ಬೆಂಗಳೂರಿಗೆ ಸನಿಹದಲ್ಲಿರುವ ರಾಮನಗರ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದಲು ವಿಫುಲ ಅವಕಾಶಗಳಿವೆ. ಒಂದರ್ಥದಲ್ಲಿ ರಾಮನಗರ ಆರೋಗ್ಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರಿಗೆ ಹೆಬ್ಬಾಗಿಲು ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ರಾಮನಗರ (ಮಾ.03): ಬೆಂಗಳೂರಿಗೆ ಸನಿಹದಲ್ಲಿರುವ ರಾಮನಗರ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದಲು ವಿಫುಲ ಅವಕಾಶಗಳಿವೆ. ಒಂದರ್ಥದಲ್ಲಿ ರಾಮನಗರ ಆರೋಗ್ಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರಿಗೆ ಹೆಬ್ಬಾಗಿಲು ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ಅತಿ ಹೆಚ್ಚಿನ ಕೈಗಾರಿಕೆಗಳನ್ನು ಹೊಂದಿರುವ ಜಿಲ್ಲೆಗಳ ಪೈಕಿ ರಾಮನಗರ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿಗೆ ಹೆಬ್ಬಾಗಿಲು ಆಗುವಂತೆ ರಾಮನಗರ ಅಭಿವೃದ್ಧಿ ಹೊಂದುವ ಜತೆಗೆ ಆರೋಗ್ಯ ನಗರವಾಗಬೇಕಿದೆ. ಗುಣಮಟ್ಟದ ಆಸ್ಪತ್ರೆಗಳನ್ನು ನೀಡುವುದು ನಮ್ಮ ಕರ್ತವ್ಯ.
ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಲಿ ಎಂಬ ನಿಟ್ಟಿನಲ್ಲಿ ನೂತನ ಜಿಲ್ಲಾಸ್ಪತ್ರೆಗೆ ಚಾಲನೆ ನೀಡಲಾಗಿದೆ. ಈ ಆಸ್ಪತ್ರೆಗಾಗಿ ಜಾಗ ಗುರುತಿಸಲು ಓಡಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದ ಸುರೇಶ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಜಿಲ್ಲಾಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ 250 ಹಾಸಿಗೆ ಸಿದ್ಧ ಪಡಿಸಲಾಗಿದ್ದು, ಮುಂದೆ 500 ಹಾಸಿಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದರು. ಸ್ವತಃ ವೈದ್ಯಕೀಯ ಪದವೀಧರನಾದ ನಾನು ಈ ಆಸ್ಪತ್ರೆಯ ಪುನರ್ ವಿನ್ಯಾಸ ಮಾಡುವಲ್ಲಿ ಮತ್ತು ಇದನ್ನು ಮೇಲ್ದರ್ಜೆಗೇರಿಸುವಲ್ಲಿ ಆಸಕ್ತಿವಹಿಸಿದೆ.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕಿಮ್ಮತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ
ಮಣಿಪಾಲ ಆಸ್ಪತ್ರೆಯ ಪರಿಣತರನ್ನು ಇಲ್ಲಿಗೆ ಕರೆಸಿ ಪುನರ್ ವಿನ್ಯಾಸ ಮಾಡಿಸಿದೆ. ರೇಷ್ಮೆನಗರಿಯು ‘ಆರೋಗ್ಯನಗರ’ ವಾಗಿಯೂ ಬೆಳೆಯಲಿದೆ. ಈ ಹೈಟೆಕ್ ಆಸ್ಪತ್ರೆಯಿಂದಾಗಿ ಜಿಲ್ಲೆಯ ಜನರು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ ಎಂದರು. ರಾಜೀವ್ ಗಾಂಧಿ ವಿವಿ 270 ಎಕರೆ ಯಲ್ಲಿ ಆಗಲಿದೆ. ಭೂ ಸ್ವಾಧೀನ ದಲ್ಲಿ ಸವಾಲು ಎದುರಾಗಿತ್ತು. 10 ಎಕರೆ ಭೂ ಪರಿಹಾರ ವಿಚಾರವಾಗಿ ನ್ಯಾಯಾಲಯ ವ್ಯಾಜ್ಯ ನಡೆಯುತ್ತಿದೆ. ಅದು ಕೂಡ ಬಗೆಹರಿಯಲಿದೆ. 17 ವರ್ಷಗಳ ಪರಿಶ್ರಮದ ಫಲವಾಗಿ ಕಾರ್ಯ ರೂಪಕ್ಕೆ ಬರುತ್ತಿದೆ.
