ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಇಲ್ಲಿ ಕೂತು ಮಾತನಾಡುವ ಬದಲು ಸಂಸದರು ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿ ಪರಿಹರಿಸಲು ಪ್ರಯತ್ನ ಮಾಡಲಿ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಶಿವಮೊಗ್ಗ (ಡಿ.9) : ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಇಲ್ಲಿ ಕೂತು ಮಾತನಾಡುವ ಬದಲು ಸಂಸದರು ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿ ಪರಿಹರಿಸಲು ಪ್ರಯತ್ನ ಮಾಡಲಿ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂತ್ರಸ್ಥರ ಸಮಸ್ಯೆಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಅಷ್ಟೇ. ಸುಪ್ರೀಂ ಕೋರ್ಚ್‌ಗೆ ಮೇಲ್ಮನವಿ ಸಲ್ಲಿಸುವುದನ್ನು ಬಿಟ್ಟು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಬಿಜೆಪಿಯ ಎಲ್ಲ ಸಂಸದರು ಪಾರ್ಲಿಮೆಂಟ್‌ನಲ್ಲಿ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ ಎಂದು ಕುಟುಕಿದರು.
Shivamogga: ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಿಎಂ ತಾಕತ್ತು ಪ್ರದರ್ಶಿಸಲಿ: ಮಧು ಬಂಗಾರಪ್ಪ
ಚಳಿಗಾಲದ ಅಧಿವೇಶದಲ್ಲಿ ಕಾಂಗ್ರೆಸ್ ಪ್ರಸ್ತಾಪ:
ಡಿ.19ರಂದು ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಸಂತ್ರಸ್ಥರ ಸಮಸ್ಯೆ ಮುಂದಿಟ್ಟುಕೊಂಡು ಚರ್ಚೆ ಮಾಡಲಿದ್ದಾರೆ. ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವುದನ್ನು ಬಿಟ್ಟು ಅಧಿವೇಶನದಲ್ಲಿ ಸಂತ್ರಸ್ಥರ ಪರವಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರ ಭತ್ತ ಬೆಳೆಯುವ ರೈತರನ್ನು ವಿಂಗಡಿಸಿದೆ. ಕರಾವಳಿ ಭಾಗದ ರೈತರಿಗೆ ವಿಶೇಷವಾಗಿ ಕ್ವಿಂಟಲ್‌ಗೆ .500 ಪ್ರೋತ್ಸಾಹಧನ ನೀಡುತ್ತಿದ್ದಾರೆ. ಬಿಜೆಪಿ ಶಾಸಕರು ಹೆಚ್ಚಿರುವ ಪ್ರದೇಶಗಳಲ್ಲಿ ಈ ಪ್ರೋತ್ಸಾಹಧನ ಏರಿಸಲಾಗಿದೆ. ಆದರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ ಕಡೆ ಭತ್ತ ಬೆಳೆಯುವವರಿದ್ದಾರೆ. ಈ ತಾರತಮ್ಯ ಏಕೆ ಎಂದು ಪ್ರಶ್ನೆ ಮಾಡಿದರು.
ಸೊರಬದಲ್ಲಿ ದಂಡಾವತಿ ಅಣೆಕಟ್ಟು ಕಟ್ಟಲು ನಾವು ವಿರೋಧಿಸುತ್ತಿದ್ದೆವು. ಈಗ ಬಿಜೆಪಿಯವರು ಬ್ಯಾರೇಜ್ ಕಟ್ಟಲು ಹೊರಟಿದ್ದಾರೆ. ಬ್ಯಾರೇಜ್ ಕಟ್ಟಲು ನಮ್ಮ ಅಭ್ಯಂತರವಿಲ್ಲ. ಆದರೆ ಅಣೆಕಟ್ಟು ಕಟ್ಟಲು ಬಿಡುವುದಿಲ್ಲ. ಶರಾವತಿ ಸಂತ್ರಸ್ಥರಂತೆ ದಂಡಾವತಿ ಸಂತ್ರಸ್ಥರನ್ನಾಗಿಸಲು ಬಿಡುವುದಿಲ್ಲ ಎಂದು ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಚ್.ಎಸ್. ಸುಂದರೇಶ್, ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಹೆಚ್.ಸಿ. ಯೋಗೀಶ್, ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಎಸ್.ಪಿ. ದಿನೇಶ್, ಜಿ.ಡಿ. ಮಂಜುನಾಥ್, ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ಧರ್ಮರಾಜ್, ಹೆಚ್.ಆರ್. ಮಹೇಂದ್ರ, ಚಂದ್ರಶೇಖರ್, ಚಂದನ್ ಮುಂತಾದವರಿದ್ದರು.
ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಕ್ರಮ
ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಗಳಿಂದಲೂ ಕ್ಷೇತ್ರವಾರು ಚುನಾವಣೆ ಅಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪಕ್ಷ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಹೀಗಿರುವಾಗ ಕೆಲವರು ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಯಾರೇ ಆಗಲಿ ಸಂಘಟನೆಗೆ ಧಕ್ಕೆ ತರುವ ಚಟುವಟಿಕೆ ವಿರುದ್ಧ ನಾಯಕರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಧು ಬಂಗಾರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂಗೆ ತಾಕತ್ತಿದ್ರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ: ಮಧು ಬಂಗಾರಪ್ಪ
ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್ ಸೋತಿರಬಹುದು. ಆದರೆ, ಇಡೀ ದೇಶದ ಎಲ್ಲ ಕಡೆ ಬಿಜೆಪಿ ಇಲ್ಲ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿ ಅದರ ಸುಳಿವೇ ಇಲ್ಲ. ಹಿಮಾಚಲ ಪ್ರದೇಶದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಬಾರಿ ಕರ್ನಾಟಕದಲ್ಲಿ ಯಾವ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ
- ಮಧು ಬಂಗಾರಪ್ಪ, ರಾಜ್ಯಾಧ್ಯಕ್ಷ