ಸ್ಪರ್ಧಾತ್ಮಕ ಯುಗದಲ್ಲಿ ನವಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳಿ

Published : Sep 03, 2023, 08:20 AM IST
ಸ್ಪರ್ಧಾತ್ಮಕ ಯುಗದಲ್ಲಿ ನವಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಸಾರಾಂಶ

  ಸ್ಪರ್ಧಾತ್ಮಕ ಯುಗದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉದ್ಯೋಗಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ, ಅಂತರ್ಜಾಲ, ನವಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳಿ, ಕಾಲಾಹರಣ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಸ್ಪರ್ಧಾತ್ಮಕ ಪರೀಕ್ಷೆಯ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

  ಮೈಸೂರು :  ಸ್ಪರ್ಧಾತ್ಮಕ ಯುಗದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉದ್ಯೋಗಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ, ಅಂತರ್ಜಾಲ, ನವಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳಿ, ಕಾಲಾಹರಣ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಸ್ಪರ್ಧಾತ್ಮಕ ಪರೀಕ್ಷೆಯ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪಿಡಿಒ, ಎಫ್‌ಡಿಎ, ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಸ್ಪರ್ಧಾತ್ಮಕ ಶಿಬಿರಾರ್ಥಿಗಳೂ ತಮ್ಮ ಕನಸುಗಳಿಗೆ ಒತ್ತಾಸೆಯಾಗಬೇಕೆ ವಿನಃ ಬೇಲಿ ಹಾಕಿಕೊಳ್ಳಬಾರದು. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿ ಆಯಾಮಗಳನ್ನು ಅರಿತುಕೊಳ್ಳಬೇಕು. ಕೇವಲ ಗೈಡ್‌ ಪುಸ್ತಕಗಳಿಂದ ಸಫಲರಾಗಲು ಸಾಧ್ಯವಿಲ್ಲ, ಪ್ರತಿನಿತ್ಯ ವಿವಿಧ ದಿನಪತ್ರಿಕೆಗಳನ್ನು 3 ಗಂಟೆಗಳ ಕಾಲ ಓದುವುದರಿಂದ ಪರಿಣಾಮಕಾರಿಯಾಗಿ ಸಹಕಾರಿಯಾಗಲಿದೆ. ದಿನಪತ್ರಿಕೆಗಳಲ್ಲಿ ಪ್ರತಿಯೊಂದು ವಿಷಯಗಳ, ಪ್ರಸ್ತುತ ವಿದ್ಯಮಾನಗಳ ಬಗೆಗೆ ಸವಿಸ್ತಾರವಾದ ವಿವರ ಸಿಗುವುದರಿಂದ ಸ್ಪರ್ಧಾತ್ಮಕ ಜಗತ್ತಿಗೆ ತಯಾರಾಗಲು ಉಪಯುಕ್ತವಾಗಲಿದೆ ಎಂದು ಅವರು ಸಲಹೆ ನೀಡಿದರು.

ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗೇರಿರುವ ಅನೇಕರನ್ನು ನೋಡಿ ಆಗುವುದಿಲ್ಲ ಎಂಬ ಮನೋಭಾವನೆ ಬಿಟ್ಟು ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು. ಪರೀಕ್ಷೆಯನ್ನು ನಾಳೆಯೇ ಇದೆ ಎಂದು ಭಾವಿಸಿ ಪ್ರತಿನಿತ್ಯ ಶ್ರಮ ಪಡುವುದರಿಂದ ಯಶಸ್ಸು ಸಿಗಲಿದೆ ಎಂದರು.

ಗ್ರಾಮೀಣ ಭಾಗದ ಅನೇಕರಿಗೆ ಅವಕಾಶಗಳಿರುವುದಿಲ್ಲ. ಆದರೆ ರಾಜ್ಯ ಮುಕ್ತ ವಿವಿ ನಿಮಗೆಲ್ಲಾ ಉತ್ತಮ ಅವಕಾಶ ಕಲ್ಪಿಸಿದೆ. ಅದನ್ನು ಸದುಪಯೋಗಪಡಿಸಿಕೊಂಡು ಯಶಸ್ಸಾಗುವಂತೆ ಶಿಬಿರಾರ್ಥಿಗಳಿಗೆ ಅವರು ಶುಭ ಹಾರೈಸಿದರು.

ನಿರಂತರವಾಗಿ ಪ್ರಯತ್ನಿಸಿ

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಪ್ರತಿ ವಿದ್ಯಾರ್ಥಿಯು ತನ್ನ ಅಧ್ಯಯನವನ್ನು ಶ್ರದ್ಧೆಯಿಂದ ಮಾಡುವುದಾದರೆ ಅದೇ ಕಾಯಕವೇ ಕೈಲಾಸ. ಮಾನವತಾವಾದದೊಂದಿಗೆ ವಿದ್ಯಾರ್ಥಿಗಳು ಅತ್ತ ಇತ್ತ ನೋಡದೆ ಓದಿನೆಡೆಗೆ ಮಾತ್ರವೇ ನೋಡಿ ಶ್ರಮ ವಹಿಸಿದರೆ ಫಲ ಲಭಿಸಲಿದೆ. ನಾವೆಲ್ಲರೂ ಯಾವ ಹಂತದಲ್ಲಿದ್ದರೂ ವಿಚಾರ ಸಂಗ್ರಹಕ್ಕೆ ಒತ್ತು ನೀಡಬೇಕು. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕಬಿನಿ ಜಲಾಶಯ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಬಿ. ಸುಪ್ರಿಯ ಬಾಣಗಾರ್‌, ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಎಲ್‌.ಎನ್‌. ಮೂರ್ತಿ, ಹಣಕಾಸು ಅಧಿಕಾರಿ ಡಾ.ಎ. ಖಾದರ್‌ ಪಾಷ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಡೀನ್‌ ಪ್ರೊ. ರಾಮನಾಥಂ ನಾಯ್ಡು, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಹಾಯಕ ಪ್ರಾಧ್ಯಾಪಕ ಎಚ್‌. ಬೀರಪ್ಪ ಮೊದಲಾದವರು ಇದ್ದರು.

ಸಾಧನೆ ಮಾಡಬೇಕೆಂಬ ಛಲದೊಂದಿಗೆ ಹಲವು ತ್ಯಾಗಕ್ಕೂ ಸಿದ್ಧರಿರಬೇಕು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ತಮ್ಮಿಂದ ಎಲ್ಲವೂ ಸಾಧ್ಯ ಎಂಬ ಮನೋಭಾವ ರೂಢಿಸಿಕೊಳ್ಳಬೇಕು. ಕೆಲವೊಮ್ಮೆ ವಿಫಲರಾದರು ಮುಂದೊಂದು ದಿನ ಸಫಲರಾಗಬಹುದು. ಆದರೆ ನಿರಂತರ ಓದಿನಲ್ಲಿ ತಲ್ಲೀನರಾಗಬೇಕು.

- ಬಿ. ಸುಪ್ರಿಯ ಬಾಣಗಾರ್‌, ವಿಶೇಷ ಭೂ ಸ್ವಾಧೀನಾಧಿಕಾರಿ, ಕಬಿನಿ ಜಲಾಶಯ ಯೋಜನೆ

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