ಚಿಕ್ಕಮಗಳೂರು: ಬಾಳೆಹೊನ್ನೂರಲ್ಲಿ ದತ್ತಮಾಲಾಧಾರಿಗಳ ವಾಹನ ತಪಾಸಣೆ

By Kannadaprabha NewsFirst Published Dec 9, 2022, 3:00 AM IST
Highlights

ತಪಾಸಣಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ವಾಹನಗಳಲ್ಲಿ ತೆರಳುವವರ ಕುರಿತು ಮಾಹಿತಿಗಳನ್ನು ಪಡೆದುಕೊಂಡ ಪೊಲೀಸರು 

ಬಾಳೆಹೊನ್ನೂರು(ಡಿ.09): ಚಿಕ್ಕಮಗಳೂರಿನ ದತ್ತಾತ್ರೆಯ ಪೀಠದಲ್ಲಿ ಸಂಘ ಪರಿವಾರ ಗುರುವಾರ ಹಮ್ಮಿಕೊಂಡಿದ್ದ ದತ್ತ ಜಯಂತಿ ಹಾಗೂ ದತ್ತಮಾಲಾ ಅಭಿಯಾನಕ್ಕೆ ಈ ಭಾಗದಿಂದ ತೆರಳುವ ವಾಹನಗಳ ತಪಾಸಣೆಯನ್ನು ಪಟ್ಟಣದಲ್ಲಿ ನಡೆಸಲಾಯಿತು. ಪಟ್ಟಣ ಹೊರವಲಯದ ಬಾಳೆಹೊನ್ನೂರು- ಚಿಕ್ಕಮಗಳೂರು ರಸ್ತೆಯ ಭದ್ರಾ ಸೇತುವೆಯ ಕಾಫಿ ಶಾಪ್‌ ಬಳಿ ಚೆಕ್‌ಪೋಸ್ಟ್‌ ತೆರೆಯಲಾಗಿತ್ತು. ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ರಾತ್ರಿಯಿಂದಲೇ ದತ್ತಪೀಠ ಭಾಗಕ್ಕೆ ತೆರಳುವ ಎಲ್ಲ ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿದರು. ತಪಾಸಣಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಪೊಲೀಸರು ವಾಹನಗಳಲ್ಲಿ ತೆರಳುವವರ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು.

ಈ ಬಾರಿ ಪಟ್ಟಣದ ಮೂಲಕ 258 ವಾಹನಗಳಲ್ಲಿ 1592 ಜನ ಸಂಘ ಪರಿವಾರದ ಕಾರ್ಯಕರ್ತರು, ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ, ಕಾರ್ಕಳ, ಪುತ್ತೂರು, ಮೂಡಬಿದಿರೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆ ಮತ್ತು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ ತಾಲೂಕುಗಳಿಂದ ದತ್ತಮಾಲಾಧಾರಿಗಳು ಹಾಗೂ ದತ್ತಭಕ್ತರು ತೆರಳಿರುವುದು ಚೆಕ್‌ಪೋಸ್ಟ್‌ನಲ್ಲಿ ದಾಖಲಾಗಿದೆ. ದತ್ತಪೀಠಕ್ಕೆ ತೆರಳಿದ ವಾಹನಗಳು ಗುರುವಾರ ಬೆಳಗ್ಗೆ 11ರ ನಂತರ ವಾಪಸ್‌ ಈ ಭಾಗಕ್ಕೆ ಬರಲಾರಂಭಿಸಿದ್ದು, ಅವುಗಳನ್ನು ಕೂಡ ದಾಖಲು ಮಾಡಿಕೊಳ್ಳಲಾಯಿತು.

GUJARAT ELECTION ರಾವಣ ಮನಸ್ಸಿನ ಪಕ್ಷ ಸೋಲಲೇ ಬೇಕಿತ್ತು ಸೋತಿದೆ: ಸಿ.ಟಿ ರವಿ

ವಾಹನ ತಪಾಸಣಾ ಚೆಕ್‌ಪೋಸ್ಟ್‌ನಲ್ಲಿ ಕೊಪ್ಪ ಎಎಸ್‌ಪಿ ಗುಂಜನ್‌ ಆರ್ಯ, ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್‌, ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಉಳಿದಂತೆ ಪಟ್ಟಣದ ವಿವಿಧೆಡೆ ಬಿಗಿ ಬಂದೋಬಸ್‌್ತ ಏರ್ಪಡಿಸಲಾಗಿತ್ತು. ಚೆಕ್‌ಪೋಸ್ಟ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ವಾಹನಗಳ ಚಲನವಲನ ಪ್ರಕ್ರಿಯೆ ದಾಖಲಿಸಿಕೊಳ್ಳಲಾಯಿತು.

ಪೂಜೆ ಸಲ್ಲಿಸಿ ದತ್ತಪೀಠಕ್ಕೆ ಯಾತ್ರೆ: ಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಾದ ರಂಭಾಪುರಿ ಪೀಠ, ಮೇಲ್ಪಾಲ್‌, ಹೂವಿನಹಕ್ಲು, ಅರಳೀಕೊಪ್ಪ, ಬನ್ನೂರು, ಮಾಗುಂಡಿ, ಗಡಿಗೇಶ್ವರ, ಆಡುವಳ್ಳಿ, ಸೀಕೆ, ಸೀಗೋಡು ಮುಂತಾದೆಡೆಗಳ ಸಂಘ ಪರಿವಾರದ ಕಾರ್ಯಕರ್ತರು ಪಟ್ಟಣದ ಮಾರ್ಕಂಡೇಶ್ವರ ದೇಗುಲ, ರಂಭಾಪುರಿ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಾಲಾಧಾರಿಗಳು ಪಡಿ ಸಂಗ್ರಹಿಸಿ ದತ್ತಪೀಠಕ್ಕೆ ತೆರಳಿದರು. ದತ್ತ ಮಾಲಾಧಾರಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ವಾಹನಗಳಲ್ಲಿ ಕೇಸರಿ ಧ್ವಜ ಕಟ್ಟಿಕೊಂಡು ದತ್ತಾತ್ರೇಯ ಪರ ಹಾಗೂ ಜೈಶ್ರೀರಾಮ್‌, ಭಜರಂಗಿ ಎಂಬ ಘೋಷಣೆಗಳನ್ನು ಕೂಗುತ್ತ ದತ್ತಪೀಠಕ್ಕೆ ತೆರಳಿದರು. ದತ್ತಭಕ್ತರ ಘೋಷಣೆ, ಭಕ್ತಿಸಂಗೀತಗಳು ಮುಗಿಲು ಮುಟ್ಟಿದವು.
ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಬಳಿಕ ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ, ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಂಜಾಗರೂಕತೆ ಕ್ರಮವಾಗಿ ಬಂದ್‌ ಮಾಡಿದ್ದರು. ಅಂಗಡಿಗಳ ಬಂದ್‌ ಮಾಡಿದ್ದರಿಂದ ವಾಹನ, ಜನ ಸಂಚಾರವಿಲ್ಲದೇ ಪಟ್ಟಣ ಬಿಕೋ ಎನ್ನುತಿತ್ತು.
 

click me!