ಗದಗದಲ್ಲಿ ಭಾವೈಕ್ಯತೆಯ ಬೆಳಕು, 35 ವರ್ಷಗಳಿಂದ ಮುಸ್ಲಿಂ ಕುಟುಂಬದಿಂದ ಲಕ್ಷ್ಮೀಯ ಆರಾಧನೆ

Published : Nov 10, 2026, 05:10 PM IST
Gadag Muslim family Lakshmi Puja

ಸಾರಾಂಶ

ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಮುಸ್ಲಿಂ ಕುಟುಂಬ ಒಂದು ಕಳೆದ 35 ವರ್ಷಗಳಿಂದ ಶ್ರದ್ಧಾ-ಭಕ್ತಿಯಿಂದ ಹಿಂದೂ ಸಂಪ್ರದಾಯದಂತೆ ಲಕ್ಷ್ಮೀ ಪೂಜೆ ನೆರವೇರಿಸುತ್ತಿದೆ. ಕುತ್ಬುದ್ದೀನ್ ಗಡಾದ್ ಅವರು ತಮ್ಮ ಪಂಕ್ಚರ್ ಅಂಗಡಿಯಲ್ಲಿ ಸನಾತನ ವಿಧಿ-ವಿಧಾನಗಳಂತೆ ದೀಪಾವಳಿ ಆಚರಿಸುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ.

ಗದಗ: ಬೆಳಕಿನ ಹಬ್ಬ ದೀಪಾವಳಿ ಕೇವಲ ಹಣತೆ, ಪಟಾಕಿಗಳ ಸಂಭ್ರಮವಷ್ಟೇ ಅಲ್ಲ. ಅದು ಮನಸ್ಸುಗಳನ್ನು ಬೆಸೆಯುವ, ದ್ವೇಷದ ಕತ್ತಲೆಯನ್ನು ಓಡಿಸಿ ಪ್ರೀತಿ-ಸೌಹಾರ್ದತೆಯ ಬೆಳಕು ಹರಡುವ ಮಹಾನ್ ಪರ್ವ. ಅಂತೆಯೇ ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲಿ ಮನಸ್ಸಿಗೆ ಮುದ ನೀಡುವ ಅಪರೂಪದ ಭಾವೈಕ್ಯತೆಯ ಕ್ಷಣ ಅನಾವರಣಗೊಂಡಿದೆ.

ಇಲ್ಲಿನ ಮುಸ್ಲಿಂ ಕುಟುಂಬ ಕಳೆದ ಮೂರೂವರೆ ದಶಕಗಳಿಂದ ಯಾವುದೇ ಭೇದ ಭಾವವಿಲ್ಲದೆ.. ಅತ್ಯಂತ ಶ್ರದ್ಧಾ-ಭಕ್ತಿಯಿಂದ ಹಿಂದೂ ಸಂಪ್ರದಾಯದಂತೆ ಲಕ್ಷ್ಮೀ ಪೂಜೆ ನೆರವೇರಿಸುವ ಮೂಲಕ ಸಾಮರಸ್ಯ ಮೆರೆಯುತ್ತಿದೆ. ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ನಿವಾಸಿ ಕುತ್ಬುದ್ದೀನ್ ಗಡಾದ್ ಕಳೆದ 35 ವರ್ಷಗಳಿಂದ ಲಕ್ಷ್ಮೀ ದೇವಿಯನ್ನ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ.

ಕಾಯಕವೇ ಕೈಲಾಸ

ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿ ಕುತ್ಬುದ್ದೀನ್ ಸಣ್ಣ ಪಂಕ್ಚರ್ ಅಂಗಡಿ ನಡೆಸ್ತಿದ್ದಾರೆ. ಕಾಯಕವೇ ಕೈಲಾಸ ಎಂದು ನಂಬಿರುವ ಇವರು, ಪ್ರತಿವರ್ಷ ದೀಪಾವಳಿ ಅಮಾವಾಸ್ಯೆಯ ಶುಭ ದಿನದಂದು ತಮ್ಮ ಅಂಗಡಿಯಲ್ಲಿಯೇ ಲಕ್ಷ್ಮೀ ಪೂಜೆ ನಡೆಸ್ತಾರೆ. ಈ ಪೂಜೆ ಕೇವಲ ತೋರಿಕೆಗೆ ಸೀಮಿತವಾಗಿರದೆ, ಸಂಪೂರ್ಣ ಸನಾತನ ವಿಧಿ-ವಿಧಾನಗಳಂತೆಯೇ ಶ್ರದ್ಧೆಯಿಂದ ನೆರವೇರುವುದು ಇಲ್ಲಿನ ವಿಶೇಷ.

