
ವಿಜಯನಗರ: ಹೂವಿನಹಡಗಲಿಯ ಕಂದಾಯ ಇಲಾಖೆಯ 2ನೇ ಮಹಡಿಯ ಉಪ ನೋಂದಣಿ ಕಚೇರಿಗೆ ನಿರ್ಮಿಸಿದ್ದ ಲಿಫ್ಟ್‌ನ ಕೀ ಇಲ್ಲದೇ ವಯಸ್ಸಾಗಿರುವ ವ್ಯಕ್ತಿಗಳನ್ನು ಹೊತ್ತುಕೊಂಡು ಹೋಗುವ ಸ್ಥಿತಿ ಇನ್ನು ಬದಲಾಗಿಲ್ಲ.
ಹೌದು, ಉಪ ನೋಂದಣಾಧಿಕಾರಿ ಕಚೇರಿಗೆ ಹಿರಿಯ ನಾಗರಿಕರು, ಅಂಗವಿಕಲರು ಮೆಟ್ಟಲು ಹತ್ತಿಕೊಂಡು ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನರಿತ ಶಾಸಕ ಕೃಷ್ಣನಾಯ್ಕ ಪುರಸಭೆ ನಗರೋತ್ಥಾನ ಯೋಜನೆಯ ಉಳಿಕೆಯ ₹21 ಲಕ್ಷ ಅನುದಾನದಲ್ಲಿ ಹೊಸ ಲಿಫ್ಟ್ ನಿರ್ಮಿಸಿ ಚಾಲನೆ ನೀಡಿದ್ದರು. ಆದರೆ ಲಿಫ್ಟ್ ನಿರ್ಮಾಣ ಗುತ್ತಿಗೆ ಪಡೆದ ಗುತ್ತಿಗೆದಾರರ ಈವರೆಗೂ ಉಪ ನೋಂದಣಾಧಿಕಾರಿಗೆ ಕೀಲಿ ನೀಡಿಲ್ಲ.
ಲಿಫ್ಟ್ ಇಲ್ಲದ ಕಾರಣ ಸಾರ್ವಜನಿಕರು ವಯಸ್ಸಾಗಿರುವ ವ್ಯಕ್ತಿಯನ್ನು ಪಾಲಕರು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಚಾಲನೆ ನೀಡಿದ್ದರೂ ಇನ್ನು ಲಿಫ್ಟ್ ಕೆಲಸ ಮಾಡುತ್ತಿಲ್ಲ. ಈ ಲಿಫ್ಟ್‌ನ ಕೀ ನಮಗೆ ನೀಡುವಂತೆ ಶಾಸಕರು ತಿಳಿಸಿದ್ದಾರೆ. ಆದರೆ ಗುತ್ತಿಗೆದಾರರು ನಮಗೆ ನೀಡಿಲ್ಲ ಎನ್ನುತ್ತಾರೆ ಉಪ ನೋಂದಣಾಧಿಕಾರಿ ನಾಗೇಂದ್ರಪ್ಪ.
ಲಿಫ್ಟ್ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಉಪ ನೋಂದಣಾಧಿಕಾರಿಗೆ ಪತ್ರ ಬರೆದು ನಂತರದಲ್ಲಿ ಅವರಿಗೆ ಹಸ್ತಾಂತರಿಸುವ ಕೆಲಸ ಬಾಕಿ ಇದೆ. ಕೀ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಹೇಳಿದರು.