ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗೂಡೋಣ

By Kannadaprabha News  |  First Published Dec 9, 2022, 5:06 AM IST

ಜಿಲ್ಲಾಧ್ಯಕ್ಷ ಒಬ್ಬನಿಂದಲೇ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಅಧ್ಯಕ್ಷನ ಜೊತೆಗೆ ಕಾರ್ಯಕರ್ತರು, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲಾ ನಾಯಕರು ಕೈಜೋಡಿಸಿದರೆ ಪಕ್ಷವನ್ನು ಜಿಲ್ಲೆಯಲ್ಲಿ ಬಲವಾಗಿ ಸಂಘಟಿಸಲು ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್‌ ನೂತನ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.


 , ತುಮಕೂರು: ಜಿಲ್ಲಾಧ್ಯಕ್ಷ ಒಬ್ಬನಿಂದಲೇ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಅಧ್ಯಕ್ಷನ ಜೊತೆಗೆ ಕಾರ್ಯಕರ್ತರು, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲಾ ನಾಯಕರು ಕೈಜೋಡಿಸಿದರೆ ಪಕ್ಷವನ್ನು ಜಿಲ್ಲೆಯಲ್ಲಿ ಬಲವಾಗಿ ಸಂಘಟಿಸಲು ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್‌ ನೂತನ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡರ ಸಮ್ಮುಖದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಆರ್‌.ರಾಮಕೃಷ್ಣ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ದುಡಿದಾಗ ಮಾತ್ರ ಸಾಧ್ಯ ಎಂದರು.

Tap to resize

Latest Videos

ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಎಂಬುದು ಇದೆ. ಇದಕ್ಕೆ ನಾನೇ ಸಾಕ್ಷಿ, ಯಾವುದೋ ಕುಗ್ರಾಮದಲ್ಲಿ ಹುಟ್ಟಿಬೆಳೆದು, ಕಾಂಗ್ರೆಸ್‌ ಪಕ್ಷ ಸೇರಿ, ನಿಷ್ಠೆಯಿಂದ ಕೆಲಸ ಮಾಡಿದ್ದಕ್ಕೆ ಇಂದು ಒಂದು ಜಿಲ್ಲೆಯ ಪಕ್ಷ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದೆ. ಬೇರೆ ಪಕ್ಷದಲ್ಲಿ ಈ ರೀತಿಯ ಸಾಮಾಜಿಕ ನ್ಯಾಯ ಕಾಣಲು ಸಾಧ್ಯವಿಲ್ಲ. ನಾನು ಜಿಲ್ಲಾಧ್ಯಕ್ಷನಾಗಲು ಸಹಕರಿಸಿದ ಎಐಸಿಸಿ ಪದಾಧಿಕಾರಿಗಳು, ಕೆಪಿಸಿಸಿ ಪದಾಧಿಕಾರಿಗಳು, ನಮ್ಮ ನಾಯಕರಾದ ಡಾ. ಜಿ.ಪರಮೇಶ್ವರ್‌ ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ನನ್ನನ್ನು ಗುರುತಿಸಿ, ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಮೂಲಕ ಹಿಂದುಳಿದ ವರ್ಗದ ದ್ವನಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದಾರೆ. ಎಲ್ಲಾ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಚಂದ್ರಶೇಖರಗೌಡ ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ಆರ್‌.ರಾಮಕೃಷ್ಣ ಮಾತನಾಡಿ, ಅಧಿಕಾರವೆಂಬುದು ಶಾಶ್ವತವಲ್ಲ. ಅಧಿಕಾರ ಸಿಕ್ಕಾಗ ನಾವೇನು ಕೆಲಸ ಮಾಡಿದ್ದೇನೆ ಎಂಬುದು ಮುಖ್ಯ. ಪಕ್ಷಕ್ಕೆ ನಿಷ್ಠಾವಂತ ಕೆಲಸ ಮಾಡಿದ ಕಾರಣಕ್ಕೆ ರಾಜ್ಯಮಟ್ಟದಲ್ಲಿ ಲಿಡ್ಕರ್‌ ಅಧ್ಯಕ್ಷನಾಗಿ ಕೆಲಸ ಮಾಡುವ ಅವಕಾಶ ದೊರೆಯಿತು. ಅದೇ ರೀತಿ ತುಮಕೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷನಾಗಿ ಆರು ವರ್ಷಗಳ ಸುದೀರ್ಘ ಅವಧಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರೆಯಿತು. ಆರೋಗ್ಯ ಹಸ್ತ, ಭಾರತ್‌ ಜೋಡೋ, ಮೇಕೆದಾಟು ಪಾದಯಾತ್ರೆ, ಸದಸ್ಯತ್ವ ಅಭಿಯಾನ ಹೀಗೆ ಎಲ್ಲಾ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದೇನೆ. ಬೇರೆ ಜಿಲ್ಲೆಗಳ ರೀತಿ, ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಕೈ ಕೈ ಮಿಲಾಯಹಿಸುವಂತಹ ಹಂತಕ್ಕೆ ಹೋಗಲು ಅವಕಾಶ ನೀಡಿಲ್ಲ ಎಂಬ ತೃಪ್ತಿ ಇದೆ. ನನ್ನ ಆರು ವರ್ಷದ ಅವಧಿಯಲ್ಲಿ ಎಲ್ಲಾ ಮುಖಂಡರು ಸಹಕಾರ ನೀಡಿದ್ದಾರೆ. ಅದೇ ಸಹಕಾರವನ್ನು ನೂತನ ಅಧ್ಯಕ್ಷರಾದ ಚಂದ್ರಶೇಖರಗೌಡ ಅವರಿಗೂ ನೀಡಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದರು.

