ರಾಜಾದ್ಯಂತ ವ್ಯಾಪಿಸಿರುವ ಚರ್ಮಗಂಟು ರೋಗ ಹಾವಳಿಯಿಂದಾಗಿ ಜಾನುವಾರಗಳ ಸಂತೆ ಮತ್ತು ಜಾತ್ರೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಆದೇಶ ಹೊರಡಿಸಿದ ಸರ್ಕಾರ ಮತ್ತು ಆಯಾ ಜಿಲ್ಲಾಡಳಿತಗಳು.
ಜಗದೀಶ ವಿರಕ್ತಮಠ
ಬೆಳಗಾವಿ(ಅ.20): ಚರ್ಮಗಂಟು ರೋಗ ಜಾನುವಾರುಗಳನ್ನು ತೀವ್ರವಾಗಿ ಕಾಡುತ್ತಿರುವುದರಿಂದ ರೈತಾಪಿ ವರ್ಗ ಹಾಗೂ ರಾಸುಗಳು ನಲುಗುತ್ತಿವೆ. ಈ ರೋಗ ಬಾಧೆಯಿಂದ ಬಳಲುತ್ತಿರುವ ಜಾನುವಾರುಗಳನ್ನು ಕಸಾಯಿಖಾನೆಗೆ ದೂಡಲಾಗುತ್ತಿರುವ ಅಂಶಗಳು ಬೆಳಕಿಗೆ ಬರುತ್ತಿವೆ. ರಾಜಾದ್ಯಂತ ವ್ಯಾಪಿಸಿರುವ ಚರ್ಮಗಂಟು ರೋಗ ಹಾವಳಿಯಿಂದಾಗಿ ಜಾನುವಾರಗಳ ಸಂತೆ ಮತ್ತು ಜಾತ್ರೆಗಳನ್ನು ಸರ್ಕಾರ ಮತ್ತು ಆಯಾ ಜಿಲ್ಲಾಡಳಿತಗಳು ಸಂಪೂರ್ಣವಾಗಿ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡಲಾಗದೇ ಸಾವಿರ ಮೌಲ್ಯದ ಜಾನುವಾರುಗಳನ್ನು ಕೈಗೆ ಬಂದ ಬೆಲೆಗೆ ಕಟುಕರ ಕೈಗೆ ಒಪ್ಪಿಸುತ್ತಿದ್ದಾರೆ. ಈ ದೃಶ್ಯಗಳನ್ನು ನೋಡುತ್ತಿರುವ ಜನತೆ ಮಮ್ಮಲ ಮರುಕಪಡುವಂತಾಗಿದೆ.
ಹಿಂಗಾರು ಹಂಗಾಮು ಚುರುಕು ಪಡೆದುಕೊಳ್ಳುತ್ತಿರುವ ಬೆನ್ನಲ್ಲೆ ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗದಿಂದ ನಲುಗುತ್ತಿದ್ದಾರೆ. ಇದರಿಂದಾಗಿ ಜಾನುವಾರುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಸಾಯಿಖಾನೆಗಳತ್ತ ಮುಖ ಮಾಡುವ ಅನಿವಾರ್ಯತೆ ರೈತಾಪಿ ವರ್ಗಕ್ಕೆ ಎದುರಾಗಿದೆ. ಸರ್ಕಾರ ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡದಂತೆ ಹಲವು ಜಾಗೃತಿಗಳನ್ನು ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ರೋಗದ ತೀವ್ರತೆ ಹೆಚ್ಚುತ್ತಿರುವುದರಿಂದ ಹಂತ, ಹಂತವಾಗಿ ಜಾನುವಾರುಗಳು ಮೃತಪಡುತ್ತಿರುವುದರಿಂದ ಮಾಲೀಕರು ಸಾವಿರಾರು ರುಪಾಯಿ ಬೆಲೆ ಬಾಳುವ ರಾಸುಗಳನ್ನು ಕೈಗೆ ಬಂದ ದರಕ್ಕೆ ಸದ್ದಿಲ್ಲದೇ ಮಾರಾಟ ಮಾಡುತ್ತಿದ್ದಾರೆ.
ಜಾನುವಾರುಗಳಿಗೆ Lumpy skin disease; ಹೈನೋದ್ಯಮಕ್ಕೆ ಪೆಟ್ಟು
ಜಾನುವಾರು ಖರೀದಿಸುವವರು ತೀಕ್ಷ್ಣವಾಗಿ ಪರಿಶೀಲನೆ
ಚರ್ಮಗಂಟು ರೋಗದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಸುಗಳ ಜಾತ್ರೆ ಮತ್ತು ಸಂತೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗೆ ಬಂದು ಜಾನುರವಾರುಗಳನ್ನು ಖರೀದಿ ಮಾಡಲಾಗುತ್ತಿದೆ. ಈ ವೇಳೆ ಜಾನುವಾರುಗಳನ್ನು ತೀಕ್ಷ$್ಣವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಚರ್ಮಗಂಟು ರೋಗ ಅಂಟಿಕೊಂಡಿದ್ದರೆ ಅತ್ಯಂತ ಕಡಿಮೆ ಬೆಲೆಗೆ ಕಟುಕರು ಖರೀದಿಸುತ್ತಿದ್ದಾರೆ. ಇನ್ನೂ ಕೆಲವರು ರೋಗವಾಗದಿದ್ದರೂ ಬೇರೆ ಕಾರಣಕ್ಕೆ ಸಣ್ಣ ಪ್ರಮಾಣದ ಗಂಟು ಕಾಣಿಸಿಕೊಂಡರು ಜಾನುವಾರುಗಳನ್ನು ಖರೀಸಲು ಹಿಂದೇಟು ಹಾಕುತ್ತಿದ್ದಾರೆ.
ಆಕಳು ಹಾಗೂ ಎತ್ತಿನ ತಳಿಗಳಿಗೆ ಅದರಲ್ಲೂ ಕ್ರಾಸ್‌ಬಿಡ ಖಿಲಾರಿ, ಜರ್ಜಿ, ಡೈರಿ ಸೇರಿದಂತೆ ಇನ್ನೀತರ ಜಾನುವಾರುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿರುವುದರಿಂದ ಗೋವುಗಳನ್ನು ರೈತರು ಸದ್ದಿಲ್ಲದೇ ಮಾರಾಟ ಮಾಡುತ್ತಿದ್ದರೆ, ಕಟುಕರು ಕೂಡ ಸದ್ದಿಲ್ಲದೇ ಖರೀದಿಸುತ್ತಿದ್ದಾರೆ ಎನ್ನಲಾಗುತ್ತಿದೆ.