೆಯೇ, ಫಲ ಪುಷ್ಪ ಹಾಗೂ ಔಷಧ ಮತ್ತು ಸುಗಂಧ ದ್ರವ್ಯ ಸಸ್ಯಗಳ ಪ್ರದರ್ಶನ ವಿಭಾಗದಲ್ಲಿ ಲಾಭದಾಯಕವಾದ ಕತ್ತರಿಸಿದ ಹೂಗಳು, ಬಿಡಿ ಹೂಗಳು ವಿವಿಧ ಹಣ್ಣು ಮತ್ತು ತರಕಾರಿಗಳು, ಬೊನ್ಸಾಯ್‌ ಗಿಡಗಳು, ವಿವಿಧ ಹೂವು ಜೋಡಣೆಗಳು, ಒಣ ಹೂಗಳ ಜೋಡಣೆ, ಇತರೆ ಉದ್ಯಾನ ಹೂಗಳು, ವಿವಿಧ ತರಕಾರಿ, ಇತ್ಯಾದಿಗಳು ಜನರ ಮೆಚ್ಚುಗೆ ಪಡೆದವು.

ಮೇಳದ 2ನೇ ದಿನ ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ 1500 ರೈತರು ಭೇಟಿ ನೀಡಿ ವಿವಿಧ ಸಮಸ್ಯೆಗಳನ್ನು ವಿಜ್ಞಾನಿಗಳ ಜತೆಗೆ ಚರ್ಚಿಸಿ ಪರಿಹಾರ ಕಂಡುಕೊಂಡರು. ಅಂದಾಜು ಎರಡೂವರೆ ಲಕ್ಷ ರೈತರಿಗೆ, ವಿದ್ಯಾರ್ಥಿಗಳಿಗೆ, ರೈತ ಮಹಿಳೆಯರಿಗೆ, ವಿಸ್ತರಣಾ ಕಾರ್ಯಕರ್ತರಿಗೆ, ಇಲಾಖೆ ಅಧಿಕಾರಿಗಳಿಗೆ ತಮ್ಮ ತಮ್ಮ ಪರಿಕರಗಳ ಹಾಗೂ ತಾಂತ್ರಿಕತೆಗಳ ಬಗ್ಗೆ ಪರಿಚಯಿಸುವ ಹಸ್ತಪ್ರತಿಗಳು ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಮನದಟ್ಟಾಗುವಂತೆ ಪರಿಚಯಿಸಲಾಯಿತು ಎಂದು ವಿಸ್ತರಣಾ ಅಧಿಕಾರಿ ಡಾ. ರಮೇಶಬಾಬು ತಿಳಿಸಿದರು.
 

click me!