ಬಿಬಿಎಂಪಿ ವ್ಯಾಪ್ತಿಯಲ್ಲಿ 8-9 ತಿಂಗಳಿಂದ ಈಚೆಗೆ ನೋಂದಣಿ ಆಗಿರುವ 50 ಸಾವಿರಕ್ಕೂ ಹೆಚ್ಚು ಆಸ್ತಿ ಮತ್ತು ಖಾತಾ ವಿವರಗಳನ್ನು ಡಿಜಟಲೀಕರಣ ಮಾಡಿ ಬಿಬಿಎಂಪಿ ಇ-ಆಸ್ತಿ ತಂತ್ರಾಶಕ್ಕೆ ಅಪ್ಲೋಡ್ ಮಾಡುವುದು ಬಾಕಿಯಿದ್ದರೂ ಸರ್ಕಾರ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿರುವುದು ಆಸ್ತಿ ಮಾಲೀಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು (ಅ.20): ಬಿಬಿಎಂಪಿ ವ್ಯಾಪ್ತಿಯಲ್ಲಿ 8-9 ತಿಂಗಳಿಂದ ಈಚೆಗೆ ನೋಂದಣಿ ಆಗಿರುವ 50 ಸಾವಿರಕ್ಕೂ ಹೆಚ್ಚು ಆಸ್ತಿ ಮತ್ತು ಖಾತಾ ವಿವರಗಳನ್ನು ಡಿಜಟಲೀಕರಣ ಮಾಡಿ ಬಿಬಿಎಂಪಿ ಇ-ಆಸ್ತಿ ತಂತ್ರಾಶಕ್ಕೆ ಅಪ್ಲೋಡ್ ಮಾಡುವುದು ಬಾಕಿಯಿದ್ದರೂ ಸರ್ಕಾರ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿರುವುದು ಆಸ್ತಿ ಮಾಲೀಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವು ಬಿಬಿಎಂಪಿ ವ್ಯಾಪ್ತಿಯಲ್ಲೂ ಆಸ್ತಿಗಳ ನೋಂದಣಿಗೆ ಅ.1ರಿಂದ ಅನ್ವಯವಾಗುವಂತೆ ಇ-ಖಾತಾ ಕಡ್ಡಾಯಗೊಳಿಸಿದೆ. ಇನ್ನು ಇ-ಖಾತಾ ಪಡೆಯಲು ಡಿಜಿಟಲ್ ಇಂಟಿಗ್ರೇಷನ್ ಖಾತಾ ನಿಯಮ ಪಾಲನೆಗೆ ಸೂಚಿಸಿದ್ದು, ಇದರಡಿ ಆಧಾರ್ ಇ-ಕೆವೈಸಿ, ಆಸ್ತಿಯ ಸೂಕ್ತ ದಾಖಲೆಗಳನ್ನು ಸಲ್ಲಿಸಿಯೇ ಇ-ಖಾತಾ ಪಡೆಯಬೇಕು.
undefined
ಸಾರ್ವಜನಿಕರಿಗೆ ತೀವ್ರ ಅನುಕೂಲ ಕಲ್ಪಿಸುವ ಈ ವ್ಯವಸ್ಥೆ ಜಾರಿಗೆ ಬಿಬಿಎಂಪಿ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಶ್ರಮವಹಿಸುತ್ತಿದ್ದಾರೆ. ಕಳೆದ 9 ತಿಂಗಳಿಂದ ಈಚೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯದ 21 ಲಕ್ಷದಷ್ಟು ಆಸ್ತಿಗಳ ದಾಖಲೆಗಳನ್ನು ಡಿಜಿಟಲೈಸೇಷನ್ ಮಾಡಿ ಇ-ಆಸ್ತಿ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಲಾಗಿದೆ. ಆರು ತಿಂಗಳ ಕಾಲ ಮಿತಿಯಲ್ಲಿ ಆಗಬೇಕಿದ್ದ ಕೆಲಸವು ಚುನಾವಣಾ ಕಾರ್ಯದ ನಿಮಿತ್ತ 8-9 ತಿಂಗಳು ತೆಗೆದುಕೊಂಡಿದೆ. ಇನ್ನು ಈ 8-9 ತಿಂಗಳ ಅವಧಿಯಲ್ಲಿ ಮತ್ತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಕ್ರಯ ನೋಂದಣಿಯಾಗಿದೆ. ಈ ದಾಖಲೆಗಳನ್ನು ಡಿಜಿಟಲೈಸೇಷನ್ ಮಾಡಿ ಇ-ಆಸ್ತಿ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿಲ್ಲ. ಹೀಗಾಗಿ ಈ ಆಸ್ತಿಗಳ ಇ- ಖಾತಾ ವಿವರ ಲಭ್ಯವಾಗುತ್ತಿಲ್ಲ.
