ದೇವರ ಹೆಸರಲ್ಲಿ ಮೌಢ್ಯ ಬೇಡ: ನ್ಯಾ. ನೂರುನ್ನೀಸ

By Kannadaprabha News  |  First Published Jul 28, 2023, 4:32 AM IST

ಹೆರಿಗೆ ನಂತರ ಬಾಣಂತಿ ಜೊತೆಗೆ ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಊರಾಚೆ ಜಮೀನಿನ ಗುಡಿಸಲಿನಲ್ಲಿ ಇಡಲಾಗಿದ್ದ ನವಜಾತ ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನಲೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಗುರುವಾರ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


 ತುಮಕೂರು : ಹೆರಿಗೆ ನಂತರ ಬಾಣಂತಿ ಜೊತೆಗೆ ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಊರಾಚೆ ಜಮೀನಿನ ಗುಡಿಸಲಿನಲ್ಲಿ ಇಡಲಾಗಿದ್ದ ನವಜಾತ ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನಲೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಗುರುವಾರ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೃತ ಮಗುವಿನ ಪೋಷಕರ ಅಹವಾಲು ಸ್ವೀಕರಿಸಿದರು, ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿ, ಮಗು ಮೃತಪಟ್ಟನಂತರವೂ ಮೂರು ದಿನಗಳಿಂದ ಸುರಿಯುತ್ತಿರುವ ಜಡಿಯನ್ನು ಲೆಕ್ಕಿಸದೆ ತಾಯಿಯನ್ನು ಹಟ್ಟಿಯ ಒಳಗಡೆ ವಾಸ ಮಾಡಲು ಬಿಡದೆ ಊರಾಚೆಯ ಗುಡಿಸಲಿನಲ್ಲಿಯೇ ಒಂಟಿಯಾಗಿ ಇರಿಸಲಾಗಿರುವ ಮಾಹಿತಿ ಪಡೆದರು. ಗ್ರಾಮಸ್ಥರಿಗೆ ಕಾನೂನುಗಳ ತಿಳಿವಳಿಕೆ ನೀಡಿ, ಗುಡಿಸಲನ್ನು ಕೆಡವಿಸಿ, ಬಾಣಂತಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ ನ್ಯಾಯಾಧೀಶರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದರು.

Latest Videos

undefined

ಆರೋಗ್ಯದ ಕಡೆ ಹೆಚ್ಚಿನ ನಿಗಾ ಅವಶ್ಯಕತೆ ಇರುವ ಬಾಣಂತಿ ಮತ್ತು ಮಗುವನ್ನು ಊರಾಚೆಯ ಗುಡಿಸಲಿನಲ್ಲಿಯೇ ಇರಿಸಿದ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ. ಋುತು ಚಕ್ರ ಹಾಗೂ ಬಾಣಂತಿ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಅಗತ್ಯ ವಿಶ್ರಾಂತಿ ಪಡೆದು, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯವಾಗಿರಲಿ ಎಂದು ಹಿರಿಯರು ಮಹಿಳೆಯರನ್ನು ಪ್ರತ್ಯೇಕವಾಗಿರಲಿ ಎಂದು ಆಚರಣೆ ತಂದಿದ್ದಾರೆ. ಇಂದು ಈ ಆಚರಣೆ ತನ್ನ ಮೂಲ ಉದ್ದೇಶ ಮರೆತು ಮಹಿಳೆ ಮತ್ತು ಮಕ್ಕಳ ಜೀವನಕ್ಕೆ ಮಾರಕವಾಗಿ ಮೌಢ್ಯತೆಯಿಂದ ಕೂಡಿದ ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದರು.

ಇಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹತ್ತಿರದಲ್ಲಿದ್ದು, ಬಾಣಂತಿ ಹಾಗೂ ಮಗುವಿಗೆ ಸ್ಪಂದಿಸಬೇಕು, ಅದನ್ನು ಬಿಟ್ಟು ಹೀಗೆ ಪ್ರತ್ಯೇಕವಾಗಿ ದೂರ ಇಟ್ಟರೆ ಅವರ ಆರೋಗ್ಯ ಕೆಟ್ಟು, ಈ ರೀತಿ ಸಾವಿಗೆ ಕಾರಣವಾಗುತ್ತದೆ, ಇಂತಹ ಆಚರಣೆ ನಾಗರಿಕ ಹಕ್ಕುಗಳ ರಕ್ಷಣಾ ಕಾಯಿದೆ -1955ರ ರೀತ್ಯಾ ಹಾಗೂ ಇತರ ಕಾನೂನು ನಿಯಮಗಳಿಗೆ ವಿರುದ್ಧವಾದದ್ದು ಎಂದರು. ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಆಚಾರಗಳಿಗಿಂತ ಪ್ರಾಣ ಮುಖ್ಯ ಅನ್ನುವ ವಿಚಾರ ಯಾರೂ ಮರೆಯಬಾರದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಹಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಬಗ್ಗೆ ಸಮಗ್ರ ವರದಿಯನ್ನು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದರು.

ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಾರ್ಡ್‌ಗಳು, ಔಷಧಿ ಉಗ್ರಾಣ ಕೊಠಡಿ, ಶೌಚಾಲಯಕ್ಕೆ ಭೇಟಿ ನೀಡಿದ ನ್ಯಾಯಾಧೀಶರು, ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ತಾಕೀತು ಮಾಡಿದರು.

ಕಾನೂನು ಅರಿವು: ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಪಂಚಾಯತ್‌ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನವನ್ನು ಹಮ್ಮಿಕೊಂಡು ಗ್ರಾಮಸ್ಥರಲ್ಲಿ ಕಾನೂನು ಅರಿವು ಮೂಡಿಸಲಾಯಿತು.

ತಹಸೀಲ್ದಾರ್‌ ಸಿದ್ದೇಶ್‌ ಹಾಗೂ ಆರೋಗ್ಯ ಇಲಾಖೆಯ ನೌಕರರು ಗ್ರಾಮಸ್ಥರ ಮನವೊಲಿಸಿ, ಬಾಣಂತಿಯನ್ನು ಹಟ್ಟಿಗೆ ಕರೆ ತಂದರು. ಈ ಹಿಂದೆ ಸ್ಥಳೀಯ ಅಧಿಕಾರಿಗಳು ಗುಡಿಸಲಿಗೆ ತೆರಳಿ ಬಾಣಂತಿ ಹಾಗೂ ಮಗುವನ್ನು ಮನೆಗೆ ಸೇರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ, ಹಿಂದುಳಿದ ಕಲ್ಯಾಣ ಇಲಾಖೆಯ ಮೇಲ್ವಿಚಾರಕ, ರವಿಕುಮಾರ್‌ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಇನ್ನಿತರರು ಭಾಗವಹಿಸಿದ್ದರು.

ಆಚಾರಕ್ಕಿಂತ ಪ್ರಾಣ ಮುಖ್ಯ: ನ್ಯಾಯಾಧೀಶೆ

ಋುತುಮತಿಯಾದ ಹೆಣ್ಣುಮಕ್ಕಳು ಮತ್ತು ಬಾಣಂತಿಯರನ್ನು ಹೀಗೆ ಮನೆಯಿಂದ ಹೊರಗಿಡುವ ಅನಿಷ್ಠ ಪದ್ಧತಿಯಿಂದ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಈ ಪ್ರಕರಣದಲ್ಲಿ ಬಾಣಂತಿಯ ತಂದೆ-ತಾಯಿ ಅಷ್ಟೇ ಅಲ್ಲದೆ ನಾವೆಲ್ಲರೂ ಕಾರಣರಾಗುತ್ತೇವೆ. ಕಲಂ 17ರ ಪ್ರಕಾರ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕುವ ಹಕ್ಕು ಎಲ್ಲರಿಗೆ ಇದೆ. ದೇವರ ಹೆಸರಿನಲ್ಲಿ ಮೌಢ್ಯ ಬೇಡ. ಮೌಢ್ಯದ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಇರಿಸಿದಾಗ ಆಕೆ ಮಾನಸಿಕ ಆಘಾತಕ್ಕೊಳಗಾಗಿ ಬಾಣಂತಿ ಸನ್ನಿ ತೊಂದರೆಗೊಳಗಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಹುಳು, ಕ್ರಿಮಿಕೀಟಗಳ ಕಾಟ ಹಾಗೂ ಚಳಿ, ಗಾಳಿಯಿಂದ ಬಾಣಂತಿಯರು ಹಾಗೂ ಋುತುಮತಿಯಾದ ಹೆಣ್ಣು ಮಕ್ಕಳು ಬಳಲುತ್ತಾರೆ. ಮೂಢನಂಬಿಕೆಗೆ ಒಳಗಾಗಿ ಜೀವಗಳನ್ನು ಬಲಿಕೊಡುವ ಅನಿಷ್ಠ ಪದ್ಧತಿ ಕೊನೆಯಾಗಬೇಕು. ಬೆಂಗಳೂರಿಗೆ ಸನಿಹದಲ್ಲಿರುವ ಅಭಿವೃದ್ಧಿ ಹೊಂದುತ್ತಿರುವ ತುಮಕೂರಿನಲ್ಲಿ ಈ ಘಟನೆ ನಡೆಬಾರದಿತ್ತು ಎಂದು ತಿಳಿಸಿದರು.

click me!