ಕಾರವಾರ ಕ್ಷೇತ್ರದ ಹಾಲಿ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಇಬ್ಬರು ಕೂಡ ಒಬ್ಬರ ಮೇಲಲೆ ಒಬ್ಬರು ದೂರು ಕೊಟ್ಟುಕೊಂಡಿದ್ದಾರೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಕಾರವಾರ (ಮಾ.3): ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆದೇ ಬಿಡುತ್ತೆ ಅನ್ನೋವಷ್ಟರಲ್ಲಿ ಕರಾವಳಿ ಜಿಲ್ಲೆಯಾದ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ರಾಜಕೀಯ ಗುದ್ದಾಟಗಳು ಕಾಣಿಸತೊಡಗಿವೆ. ಕಾರವಾರ ಕ್ಷೇತ್ರದ ಹಾಲಿ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವಿನ ಕಿತ್ತಾಟ ತಾರಕಕ್ಕೇರಿದೆ. ತನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆಂದು ಶಾಸಕಿ ವಿರುದ್ಧ ಮಾಜಿ ಶಾಸಕ ಸೈಲ್ ದೂರು ಕೊಡಲು ಮುಂದಾದರೆ ಇತ್ತ ಶಾಸಕಿ ರೂಪಾಲಿ ನಾಯ್ಕ್ ಕೂಡಾ ತನ್ನ ಮೇಲೆ ಸಹ ಹಲ್ಲೆ ಮಾಡಲು ಮಾಜಿ ಶಾಸಕರು ಯತ್ನಿಸಿದ್ದಲ್ಲದೇ ಅವಾಚ್ಯವಾಗಿ ನಿಂದಿಸಿದ್ದಾರೆಂದು ಆರೋಪಿಸಿದ್ದಾರೆ.
undefined
ಒಂದೆಡೆ ಠಾಣೆ ಮುಂದೆಯೇ ಪಟ್ಟು ಹಿಡಿದು ಬೆಂಬಲಿಗರ ಜತೆ ಕುಳಿತಿರುವ ಮಾಜಿ ಶಾಸಕ, ಇನ್ನೊಂದೆಡೆ ಮಾಜಿ ಶಾಸಕರ ವಿರುದ್ಧ ಕಿಡಿಕಾರುತ್ತಾ ದೂರು ಕೊಡಲು ಆಗಮಿಸಿದ ಶಾಸಕಿ. ಮತ್ತೊಂದೆಡೆ ಠಾಣೆಯ ಮುಂದೆ ಜಮಾಯಿಸಿರುವ ಬೆಂಬಲಿಗರು ಹಾಗೂ ಪೊಲೀಸರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕಡಲ ನಗರಿ ಕಾರವಾರ ನಗರದಲ್ಲಿ. ಹೌದು, ಚುನಾವಣೆ ಸಮೀಪಿಸುತ್ತಿದ್ದಂತೆ ಕಾರವಾರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ್ದು, ಹಾಲಿ ಮತ್ತು ಮಾಜಿಗಳ ನಡುವೆ ಗುದ್ದಾಟ ಪ್ರಾರಂಭಗೊಂಡಿದೆ.
ಇಂದು ಕಾರವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮಾಜಾಳಿ ಪಂಚಾಯತ್ ನ ಪಿಡಿಒ ವರ್ಗಾವಣೆ ವಿಚಾರವನ್ನಿಟ್ಟುಕೊಂಡು ಮಾಜಿ ಶಾಸಕ ಸತೀಶ್ ಸೈಲ್ ಸಿಇಒ ಬಳಿ ಮಾತನಾಡಲು ಹೋಗಿದ್ದರು. ಇದೇ ವೇಳೆ ಹಾಲಿ ಶಾಸಕಿ ರೂಪಾಲಿ ನಾಯ್ಕ ಕೂಡಾ ಸಿಇಓ ಕಚೇರಿಗೆ ಆಗಮಿಸಿದ್ದು, ವರ್ಗಾವಣೆ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ.