ಬೆಂಗಳೂರಿನಲ್ಲಿ ಮುಂದುವರೆದ ಇ-ಖಾತಾ ಗೊಂದಲ: ಅಡಮಾನ ಸಾಲಕ್ಕೂ ತೊಂದರೆ
ಇ-ಖಾತಾ ಮಾಡಲು ‘ಎಡಿಟ್’ ಆಯ್ಕೆ: ಆಸ್ತಿಗಳ ಇ-ಖಾತಾ ಪಡೆಯಲು ಸ್ವಲ್ಪ ಗೊಂದಲ ಉಂಟಾಗಿದ್ದರೂ ಪರಿಹಾರ ಇದೆ. ಇಂತಹ ಆಸ್ತಿಗಳ ಇ-ಖಾತಾ ಪಡೆಯಲು ಎಆರ್‌ಒಗಳಿಗೆ ಎಡಿಟ್ ಆಯ್ಕೆ ನೀಡಲಾಗಿದೆ. ಈ ಆಯ್ಕೆ ಒತ್ತಿದರೆ ನೋಟ್ ಶೀಟ್ ತೆರೆದುಕೊಳ್ಳುತ್ತದೆ. ಆಗ ಇತ್ತೀಚೆಗೆ ಕ್ರಯ ನೋಂದಣಿ ಆದ ದಾಖಲೆ ಪತ್ರಗಳನ್ನು ಅಪ್ಲೋಡ್ ಮಾಡಬೇಕು. ಅದನ್ನು ಕೇಸ್ ವರ್ಕರ್ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ ಟಿಪ್ಪಣಿ ಬರೆಯುತ್ತಾರೆ. ಇದೆಲ್ಲವೂ ಇ-ಕಚೇರಿಯಂತೆ ಕಂಪ್ಯೂಟರ್ ಲಾಗಿನ್‌ನಲ್ಲೇ ನಡೆಯುತ್ತದೆ. ಕೇಸ್ ವರ್ಕರ್ ಟಿಪ್ಪಣಿ ಬರೆದು ಸರಿಯಿದೆ ಎಂದು ಬರೆದರೆ ಎಆರ್‌ಒ ಕ್ಲಿಯರ್ ಮಾಡುತ್ತಾರೆ. ತಕ್ಷಣ ಸಂಬಂಧಪಟ್ಟ ಆಸ್ತಿಗಳಿಗೂ ಇ-ಖಾತಾ ವಿತರಿಸಲಾಗುತ್ತದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೇಸ್ ವರ್ಕರ್ ಪರಿಶೀಲಿಸಿ ಟಿಪ್ಪಣಿ ಬರೆಯಲು ಸಹ 5-10 ನಿಮಿಷ ಸಾಕು. ಆದರೆ ಕೆಲವರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ವ್ಯವಸ್ಥೆ ಹೊಸದಾಗಿರುವುದರಿಂದ ಸಮಸ್ಯೆ ಆಗಿರಬಹುದು. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಎರಡು ವರ್ಷದಿಂದ ವ್ಯವಸ್ಥೆ ಸುಧಾರಣೆಗೆ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ಬಾಕ್ಸ್...
