ಗೊಲ್ಲರಹಟ್ಟಿಗಳಲ್ಲಿ ಮೌಢ್ಯದೂರವಾಗಲಿ

By Kannadaprabha News  |  First Published Jul 28, 2023, 4:36 AM IST

ಇಷ್ಟುದೊಡ್ಡ ಪ್ರಮಾಣದಲ್ಲಿ ಆಧುನಿಕತೆ ಬೆಳೆದಿದ್ದರೂ ಕೂಡ ಮೌಢ್ಯಕ್ಕೆ ಜಾರಿ ಹಸುಗೂಸನ್ನು ಕಳೆದುಕೊಂಡಿರುವಂತದ್ದು ಬಹಳ ದುರದೃಷ್ಟಕರ ಸಂಗತಿ. ಈ ಘಟನೆ ಬಗ್ಗೆ ನೋಡಿ ಕೇಳಿ ನನಗೆ ಬಹಳ ದಿಗ್ಭ್ರಮೆಯಾಗಿರುವುದಾಗಿ ಶಾಸಕ ಬಿ. ಸುರೇಶಗೌಡ ತಿಳಿಸಿದರು.


  ತುಮಕೂರು :  ಇಷ್ಟು ದೊಡ್ಡ ಪ್ರಮಾಣದಲ್ಲಿ ಆಧುನಿಕತೆ ಬೆಳೆದಿದ್ದರೂ ಕೂಡ ಮೌಢ್ಯಕ್ಕೆ ಜಾರಿ ಹಸುಗೂಸನ್ನು ಕಳೆದುಕೊಂಡಿರುವಂತದ್ದು ಬಹಳ ದುರದೃಷ್ಟಕರ ಸಂಗತಿ. ಈ ಘಟನೆ ಬಗ್ಗೆ ನೋಡಿ ಕೇಳಿ ನನಗೆ ಬಹಳ ದಿಗ್ಭ್ರಮೆಯಾಗಿರುವುದಾಗಿ ಶಾಸಕ ಬಿ. ಸುರೇಶಗೌಡ ತಿಳಿಸಿದರು.

ತುಮಕೂರು ತಾಲೂಕು ಮಲ್ಲೇನಹಳ್ಳಿ ಗೊಲ್ಲರಟ್ಟಿಗೆ ಭೇಟಿ ನೀಡಿ ಮಾತನಾಡಿದರು. ತುಮಕೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಲ್ಲೇನಹಳ್ಳಿ ಗೊಲ್ಲರಟ್ಟಿಯಲ್ಲಿ ಮೌಢ್ಯದಿಂದಲೋ ಅಥವಾ ಅನಾರೋಗ್ಯದಿಂದ ಈ ಮಗು ಸಾವಿಗೀಡಾಗಿದೆಯೋ ಗೊತ್ತಿಲ್ಲ. ಆದರೆ ಇಂತಹ ಘಟನೆಗಳು ಮರುಕಳಿಸಬಾರದು. ಜನರು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಈ ನಿಟ್ಟಿನಲ್ಲಿ ಇನ್ನಷ್ಟುಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

Tap to resize

Latest Videos

ಬಳಿಕ ಶಾಸಕರು ಕುಟುಂಬ ಸದಸ್ಯರಿಗೆ ಸಾಂತ್ವನಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸ್‌ ಆರಕ್ಷಣಾಣಾಧಿಕಾರಿ ಮತ್ತು ಶಿಶುಪಾಲನ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತಿ ಅಧ್ಯಕ್ಷ ಶಿವಲಿಂಗಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮೌಡ್ಯ ಬೇಡ

