ದಸರಾಗೆ Lingambudhi Botanical Garden ಲೋಕಾರ್ಪಣೆ

By Kannadaprabha News  |  First Published Aug 30, 2022, 10:35 PM IST
  • ದಸರಾಗೆ ಲಿಂಗಾಂಬುಧಿ ಬಟಾನಿಕಲ್‌ ಲೋಕಾರ್ಪಣೆ
  • -ಮುಖ್ಯಮಂತ್ರಿ ಸಮಯ ನಿಗದಿ ಪಡಿಸುತ್ತಿದ್ದಂತೆ ಲೋಕಾರ್ಪಣೆಗೆ ಸಿದ್ಧತೆ
  • ತೋಟಗಾರಿಕಾ ಇಲಾಖೆಯಿಂದ ಮಾಹಿತಿ
  • ರಾಜ್ಯದ 2ನೇ ಬಟಾಲಿಕ್‌ ಗಾರ್ಡನ್‌
  • 15 ಎಕರೆ ಪ್ರದೇಶದಲ್ಲಿ 650ಕ್ಕೂ ಹೆಚ್ಚು ಸಸ್ಯ, ಗಿಡ ಪೋಷಣೆ

ಸಂಪತ್‌ ತರೀಕೆರೆ

 ಬೆಂಗಳೂರು (ಆ.30) :ಲಾಲ್‌ಬಾಗ್‌ ಮಾದರಿಯಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಟಾನಿಕಲ್‌ ಗಾರ್ಡನ್‌ ನಿರ್ಮಾಣವಾಗಿದ್ದು, ದಸರಾ ಹಬ್ಬದ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ತೋಟಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ. ಮೈಸೂರಿ(Mysuru)ನ ವಿವೇಕಾನಂದ ನಗರ(Vivekananda Nagar) ಸಮೀಪದ ಲಿಂಗಾಂಬುಧಿ ಕೆರೆ(Lingambhudhi lake) ಆವರಣದ 15 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ(Department of Horticulture)ಯು ಸುಮಾರು .4 ಕೋಟಿಗಳಿಗೂ ಅಧಿಕ ವೆಚ್ಚದಲ್ಲಿ ಲಿಂಗಾಂಬುಧಿ ಬಟಾನಿಕಲ್‌ ಗಾರ್ಡನ್‌(Lingambudhi Botanical Garden) ನಿರ್ಮಿಸುತ್ತಿದೆ. ಈಗಾಗಲೇ ಶೇ.90ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದ್ದು, ದಸರಾ ಉತ್ಸವದ ವೇಳೆಗೆ ಪೂರ್ಣಗೊಳ್ಳಲಿದೆ. ನಂತರ ದಿನಾಂಕ ನಿಗದಿಪಡಿಸಿ ಲೋಕಾರ್ಪಣೆಗೊಳಿಸುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tap to resize

Latest Videos

ಬೆಂಗ್ಳೂರಲ್ಲಿ ಕಳೆದ 50 ವರ್ಷದಲ್ಲೇ ಅತೀ ತಣ್ಣನೆಯ ದಿನ ದಾಖಲು: ಗಾರ್ಡನ್‌ ಸಿಟಿ ಕೂಲ್‌ ಕೂಲ್‌..!

ಲಾಲ್‌ಬಾಗ್‌(Lalbagh) ಮತ್ತು ಊಟಿ(Ooty) ಮಾದರಿಯಲ್ಲಿ ರಾಜ್ಯದ ಮತ್ತೆಲ್ಲೂ ಬಟಾನಿಕಲ್‌ ಗಾರ್ಡನ್‌ ಇಲ್ಲ. ಆದ್ದರಿಂದ 2011ರಲ್ಲಿ ಐದು ಹೊಸ ಬಟಾನಿಕಲ್‌ ಗಾರ್ಡನ್‌ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಅದರಲ್ಲಿ ಲಿಂಗಾಂಬುಧಿ ಬಟಾನಿಕಲ್‌ ಗಾರ್ಡನ್‌ ಕೂಡ ಒಂದು. ಈ ಗಾರ್ಡನ್‌ನಲ್ಲಿ ಅಳಿವಿನಂಚಿನಲ್ಲಿರುವ ಗಿಡ, ಮರಗಳನ್ನು ಸಂರಕ್ಷಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಅತ್ಯಂತ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಗಿಡಗಳನ್ನು ತಂದು ಪೋಷಿಸಲಾಗುತ್ತಿದೆ. ಜೊತೆಗೆ ಅಪರೂಪದ ಔಷಧಿ ಸಸ್ಯಗಳು, ಹೂವಿನ ಗಿಡಗಳು ಇಲ್ಲಿವೆ. ಮುಖ್ಯವಾಗಿ ಹೊಂಗೆ, ಮಾವು, ಬಗನಿ, ಬಿಲ್ವಪತ್ರೆ, ನಾಗಸಂಪಿಗೆ, ನಂದಿಮರ, ಸಂಪಿಗೆ, ಸಾಗವಾನಿ, ಸುರಹೊನ್ನೆ, ಹಲಸು, ಶ್ರೀಗಂಧ, ರಾಮಪತ್ರೆ, ರಾಮಪತ್ರೆ, ರುದ್ರಾಕ್ಷಿ, ಬೇವು, ಬೆಟ್ಟನೆಲ್ಲಿ, ಗುಲ್ಮೊಹರ್‌, ದೇವದಾರಿ, ನಂದಿ ಸೇರಿದಂತೆ ದೇಶ, ವಿದೇಶಗಳ ಸುಮಾರು 650ಕ್ಕೂ ಹೆಚ್ಚು ಗಿಡ, ಮರಗಳು ಇಲ್ಲಿರಲಿವೆ.