ದೀಪಾವಳಿ ಅಮಾವಾಸ್ಯೆ ದಿನ ಕುತ್ಬುದ್ದೀನ್ ತಮ್ಮ ಪಂಕ್ಚರ್ ಅಂಗಡಿಯನ್ನು ಮಾವಿನ ಎಲೆ, ಹೂವಿನ ಹಾರಗಳಿಂದ ಶೃಂಗರಿಸುತ್ತಾರೆ. ಪೂಜಾ ಕಾರ್ಯಕ್ಕಾಗಿ ಗೌರವಾನ್ವಿತ ಸ್ವಾಮೀಜಿಗಳನ್ನು ಹಾಗೂ ಪುರೋಹಿತರನ್ನು ಅಂಗಡಿಗೆ ಸಕಲ ಗೌರವಗಳೊಂದಿಗೆ ಆಹ್ವಾನಿಸುತ್ತಾರೆ. ವೇದ ಮಂತ್ರಘೋಷಗಳ ಮಂಗಳಕರ ವಾತಾವರಣದ ನಡುವೆ, ಶಾಸ್ತ್ರೋಕ್ತವಾಗಿ ಕಳಸ ಪ್ರತಿಷ್ಠಾಪನೆ ಮಾಡಿ ಲಕ್ಷ್ಮೀ ದೇವಿಯನ್ನು ಆರಾಧಿಸಲಾಗುತ್ತದೆ. ಈ ಇಡೀ ಧಾರ್ಮಿಕ ವಿಧಿಯಲ್ಲಿ ಕುತ್ಬುದ್ದೀನ್ ಅವರು ತಮ್ಮ ಕುಟುಂಬ ಸಮೇತರಾಗಿ ಶ್ರದ್ಧಾ-ಭಕ್ತಿಯಿಂದ ಕುಳಿತು ಪೂಜೆ ಸಲ್ಲಿಸುತ್ತಾರೆ.

ಪೂಜೆ ನೆರವೇರಿಸಲು ಆಗಮಿಸಿದ ಸ್ವಾಮೀಜಿಗಳಿಗೆ ಹಾಗೂ ಅತಿಥಿಗಳಿಗೆ ಕುತ್ಬುದ್ದೀನ್ ಕುಟುಂಬ ಸಂಪ್ರದಾಯಬದ್ಧ ಆತಿಥ್ಯ ನೀಡುತ್ತದೆ. ಉತ್ತರ ಕರ್ನಾಟಕದ ಹಬ್ಬದ ವಿಶೇಷ ಸಿಹಿ ತಿನಿಸುಗಳಾದ ಹೋಳಿಗೆ ಹಾಗೂ ಕಡಬುಗಳನ್ನು ನೈವೇದ್ಯವಾಗಿ ಅರ್ಪಿಸಿ, ನಂತರ ಬಂದಂತಹ ಭಕ್ತರಿಗೆ ಮತ್ತು ಗ್ರಾಮಸ್ಥರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಸಂಭ್ರಮಕ್ಕೆ ಗ್ರಾಮದ ಹಿಂದೂ ಸೇರಿದಂತೆ ಇತರ ಸಮುದಾಯದ ನೂರಾರು ಸ್ನೇಹಿತರನ್ನು ಪ್ರೀತಿಯಿಂದ ಆಹ್ವಾನಿಸಿ, ಎಲ್ಲರೊಂದಿಗೆ ಬೆರೆತು ಹಬ್ಬವನ್ನು ಸಂಭ್ರಮಿಸಲಾಗುತ್ತದೆ.

ಕುತ್ಬುದ್ದೀನ್ ಗಡಾದ್ ಈ ಪದ್ಧತಿಯನ್ನು ನಿನ್ನೆ-ಮೊನ್ನೆಯಿಂದ ಆರಂಭಿಸಿದ್ದಲ್ಲ. ಕಳೆದ 35 ವರ್ಷಗಳಿಂದಲೂ ಚಾಚೂತಪ್ಪದೆ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ದೇವರು ಒಬ್ಬನೇ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಕುತ್ಬುದ್ದೀನ್ ಕುಟುಂಬದ ಈ ಉದಾತ್ತ ಕಾರ್ಯಕ್ಕೆ ಜಕ್ಕಲಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

Chamarajanagar: ಡಾ. ರಾಜ್‌ಕುಮಾರ್ ದೂರದ ಸಂಬಂಧಿಯ ಮನೆ ಮುಂದೆ ಭಾರೀ ಸ್ಫೋಟ, ಕಿಟಕಿ ಗಾಜುಗಳು ಪುಡಿಪುಡಿ
ಸುದೀರ್ಘ ದೀಪಾವಳಿ ರಜೆ ಮಗಿಯುತ್ತಿದ್ದಂತೆ ಆಫೀಸ್ ಚಿಂತೆ, ಇಂಟರ್‌ನೆಟ್‌ನಲ್ಲಿ ಫುಲ್ ಮೀಮ್ಸ್