ಇಬ್ಬರ ನಡುವೆ ಜಗಳ ತಾರಕಕ್ಕೆ ಏರಿದ್ದು, ಇದಾದ ನಂತರ ಶಾಸಕಿ ರೂಪಾಲಿ ನಾಯ್ಕ ಅವರು ತನ್ನ ಮೇಲೆ ಪೇಪರ್ ವೇಯ್ಟರ್ ನಲ್ಲಿ ಹಲ್ಲೆ ಮಾಡಲು ಬಂದಿದ್ದಾರೆ. ತನಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಶಾಸಕಿ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಮಾಜಿ ಶಾಸಕ ಸತೀಶ್ ಸೈಲ್ ಕಾರವಾರ ನಗರ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ಈ ವೇಳೆ ಶಾಸಕಿ ರೂಪಾಲಿ ವಿರುದ್ಧ ಕಿಡಿ ಕಾರಿದ ಸೈಲ್, ದೂರು ಪಡೆಯಲು ಪೊಲೀಸರು ವಿಳಂಬ ಮಾಡುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮಾಜಿ ಶಾಸಕ ಸತೀಶ್ ಸೈಲ್ ತನ್ನ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆನ್ನುವ ವಿಷಯ ತಿಳಿಯುತ್ತಿದ್ದಂತೇ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ರೂಪಾಲಿ ನಾಯ್ಕ್ ಸಭೆ ಮುಗಿಸಿ ಸೀದಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಅಲ್ಲದೇ, ಠಾಣೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ವಿರುದ್ದ ದೂರು ನೀಡಿದ್ದಾರೆ. ತನ್ನ ಮೇಲೆ ಮಾಜಿ ಶಾಸಕರು ಹಲ್ಲೆ ಮಾಡಲು ಮುಂದಾಗಿದ್ದು, ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ರೂಪಾಲಿ ನಾಯ್ಕ್ ಅವರು ಮಾಜಿ ಶಾಸಕ ಸತೀಶ್ ಸೈಲ್ ವಿರುದ್ಧ ಮನಬಂದಂತೆ ವಾಗ್ದಾಳಿ ನಡೆಸಿದರು. ಮಾಜಿ ಶಾಸಕರು ಕುಡಿದು ಬಂದು ಅಮಲಿನಲ್ಲಿ ಜಗಳ ಮಾಡುತ್ತಿದ್ದು, ಅವರಿಗೆ ಲಿವರ್ ಸಮಸ್ಯೆಯಿದೆ. ರಾತ್ರಿ ಕುಡಿದು ಸರಿಹೊಂದಿಸಿಕೊಳ್ಳಲು ಬೆಳಗ್ಗೆ ಕೂಡಾ ಕುಡಿಯುತ್ತಾರೆ. ಗಣಿ ಖಾಲಿ ಮಾಡಿ ಜೈಲು ಸೇರಿದವರು ಮಾಜಿ ಶಾಸಕ ಸತೀಶ್ ಸೈಲ್ ಎಂದು ಕಿಡಿಕಾರಿದರು.
ಇತಿಹಾಸದಲ್ಲೇ ಆಗದ ಕೆಲಸ ಬಿಜೆಪಿ ಸರ್ಕಾರದಲ್ಲಿ ಆಗುತ್ತಿದೆ: ರೂಪಾಲಿ ನಾಯ್ಕ್
ಮಾಜಿ ಶಾಸಕ ಹಾಗೂ ಹಾಲಿ ಶಾಸಕರ ನಡುವಿನ ಕಿತ್ತಾಟದಿಂದ ಯಾರ ಮೇಲೆ ಕ್ರಮ ಕೈಗೊಳ್ಳಬೇಕು, ಯಾರ ದೂರು ದಾಖಲಿಸಬೇಕು ಎಂದು ಪೊಲೀಸರು ಕೆಲವು ಕಾಲ ಗೊಂದಲಕ್ಕೆ ಸಿಲುಕಿದರು. ಶಾಸಕಿ ಪೊಲೀಸ್ ಠಾಣೆಯಿಂದ ತನ್ನ ಮನೆಗೆ ತೆರಳಿದರೆ, ಇತ್ತ ಮಾಜಿ ಶಾಸಕರು ತಾನು ಕುಡಿದಿದ್ದೇನೋ ಇಲ್ಲವೋ ಅಂತಾ ಖಚಿತವಾಗಲಿ ಎಂದು ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ತೆರಳಿದರು.
ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಮೀನುಗಾರರ ಆಕ್ರೋಶ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ
ಅಲ್ಲದೇ, ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರು ಪೊಲೀಸ್ ಠಾಣೆ ಮುಂದೆ ಜಮಾವಣೆ ಆಗಿದ್ದು ಕೆಲವು ಕಾಲ ನಗರದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿ ಜಿಲ್ಲೆ ಕಾರವಾರದಲ್ಲಿ ರಾಜಕೀಯ ಗುದ್ದಾಟ ಕಾಣಿಸಿಕೊಂಡಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೇ ಈ ಗಲಾಟೆಗಳು ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.