ವಿವಿ ಮತ್ತು ಮೆಡಿಕಲ್ ಕಾಲೇಜು ಸ್ಥಾಪನೆಗೆ 600 ಕೋಟಿ ಮೀಸಲಿಟ್ಟು, ಈಗಾಗಲೇ 300 ಕೋಟಿ ಬಿಡುಗಡೆ ಮಾಡಲಾಗಿದೆ. ಅಲ್ಲಿ 750 ಹಾಸಿಗೆ ಆಸ್ಪತ್ರೆ ನಿರ್ಮಾಣ ಆಗಲಿದೆ. ಟ್ರಾಮಾ ಸೆಂಟರ್ ಸ್ಥಾಪನೆಗೂ ಆದ್ಯತೆ ನೀಡುತ್ತೇವೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು. ನಮ್ಮಲ್ಲಿ ಏನೆ ವ್ಯತ್ಯಾಸಗಳಿದ್ದರೂ ಮೂರು ಪಕ್ಷಗಳು ಸೇರಿ, ರಾಮನಗರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಕರ್ನಾಟಕ ಎಂದರೆ ರಾಮನಗರ ಎಂಬಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ರಾಮನಗರದಲ್ಲಿ ಮತ್ತೆ ಜಟಾಪಟಿ: ನಗರದಲ್ಲಿ ನಡೆದ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ಪಾಲನೆ ವಿಚಾರವಾಗಿ ನಾಯಕರ ನಡುವೆ ವಾಗ್ವಾದ ನಡೆದು, ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬೆಳಗ್ಗೆ 11.12ಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಟೇಪ್ ಕತ್ತರಿಸಲು ಮುಂದಾದಾಗ, ಸ್ಥಳೀಯ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಬರುವವರೆಗೂ ಉದ್ಘಾಟನೆ ಮಾಡದಂತೆ ಆಯಾ ಪಕ್ಷಗಳ ಕಾರ್ಯಕರ್ತರು ಒತ್ತಾಯಿಸಿದರು.
ಕಾಂಗ್ರೆಸ್, ಜೆಡಿಎಸ್‌ಗೆ ಭವಿಷ್ಯವಿಲ್ಲ: ಸಚಿವ ಅಶ್ವತ್ಥನಾರಾಯಣ
ಆದರೂ, ಸಚಿವದ್ವಯರು ಟೇಪ್ ಕತ್ತರಿಸಿ ಆಸ್ಪತ್ರೆ ಲೋಕಾರ್ಪಣೆ ಮಾಡಿದ್ದು, ನಾಯಕರ, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ, ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಡಿ.ಕೆ.ಸುರೇಶ್, ಶಿಷ್ಟಾಚಾರ ಪಾಲನೆ ಮಾಡಬೇಕೆಂಬ ಪರಿಜ್ಞಾನವಿಲ್ಲವೇ?, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕಲ್ಲವೇ?, ರಾತ್ರಿ ಆಹ್ವಾನ ಕೊಟ್ಟು ಬೆಳಗ್ಗೆ ಕಾರ್ಯಕ್ರಮ ಮಾಡುತ್ತೀರಾ? ಎಂದು ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಹರಿಹಾಯ್ದರು. ಈ ವೇಳೆ, ಸಂಸದರು ಹಾಗೂ ಸಚಿವರ ನಡುವೆ ಮಾತಿನ ಚಕಮಕಿ ನಡೆಯಿತು.