ಜನರ ಹಿತ ಕಾಪಾಡಬೇಕಾದ ರೈಲ್ವೆ ಇಲಾಖೆ ಉತ್ತಮ ಕೆಲಸ ನಿರ್ವಹಿಸಲಾಗುತ್ತೆ ಎಂದು ನಂಬಿಕೆ ಇಡಲಾಗಿತ್ತು. ಆದರೆ ಈ ಇಲಾಖೆಯಲ್ಲಿ ಗುತ್ತಿಗೆ ಸಿಗುವುದು ಅಪರೂಪ, ಸಿಕ್ಕಂತ ಅವಕಾಶ ದುರುಪಯೋಗವಾಗ ಮಾಡಿಕೊಳ್ಳಲಾಗಿದೆ: ಜಾರಕಿಹೊಳಿ
ಬೆಳಗಾವಿ(ಅ.20): ನಗರದ ಟಿಳಕವಾಡಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಈ ರಸ್ತೆಯಲ್ಲಿ ಗುಂಡಿ ಬಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜನತೆಯ ವಿಶ್ವಾಸಾರ್ಹ ರೈಲ್ವೆ ಇಲಾಖೆಯಿಂದ ಕಳಪೆ ಕಾಮಗಾರಿ ನಡೆದಿರುವುದು ವಿಷಾದಕರ ಸಂಗತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಳಕವಾಡಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ. ಈ ಮೊದಲು ನಿರ್ಮಾಣಗೊಂಡ ಎರಡನೇ ರೈಲ್ವೆ ಮೇಲ್ಸೇತುವೆಯಲ್ಲಿ ಸಮಸ್ಯೆ ಉದ್ಬವವಾಗಿತ್ತು. ನಂತರ ಆ ಸಮಸ್ಯೆ ಪರಿಹರಿಸಲಾಯಿತು. ಅದೇ ರೀತಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲೇ ರಸ್ತೆಯಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ಜನರ ಹಿತ ಕಾಪಾಡಬೇಕಾದ ರೈಲ್ವೆ ಇಲಾಖೆ ಉತ್ತಮ ಕೆಲಸ ನಿರ್ವಹಿಸಲಾಗುತ್ತೆ ಎಂದು ನಂಬಿಕೆ ಇಡಲಾಗಿತ್ತು. ಆದರೆ ಈ ಇಲಾಖೆಯಲ್ಲಿ ಗುತ್ತಿಗೆ ಸಿಗುವುದು ಅಪರೂಪ, ಸಿಕ್ಕಂತ ಅವಕಾಶ ದುರುಪಯೋಗವಾಗ ಮಾಡಿಕೊಳ್ಳಲಾಗಿದೆ. ರೈಲ್ವೆ ಇಲಾಖೆ ಸಹ ರಾಜ್ಯ ಸರ್ಕಾರದ ಕಾರ್ಯವೈಖರಿ ಮಾದರಿಯಲ್ಲಿ ಬಂದು ನಿಂತಿದೆ ಎಂದು ಕಿಡಿಕಾರಿದರು.
ಬೆಳಗಾವಿ: ರೇಲ್ವೆ ಮೇಲ್ಸೇತುವೆ ಬಣ್ಣ ಎರಡೇ ದಿನಕ್ಕೆ ಬಯಲು..!
ಅವೈಜ್ಞಾನಿಕದಿಂದ ಕೂಡಿದ ಮೇಲ್ಸೇತುವೆ:
ಅವೈಜ್ಞಾನಿಕ ಕಾಮಗಾರಿ ಬಗ್ಗೆ ರಾಜ್ಯ-ರಾಷ್ಟ್ರೀಯ ಮಾಧÜ್ಯಮಗಳಲ್ಲಿ ಚರ್ಚೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟಿಳಕವಾಡಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಮೇಲೆ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಪೂರ್ಣಗೊಳಿಸಲು ನಾಲ್ಕು ವರ್ಷ ಸಮಯ ತೆಗೆದುಕೊಂಡರೂ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ರಸ್ತೆ ಮೇಲ್ಸೇತುವೆ ಅವೈಜ್ಞಾನಿಕವಾಗಿದೆ. ಈ ಕಳಪೆ ಕಾಮಗಾರಿ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಒತ್ತಾಯಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ:
ಖಾನಾಪುರ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್‌ನಿಂದ ಜನರಿಗೆ ಸಂಚಾರ ಸಮಸ್ಯೆ ಆಗುತ್ತಿತ್ತು. ಹೀಗಾಗಿ ರೈಲ್ವೆ ಇಲಾಖೆ ಟಿಳಕವಾಡಿ ರೈಲ್ವೆಯ ಮೂರನೇ ಗೇಟ್ ಬಳಿ ರಸ್ತೆ ಮೇಲ್ಸೇತುವೆ ನಿರ್ಮಿಸಿತ್ತು. ಟ್ರಾಫಿಕ್ ಸಮಸ್ಯೆ ತಪ್ಪಿಸಲು 2019ರಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾಗಿತ್ತು. ಅಂದು ಸುರೇಶ ಅಂಗಡಿಯವರು ಶಂಕುಸ್ಥಾಪನೆ ಮಾಡಿದ್ದರು. ಆದರೆ ಕೋಟ್ಯಂತರ ವೆಚ್ಚದ ಸೇತುವೆ ನಿರ್ಮಾಣಕ್ಕೆ ಮೂರು ವರ್ಷ ತೆಗೆದುಕೊಳ್ಳಲಾಗಿದೆ. ಈ ಮೇಲ್ಸೇತುವೆ ಇದೇ ಅಕ್ಟೋಬರ್ 12ರಂದು ಉದ್ಘಾಟಿಸಲಾಗಿದ್ದು, ಈ ಸೇತುವೆಯ ಮಧ್ಯದಲ್ಲೇ ಗುಂಡಿಗಳು ಬಿದ್ದಿವೆ. ಈ ಕಳಪೆ ಕಾಮಗಾರಿಗೆ ನೈಋುತ್ಯ ರೈಲ್ವೆ ಅಧಿಕಾರಿಗಳೇ ಹೊಣೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳೂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.