ಮುಡಾದಲ್ಲಿ 5000 ಕೋಟಿ ಹಗರಣ: ನೈತಿಕ ಹೊಣೆ ಹೊತ್ತು ಸಿದ್ದು ರಾಜೀನಾಮೆ ನೀಡಲಿ, ಯದುವೀರ್‌

By Kannadaprabha NewsFirst Published Oct 20, 2024, 8:27 AM IST
Highlights

ಮುಡಾ ಹಗರಣದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಬಿಜೆಪಿಯಿಂದ ಮೈಸೂರಿನವರೆಗೆ ಬೆಂಗಳೂರಿನಿಂದ ಪಾದಯಾತ್ರೆ ನಡೆಸಲಾಗಿತ್ತು. ಇದೀಗ ಮುಡಾ ಮೇಲೆ ಇಡಿ ದಾಳಿ ನಡೆದಿದೆ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಬಿಜೆಪಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ 

ಮೈಸೂರು(ಅ.20):  ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು. ಮುಡಾ ಹಗರಣದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಬಿಜೆಪಿಯಿಂದ ಮೈಸೂರಿನವರೆಗೆ ಬೆಂಗಳೂರಿನಿಂದ ಪಾದಯಾತ್ರೆ ನಡೆಸಲಾಗಿತ್ತು. ಇದೀಗ ಮುಡಾ ಮೇಲೆ ಇಡಿ ದಾಳಿ ನಡೆದಿದೆ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

Latest Videos

ರಸ್ತೆ ಜಾಗ ಕಬಳಿಸಿ ಸೈಟ್‌ ನೋಂದಣಿ: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಆರೋಪ

ಮುಡಾದಲ್ಲಿ 5 ಸಾವಿರ ಕೋಟಿ ಹಗರಣ ಆಗಿದೆ. ಸಿದ್ದರಾಮಯ್ಯ ಕುಟುಂಬದವರು ನೇರ ಫಲಾನುಭವಿ ಆಗಿದ್ದಾರೆ. ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಸಾವಿರಾರು ಕೋಟಿ ಮೌಲ್ಯದ ಹಗರಣ ಆಗಿರುವ ಕಾರಣ ಸ್ವತಂತ್ರವಾದ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

62 ಕೋಟಿ ಕೊಟ್ಟರೆ ಸೈಟ್ ಕೊಡುವೆ ಅಂತ ಸಿದ್ದರಾಮಯ್ಯ ಅವರೆ ಹೇಳಿದ್ದಾರೆ. ಈ ಹಿನ್ನೆಲೆ ಇಡಿ ತನಿಖೆ ಸೂಕ್ತವಾಗಿದೆ. ಮುಡಾ, ತಾಲೂಕು ಕಚೇರಿಗೆ ದಾಖಲಾತಿ ಕೊಡುವಂತೆ ಕೇಳಿದರೂ ಕೊಡದ ಕಾರಣ ಇಡಿ ದಾಳಿ ಮಾಡಿದೆ. ಈ ಹೋರಾಟದಲ್ಲಿ ನಾವು ಕಾನೂನಾತ್ಮಕವಾಗಿ ಮುಂದುವರೆಯುತ್ತೇವೆ ಎಂದರು. 

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಸಂಕಷ್ಟದ ಮೇಲೆ ಸಂಕಷ್ಟ, ಎರಡೆರಡು ಕಡೆ ತನಿಖೆ!

ಇಡಿ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿರುವ ಕಾರಣ ಸ್ವತಂತ್ರ ತನಿಖೆ ಅಗತ್ಯ. 14 ಸೈಟ್ ಮಾತ್ರವಲ್ಲದೆ ಎಲ್ಲಾ ಅಕ್ರಮ ಸೈಟ್ ಬಗ್ಗೆ ಕೂಡ ತನಿಖೆ ಆಗಬೇಕು. ಸಿಬಿಐ ತನಿಖೆಗೆ ಆಗ್ರಹಿಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ದೂರು ನೀಡಲು ಮುಂದಾಗುತ್ತೇವೆ ಎಂದು ಅವರು ತಿಳಿಸಿದರು. 

ಮೈಸೂರು ವಿಮಾನ ನಿಲ್ದಾಣ ಮೇಲ್ದರ್ಜೆಗೇರಿದರೆ ಹೆಚ್ಚು ವಿಮಾನ ಹಾರಾಟ ಆಗುತ್ತದೆ. ಆದರೂ ಹೆಚ್ಚು ಬೇಡಿಕೆ ಇರುವ ಎಟಿಆರ್‌ ವಿಮಾನ, ಗೋವಾ, ಕೊಚ್ಚಿನ್ ಗೆ ಹಾರಾಟ ಮಾಡಲು ಕೇಂದ್ರ ವಿಮಾನಯಾನ ಖಾತೆ ಸಚಿವರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಲ್. ನಾಗೇಂದ್ರ ಮೊದಲಾದವರು ಇದ್ದರು.

click me!