 ತುಮಕೂರು : ಹೆರಿಗೆ ನಂತರ ಬಾಣಂತಿ ಜೊತೆಗೆ ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಊರಾಚೆ ಜಮೀನಿನ ಗುಡಿಸಲಿನಲ್ಲಿ ಇಡಲಾಗಿದ್ದ ನವಜಾತ ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನಲೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಗುರುವಾರ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೃತ ಮಗುವಿನ ಪೋಷಕರ ಅಹವಾಲು ಸ್ವೀಕರಿಸಿದರು, ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿ, ಮಗು ಮೃತಪಟ್ಟನಂತರವೂ ಮೂರು ದಿನಗಳಿಂದ ಸುರಿಯುತ್ತಿರುವ ಜಡಿಯನ್ನು ಲೆಕ್ಕಿಸದೆ ತಾಯಿಯನ್ನು ಹಟ್ಟಿಯ ಒಳಗಡೆ ವಾಸ ಮಾಡಲು ಬಿಡದೆ ಊರಾಚೆಯ ಗುಡಿಸಲಿನಲ್ಲಿಯೇ ಒಂಟಿಯಾಗಿ ಇರಿಸಲಾಗಿರುವ ಮಾಹಿತಿ ಪಡೆದರು. ಗ್ರಾಮಸ್ಥರಿಗೆ ಕಾನೂನುಗಳ ತಿಳಿವಳಿಕೆ ನೀಡಿ, ಗುಡಿಸಲನ್ನು ಕೆಡವಿಸಿ, ಬಾಣಂತಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ ನ್ಯಾಯಾಧೀಶರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದರು.

ಆರೋಗ್ಯದ ಕಡೆ ಹೆಚ್ಚಿನ ನಿಗಾ ಅವಶ್ಯಕತೆ ಇರುವ ಬಾಣಂತಿ ಮತ್ತು ಮಗುವನ್ನು ಊರಾಚೆಯ ಗುಡಿಸಲಿನಲ್ಲಿಯೇ ಇರಿಸಿದ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ. ಋುತು ಚಕ್ರ ಹಾಗೂ ಬಾಣಂತಿ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಅಗತ್ಯ ವಿಶ್ರಾಂತಿ ಪಡೆದು, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯವಾಗಿರಲಿ ಎಂದು ಹಿರಿಯರು ಮಹಿಳೆಯರನ್ನು ಪ್ರತ್ಯೇಕವಾಗಿರಲಿ ಎಂದು ಆಚರಣೆ ತಂದಿದ್ದಾರೆ. ಇಂದು ಈ ಆಚರಣೆ ತನ್ನ ಮೂಲ ಉದ್ದೇಶ ಮರೆತು ಮಹಿಳೆ ಮತ್ತು ಮಕ್ಕಳ ಜೀವನಕ್ಕೆ ಮಾರಕವಾಗಿ ಮೌಢ್ಯತೆಯಿಂದ ಕೂಡಿದ ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದರು.

ಇಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹತ್ತಿರದಲ್ಲಿದ್ದು, ಬಾಣಂತಿ ಹಾಗೂ ಮಗುವಿಗೆ ಸ್ಪಂದಿಸಬೇಕು, ಅದನ್ನು ಬಿಟ್ಟು ಹೀಗೆ ಪ್ರತ್ಯೇಕವಾಗಿ ದೂರ ಇಟ್ಟರೆ ಅವರ ಆರೋಗ್ಯ ಕೆಟ್ಟು, ಈ ರೀತಿ ಸಾವಿಗೆ ಕಾರಣವಾಗುತ್ತದೆ, ಇಂತಹ ಆಚರಣೆ ನಾಗರಿಕ ಹಕ್ಕುಗಳ ರಕ್ಷಣಾ ಕಾಯಿದೆ -1955ರ ರೀತ್ಯಾ ಹಾಗೂ ಇತರ ಕಾನೂನು ನಿಯಮಗಳಿಗೆ ವಿರುದ್ಧವಾದದ್ದು ಎಂದರು. ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಆಚಾರಗಳಿಗಿಂತ ಪ್ರಾಣ ಮುಖ್ಯ ಅನ್ನುವ ವಿಚಾರ ಯಾರೂ ಮರೆಯಬಾರದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಹಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಬಗ್ಗೆ ಸಮಗ್ರ ವರದಿಯನ್ನು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದರು.

click me!