ಪ್ರತ್ಯೇಕ ವಿಭಾಗ ನಿರ್ಮಾಣ:

15 ಎಕರೆಯಲ್ಲಿರುವ ಬಟಾನಿಕಲ್‌ ಗಾರ್ಡನ್‌ನಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಅಳಿವಿನಂಚಿನಲ್ಲಿರುವ ಗಿಡ, ಮರಗಳು, ವಾಯು ವಿಹಾರಕ್ಕೆ ಅನುಕೂಲವಾಗುವಂತೆ ವಾಕಿಂಗ್‌ ಪಾಥ್‌, ವಿಶ್ರಾಂತಿ ಆಸನಗಳು, ಕಲ್ಲಿನ ಮಂಟಪ, ಔಷಧಿ ಸಸ್ಯಗಳ ವಿಭಾಗ, ಬಿದಿರು ಬ್ಲಾಕ್‌, ಗುಲಾಬಿ ಗಾರ್ಡನ್‌, ಸಸ್ಯಾಲಯ, ಹಣ್ಣುಗಳ ಬ್ಲಾಕ್‌ ಹೀಗೆ ಹಲವು ವಿಭಾಗಗಳನ್ನು ಮಾಡಿದ್ದು ಎಲ್ಲದಕ್ಕೂ ಪ್ರಾಮುಖ್ಯತೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಗಾರ್ಡನ್‌ ಅಭಿವೃದ್ಧಿಗೆ ಕಳೆದ 11 ವರ್ಷಗಳಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶ್ರಮವಹಿಸಿ ಅತ್ಯಂತ ಅಪೂರ್ವವಾದ ಸಸ್ಯಗಳನ್ನು ಸಂಗ್ರಹಿಸಿ, ಇಲ್ಲಿ ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮೈಸೂರು ಅರಮನೆಯ ಫಿರಂಗಿ ಗಾಡಿಗಳಿಗೆ ಪೂಜೆ, ದಸರಾ ಮಹೋತ್ಸವಕ್ಕೆ ಸಾಂಕೇತಿಕ ಚಾಲನೆ

ಚಿಟ್ಟೆಉದ್ಯಾನ:

ಲಿಂಗಾಂಬುಧಿ ಬಟಾನಿಕಲ್‌ ಗಾರ್ಡನ್‌ ಆವರಣದಲ್ಲೇ ಚಿಟ್ಟೆಪಾರ್ಕ್ ನಿರ್ಮಿಸುವ ಯೋಜನೆಯೂ ಇದೆ. ಚಿಟ್ಟೆಗಳ ಆಕರ್ಷಣೆಗಾಗಿ ಹೂವು, ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಲಿಂಗಾಂಬುಧಿ ಕೆರೆಯಲ್ಲಿ ಆಶ್ರಯ ಪಡೆದಿರುವ ದೇಶ ವಿದೇಶಗಳ ವಲಸೆ ಪಕ್ಷಿ ಸಂಕುಲ ಸಂತಾನೋತ್ಪತ್ತಿ ನಡೆಸಲು ಅನುಕೂಲವಾಗುವಂತೆ ಸುರಕ್ಷತೆ ಒದಗಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೋಟಿಂಗ್‌ಗೆ ಅವಕಾಶ ಕೊಡದಿರಲು ನಿರ್ಧರಿಸಲಾಗಿದೆ. ಜೊತೆಗೆ ಬಟಾನಿಕಲ್‌ ಗಾರ್ಡನ್‌ನಲ್ಲಿ ನೀರು ನಿಲ್ಲಲು ಅನುಕೂಲವಾಗುವಂತೆ ಕೊಳವೊಂದನ್ನು ನಿರ್ಮಿಸುತ್ತಿದ್ದು, ಅದರ ಕೆಲಸ ಮಾತ್ರ ಬಾಕಿ ಇದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಸರಾ ವೇಳೆಯಲ್ಲಿ ಮುಖ್ಯಮಂತ್ರಿಯವರಿಂದ ಲಿಂಗಾಂಬುಧಿ ಬಟಾನಿಕಲ್‌ ಗಾರ್ಡನ್‌ ಲೋಕಾರ್ಪಣೆ ಮಾಡಬೇಕು ಎಂಬ ಉದ್ದೇಶ ಹೊಂದಲಾಗಿದೆ. ಮುಖ್ಯಮಂತ್ರಿಯವರು ಸಮಯ ನಿಗದಿಯಾದ ಕೂಡಲೇ ಉದ್ಘಾಟನೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುವುದು.

-ನಾಗೇಂದ್ರ ಪ್ರಸಾದ್‌, ನಿರ್ದೇಶಕ, ತೋಟಗಾರಿಕೆ ಇಲಾಖೆ.

click me!