ಹಿರಿಯ ಕಾಂಗ್ರೆಸ್‌ ಮುಖಂಡ ರೆಡ್ಡಿ ಚಿನ್ನಯಲ್ಲಪ್ಪ ಮಾತನಾಡಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ತತ್ವ ಪಕ್ಷದ ಅಂತರಿಕ ವಿಚಾರದಲ್ಲಿಯೂ ಅಳವಡಿಸಿಕೆಯಾಗಿದ್ದರೆ, ಅದು ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ. ಎಲ್ಲ ವರ್ಗದವರಿಗೆ ಪಕ್ಷದ ಹುದ್ದೆಗಳಾಗಲಿ, ಸರಕಾರದಲ್ಲಿಯೂ ಅವಕಾಶ ನೀಡಿದ್ದಾರೆ. ಸಣ್ಣ ಸಣ್ಣ ಸಮುದಾಯಗಳ ಮುಖಂಡರು ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರ ಸಿಕ್ಕಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಮುಂದಿನ ರಾಜಕೀಯ ಭವಿಷ್ಯ ಅಡಗಿದೆ ಎಂಬ ಕಿವಿ ಮಾತು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರಹಾಲಪ್ಪ ಮಾತನಾಡಿ, ಓರ್ವ ಶಿಕ್ಷಕರ ಮಗ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗುವ ಮೂಲಕ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಜಿಲ್ಲೆಗೆ ಸಂಬಂಧಪಡುವ 3 ಸಂಸದ, 11 ಶಾಸಕ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಲು ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಹೆಚ್‌.ಸಿ.ಹನುಮಂತಯ್ಯ, ಡಾ.ಫರ್ಹಾನ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡರಾದ ನರಸಿಂಹಯ್ಯ, ಮರಿಚನ್ನಮ್ಮ, ಸೈಯದ್‌ ದಾದಾಪೀರ್‌, ಮೇಯರ್‌ ಪ್ರಭಾವತಿ, ವಾಲೆಚಂದ್ರಯ್ಯ, ಲಿಂಗರಾಜು, ಮಂಜುನಾಥ್‌, ಸುಜಾತ, ಪುಟ್ಟರಾಜು, ಆಟೋ ರಾಜು ಇದ್ದರು.

ಫೋಟೋ ಫೈಲ್‌ 8ಟಿಯುಎಂ1

click me!