ಬೆಂಗ್ಳೂರಲ್ಲಿ ಇಂದು ಗುಡುಗು, ಮಿಂಚು ಸಹಿತ ಮಳೆ

By Girish Goudar  |  First Published Mar 24, 2022, 8:35 AM IST

*  ಗರಿಷ್ಠ ಉಷ್ಣತೆ 33 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ಉಷ್ಣತೆ 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆ
*  ಬೆಂಗಳೂರಿನಲ್ಲಿ ಕಳೆದ 4 ದಿನಗಳಿಂದ ಸುರಿಯುತ್ತಿರುವ ಮಳೆ
*  ಸುಳ್ಯ, ಕಡಬ ತಾಲೂಕಿನ ಹಲವೆಡೆ ಮಳೆ


ಬೆಂಗಳೂರು(ಮಾ.24): ಬೆಂಗಳೂರು(Bengaluru) ನಗರದಲ್ಲಿ ಗುರುವಾರ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದ್ದು ಮೋಡದ ವಾತಾವರಣ ಇರಲಿದೆ. ವೇಗದ ಗಾಳಿ ಬೀಸುವ ನಿರೀಕ್ಷೆಯಿದ್ದು ಗರಿಷ್ಠ ಉಷ್ಣತೆ 33 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ಉಷ್ಣತೆ 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ(Department of Meteorology) ಹೇಳಿದೆ.

ಬೆಂಗಳೂರು ನಗರದಲ್ಲಿ ಕಳೆದ 4 ದಿನಗಳಿಂದ ಪ್ರತಿದಿನ ಸುರಿಯುತ್ತಿದ್ದ ಮಳೆ(Rain) ಬುಧವಾರ ವಿರಾಮ ಪಡೆದುಕೊಂಡಿತ್ತು. ನಗರದಲ್ಲಿ ಆಗಾಗ ಮೋಡ ಕವಿದ ವಾತಾವರಣ ಇದ್ದರೂ ಮಳೆ ಸುರಿಯಲಿಲ್ಲ. ಮೋಡ ಇದ್ದ ಹಿನ್ನೆಲೆಯಲ್ಲಿ ಧಗೆ ಹೆಚ್ಚಿತ್ತು, ಆದರೆ ಬಿಸಿಲಿನ ಪ್ರಖರತೆ ಇರಲಿಲ್ಲ. ನಗರದಲ್ಲಿ ಗರಿಷ್ಠ ಉಷ್ಣತೆ 33.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

Tap to resize

Latest Videos

ಬೆಂಗ್ಳೂರಲ್ಲಿ ತಗ್ಗದ ವರುಣನ ಆರ್ಭಟ: ಇನ್ನೂ ಮೂರ್ನಾಲ್ಕು ದಿನ ಮಳೆ ಸಾಧ್ಯತೆ

ಸುಳ್ಯ, ಕಡಬ ತಾಲೂಕಿನ ಹಲವೆಡೆ ಮಳೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada) ಸುಳ್ಯ, ಕಡಬ ತಾಲೂಕಿನಲ್ಲಿ ಹಲವೆಡೆ ಬುಧವಾರ ಸಾಯಂಕಾಲ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಕಾರ ಮಳೆಯಾಗಿದೆ. 
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಬಿಳಿನೆಲೆ, ಕಡ್ಯ ಕೊಣಾಜೆ, ಇಚ್ಲಂಪಾಡಿ, ನೂಜಿಬಾಳ್ತಿಲ, ರೆಂಜಿಲಾಡಿ, ಕಲ್ಲುಗುಡ್ಡೆ, ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಕಲ್ಲಾಜೆ, ಪಂಜ , ಸೇರಿದಂತೆ ತಾಲೂಕಿನ ಹಲವೆಡೆ ಗುಡುಗು, ಗಾಳಿ ಸಹಿತ ಧಾರಕಾರ ಮಳೆಯಾಗಿದೆ. ಗಾಳಿಗೆ ಕೆಲವೆಡೆ ಮರದ ಗೆಲ್ಲು ಮುರಿದು ಬಿದ್ದಿದ್ದು, ಕೆಲವೆಡೆ ಮೇಲ್ಚಾವಣಿಗಳು ಹಾರಿ ಹೋಗಿ ಹಾನಿಯುಂಟಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆ

ಚಿಕ್ಕಮಗಳೂರು(Chikkamagaluru): ಜಿಲ್ಲೆಯ ಮಲೆನಾಡಿನ ಕೆಲವೆಡೆ ಬುಧವಾರ ಸಾಧಾರಣ ಮಳೆ ಬಂದಿದೆ. ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಸಂಜೆಯ ವೇಳೆಗೆ ಮಳೆ ಬಂದಿದ್ದು, ಇನ್ನುಳಿದ ತಾಲೂಕುಗಳಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಇತ್ತು. ಚಿಕ್ಕಮಗಳೂರು ತಾಲೂಕಿನಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಇದ್ದು, ಸಂಜೆ ತುಂತುರು ಮಳೆ ಬಂದಿತು. ಶೃಂಗೇರಿ ತಾಲೂಕಿನಲ್ಲೂ ಇದೇ ವಾತಾವರಣ ಇದ್ದು, ಮಳೆಯ ತೀವ್ರತೆ ಕಡಿಮೆ ಇದ್ದು, ಮುಂಗಾರಿನ ರೀತಿಯಲ್ಲಿ ಸಾಧಾರಣವಾಗಿ ಬಂದಿತು.

Bengaluru Record Rainfall: ಸಿಲಿಕಾನ್‌ ಸಿಟಿಯಲ್ಲಿ ದಶಕದ ದಾಖಲೆಯ ಬೇಸಿಗೆ ಮಳೆ!

ಶೃಂಗೇರಿ ತಾಲೂಕಿನಾದ್ಯಂತ ಉತ್ತಮ ಮಳೆ

ಶೃಂಗೇರಿ: ತಾಲೂಕಿನಾದ್ಯಂತ ಬುಧವಾರ ಉತ್ತಮ ಮಳೆಯಾಗಿದೆ. ಬೆಳಗ್ಗೆಯಿಂದಲೇ ಆಗಾಗ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನದಿಂದ ಮಳೆ ಆರಂಭಗೊಂಡಿತು. ತಂಡಿ ಗಾಳಿ ಸಹಿತ ಒಂದೆ ಸಮನೆ ಮಳೆ ಸುರಿದಿದೆ. ತುಂಗಾನದಿಯ ಉಗಮ ಸ್ಥಳವಾಗಿರುವ ಪಶ್ಚಿಮಘಟ್ಟಗಳ ತಪ್ಪಲು ಪ್ರದೇಶದಲ್ಲಿರುವ ಕೆರೆಕಟ್ಟೆಸುತ್ತಮುತ್ತಲ ಪ್ರದೇಶಗಳಲ್ಲಿ, ನೆಮ್ಮಾರು ಪ್ರದೇಶದಲ್ಲಿ ಮಳೆಗಾಲದ ವಾತಾವ​ರಣ ಕಂಡು ಬಂದಿ​ದೆ. ಶೃಂಗೇರಿ ಪಟ್ಟಣದಲ್ಲಿಯೂ ಮಧ್ಯಾಹ್ನದಿಂದ ಸಂಜೆಯವರೆಗೂ ನಿರಂತರವಾಗಿ ಸಾಧಾರಣ ಮಳೆ ಮುಂದುವರಿದಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಹಗಲು ರಾತ್ರಿ ವೇಳೆಯಲ್ಲಿಯೂ ತಾಲೂಕಿನ ವಿವಿಧೆಡೆ ಮಳೆಯಾಗುತ್ತಿದೆ. ಸಂಜೆಯವರೆಗೂ ಮಳೆ ಮುಂದುವರಿದಿತ್ತು.

ಚನ್ನಗಿರಿ: ದಾವಣಗೆರೆ(Davanagere) ಜಿಲ್ಲೆಯ ಚನ್ನಗಿರಿ ಪಟ್ಟಣ ಸೇರಿ ಸುತ್ತ-ಮುತ್ತಲ ಗ್ರಾಮಗಳಲ್ಲಿ ಕೆಲನಿಮಿಷಗಳ ಕಾಲ ಬುಧುವಾರ ಸಂಜೆ ಮಳೆ ಸುರಿಯಿತು. ಕೆಲವು ದಿನಗಳಿಂದ ಸುಡುಬಿಸಿಲಿನ ಜಳಕ್ಕೆ ಜನರು ತತ್ತರಿಸಿ ಹೋಗಿದ್ದು ಬಿಸಿಯಾಗಿದ್ದ ನೆಲವು ಹದ ಮಳೆಯಿಂದಾಗಿ ತಂಪಾದಂತಾಯಿತು. ನಗರದ ಬಸ್‌ ನಿಲ್ದಾಣದ ಆವರಣದಲ್ಲಿ ಸ್ವಲ್ಪ ಹೊತ್ತು ನೀರು ನಿಲ್ಲುವಂತೆ ಮಳೆ ಸುರಿಯಿತು.
 

click me!