ಹೊಸದಾಗಿ ನೋಂದಣಿ
ಆದ ಆಸ್ತಿಗಳದ್ದೇ ಸಮಸ್ಯೆ: ನಗರದಲ್ಲಿ ಗಾಂಧಿನಗರ, ಜಯನಗರ, ಬಸವನಗುಡಿ, ರಾಜಾಜಿನಗರ, ಶಿವಾಜಿನಗರ ಸೇರಿ ಐದು ನೋಂದಣಾಧಿಕಾರಿ ವಲಯಗಳಿವೆ. ಇದರಲ್ಲಿ 43 ಉಪ ನೋಂದಣಾಧಿಕಾರಿ ಕಚೇರಿಗಳಿದ್ದು, ಈ ವ್ಯಾಪ್ತಿಯಲ್ಲಿ ಕಳೆದ 9 ತಿಂಗಳಲ್ಲಿ 50 ಸಾವಿರದಷ್ಟು ಆಸ್ತಿಗಳು ಶುದ್ಧ ಕ್ರಯ ಆಗಿರಬಹುದು. ಆಸ್ತಿಗಳ ಮಾಲೀಕತ್ವದ ವಿವರಗಳು ಮಾತ್ರ ತಂತ್ರಾಂಶದಲ್ಲಿ ಲಭ್ಯವಿಲ್ಲ. ಈ ಆಸ್ತಿಗಳ ಮಾಲೀಕರು ಕರಡು ಪಟ್ಟಿಯನ್ನು ನೋಡಿ ಸಂಬಂಧಪಟ್ಟ ಎಆರ್‌ಒ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಬಗೆಹಿರಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 2004ರಿಂದ ಈಚೆಗೆ ಶುದ್ಧ ಕ್ರಯ ಆದ (ಸೇಲ್ ಡೀಡ್) ಆಸ್ತಿಗಳ ವಿವರಗಳು ಕ್ರಯದ ಸಂಖ್ಯೆ ನಮೂದಿಸಿದರೆ ಸಾಕು ವೆಬ್‌ಸೈಟ್‌ಗೆ ಫೆಚ್ ಆಗುತ್ತದೆ. ಶೆಡ್ಯೂಲ್ (ಚೆಕ್ಕುಬಂದಿ), ಯಾರಿಂದ ಯಾರಿಗೆ ಯಾವಾಗ ಆಗಿದೆ ಎಂಬೆಲ್ಲಾ ವಿವರ ಲಭ್ಯವಾಗುತ್ತದೆ. ಅದಕ್ಕಿಂತಲೂ ಮೊದಲಿನ ಸೇಲ್ ಡೀಡ್ ಆಗಿದ್ದರೆ ಡೀಡ್ ಅಪ್ಲೋಡ್ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇ-ಖಾತಾ ಕಡ್ಡಾಯ: ಆಸ್ತಿ ನೋಂದಣಿಯಾಗದೆ ಹೈರಾಣ, ರಾಜ್ಯಾದ್ಯಂತ ಸರ್ವರ್ ಸಮಸ್ಯೆ
ತರಾತುರಿ ಅನುಷ್ಠಾನದಿಂದ ಸಮಸ್ಯೆ: ಎರಡು ತಿಂಗಳು ಸಮಯ ದೊರೆತಿದ್ದರೆ ಕಳೆದ 8-9 ತಿಂಗಳಿಂದ ಈಚೆಗೆ ಆಗಿರುವ ಕ್ರಯಗಳ ದಾಖಲೆಗಳನ್ನೂ ಡಿಜಿಟಲೈಸೇಷನ್ ಮಾಡಬಹುದಿತ್ತು. ಬಳಿಕ ಇ-ಖಾತಾ ಕಡ್ಡಾಯ ಮಾಡಿದರೆ ಸಮಸ್ಯೆ ಇರುತ್ತಿರಲಿಲ್ಲ. ಏಕಾಏಕಿ ರಾಜ್ಯ ಸರ್ಕಾರವು ಇ-ಖಾತಾ ಕಡ್ಡಾಯ ಮಾಡಿದೆ. ಹೀಗಾಗಿ ಸಮಸ್ಯೆ ಆಗುತ್ತಿದ್ದು, ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಒಂದು ಬಾರಿ ಸಮಸ್ಯೆ ಬಗೆಹರಿದರೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ) ಹೇಳಿದ್ದಾರೆ.