ಗ್ರಾಮೀಣ ಭಾಗದ ದೇಶಿ ಕಲೆಗಳನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಿದ್ದರಾಮ ಸೇನೆ, ಜಿಎಸ್‌ಪಿ ಪತ್ತಿನ ಸಹಕಾರ ಸಂಘ, ಅಕ್ಷಯ ಹಾಗೂ ಜಿಎಸ್‌ಎಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಪಟ್ಟಣದ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಂದಿಧ್ವಜ ಸಿರಿ 2023 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುಬ್ಬಿ : ಗ್ರಾಮೀಣ ಭಾಗದ ದೇಶಿ ಕಲೆಗಳನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಿದ್ದರಾಮ ಸೇನೆ, ಜಿಎಸ್‌ಪಿ ಪತ್ತಿನ ಸಹಕಾರ ಸಂಘ, ಅಕ್ಷಯ ಹಾಗೂ ಜಿಎಸ್‌ಎಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಪಟ್ಟಣದ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಂದಿಧ್ವಜ ಸಿರಿ 2023 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಕ್ಷಯ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ವಕೀಲ ಜಿ.ಎಸ್. ಪ್ರಸನ್ನಕುಮಾರ್ ಕೇವಲ ಲಿಂಗಾಯಿತ ಸಮುದಾಯಕ್ಕೆ ಸೀಮಿತವಾಗಿರುವ ಈ ಕಲೆಯನ್ನು ಜಾತ್ಯತೀತಗೊಳಿಸಿ, ಉಳಿಸಿ ಬೆಳೆಸಿದಲ್ಲಿ ಮುಂದಿನ ತಲೆಮಾರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ನ ವತಿಯಿಂದ ಕ್ರಿಯಾಯೋಜನೆ ರೂಪಿಸುತಿದ್ದೇವೆ. ಎಲ್ಲರೂ ಮನಸ್ಸು ಮಾಡಿದ್ದಲ್ಲಿ ಮಾತ್ರ ಇಂತಹ ಕಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಾಡ ಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ತನ್ನದೇ ಆದ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಲಿಂಗದ ವೀರರ ಕುಣಿತ ಹಾಗೂ ನಂದಿಧ್ವಜ ಕುಣಿತಗಳಿಗೆ ವಿಶೇಷ ಕಾಯಕಲ್ಪ ನೀಡಿದಲ್ಲಿ ಮಾತ್ರ ಇಂತಹ ಕಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಮಾತನಾಡಿ, ಕಲೆ ಹಾಗೂ ಸಾಹಿತ್ಯದ ತವರೂರು ಎನಿಸಿರುವ ಗುಬ್ಬಿ ಪಟ್ಟಣದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಗತವೈಭವ ಮರುಕಳಿಸಿದಂತೆ ಆಗಿದೆ. ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಕಲಾ ಸಾಮ್ರಾಟ ಗುಬ್ಬಿ ವೀರಣ್ಣರ ಹೆಸರನ್ನು ಸಾರ್ಥಕಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಹಿತಿ ಡಾ.ನಂಜುಂಡಸ್ವಾಮಿ ಮಾತನಾಡಿ, ಈ ಉತ್ಸವದಲ್ಲಿ ಸುಮಾರು 50 ನಂದಿ ಧ್ವಜಗಳು, 80 ಲಿಂಗದವೀರರು, 2 ಬಸವಗಳು, ಕಹಳೆವಾದ್ಯ, ಚಿಟ್ಟಿಮೇಳ ಇತ್ಯಾದಿ ವಾದ್ಯಗಳ ತಂಡಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ರಂಗೇರಿಸಿದ್ದವು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಗುಬ್ಬಿ ವೀರಣ್ಣ ಟ್ರಸ್ಟ್‌ನ ಆನಂದರಾಜ್, ಜಾವಗಲ್ ಮಂಜುನಾಥ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ರಮೇಶ್, ಸಿದ್ದರಾಮ ಸೇನೆಯ ಅಧ್ಯಕ್ಷ ಹೇಮಂತ್ ಕುಮಾರ್, ಸದಸ್ಯರಾದ ಶಿವು, ಸಿದ್ದೇಶ್, ಗಂಗಾಧರ್, ಬಸವರಾಜು, ನಾಗರಾಜು ಹಾಗೂ ಅಪಾರ ಕಲಾ ಪ್ರೋತ್ಸಾಹಕರು ಹಾಜರಿದ್ದರು.
ಲಿಂಗದ ವೀರರ ಕುಣಿತ ವಿಶಿಷ್ಟ ಕಲಾ ಪ್ರಕಾರವಾಗಿದೆ. ಕಲಾವಿದ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ ಅನುಭವವನ್ನು ಪಡೆದಲ್ಲಿ ಮಾತ್ರ ಆ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾಗುತ್ತದೆ. ಮಾಲತಮ್ಮ ಆರ್ಚ್ ಫೌಂಡೇಶನ್ ಹಾಗೂ ಗುರುಸಿದ್ದರಾಮ ಸೇನೆ ಸಹಯೋಗದಲ್ಲಿ ಇಂತಹ ಕಲಾ ಪ್ರಕಾರಗಳಿಗೆ ವಿಶಿಷ್ಟರೂಪ ನೀಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ರೂಪಿಸುತ್ತಿದ್ದೇವೆ.
ಡಾ.ಬಿ. ಜಯಶ್ರೀ ಹಿರಿಯ ರಂಗಕಲಾವಿದೆ