ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನಸಾಮಾನ್ಯರ ಬಯಕೆಯಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಶಾಸಕ ಬಿ.ಸುರೇಶಗೌಡ ತಿಳಿಸಿದ್ದಾರೆ.
ತುಮಕೂರು : ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನಸಾಮಾನ್ಯರ ಬಯಕೆಯಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಶಾಸಕ ಬಿ.ಸುರೇಶಗೌಡ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಬಿಜೆಪಿಯ ಸಾಮಾಜಿಕ ಮಾಧ್ಯಮ ಪ್ರಕೋಷ್ಠದಿಂದ ಹಮ್ಮಿಕೊಂಡಿದ್ದ ಶಂಖನಾಧ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಸೋಷಿಯಲ್ ಮೀಡಿಯಾ ಅಕ್ಟೀವ್ ಇದ್ದಷ್ಟು ಹೆಚ್ಚು ಮತದಾರರನ್ನು ತಲುಪಲು ಸಾಧ್ಯಎಂದರು.
ಕಾಂಗ್ರೆಸ್ ನ ಬಿಟ್ಟಿ ಭಾಗ್ಯಗಳಿಗೆ ಮನಸೋತು ಮತ ನೀಡಿದ ರಾಜ್ಯದ ಜನತೆ ಕೇವಲ ಮೂರು ತಿಂಗಳಲ್ಲಿ ಕಾಂಗ್ರೆಸ್ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ. ಹಾಗಾಗಿ, ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಕಾರ್ಯಕರ್ತರು ಮಾತನಾಡುವುದಕ್ಕಿಂತ, ಜನರು ಸರಕಾರದ ವಿರುದ್ಧ ಮಾತನಾಡುವುದು ಟ್ರೋಲ್ ಆಗುವಂತೆ ಮಾಡಬೇಕು ಎಂದರು.
ಬಿಟ್ಟಿ ಭಾಗ್ಯಗಳಿಂದ ಅಭಿವೃದ್ಧಿಗೆ ಒಂದು ನೈಯಾಪೈಸೆ ಹಣ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಗುಂಡಿ ಬಿದ್ದಿರುವ ರಸ್ತೆಗೆ ಒಂದು ಗುದ್ದಲಿ ಮಣ್ಣು ಹಾಕಲು ಸರಕಾರದ ಬಳಿ ಹಣವಿಲ್ಲ. ಇಂತಹ ವಿಚಾರಗಳು ಜನರಿಗೆ ತಲುಪಿಸುವ ಜವಾಬ್ದಾರಿ ಸೋಷಿಯಲ್ ಮೀಡಿಯಾ ಸೈನಿಕರ ಮೇಲಿದೆ. ನಿಮಗೆ ನೀವೇ ಸೇನಾಧಿಪತಿಗಳು ಹೆಚ್ಚು ನಿಮ್ಮ ಸೈನಿಕ ಪಡೆಯನ್ನು ಸಕ್ರಿಯಗೊಳಿಸಿಕೊಂಡಷ್ಟು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶ ಹೆಚ್ಚಿರುತ್ತದೆ ಎಂದರು.
2024 ರ ಲೋಕಸಭಾ ಚುನಾವಣೆ ಈ ದೇಶದ ಭವಿಷ್ಯ ನಿರ್ಧರಿಸುತ್ತದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಸಿದ್ದ ಎಂದು ಶಾಸಕ ಬಿ.ಸುರೇಶಗೌಡ ಭರವಸೆ ನೀಡಿದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಸೋಷಿಯಲ್ ಮೀಡಿಯಾ ಚುನಾವಣೆ ಹೊಸ್ತಿಲಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕಿದೆ. ವ್ಯಕ್ತಿಗಳ ವಯುಕ್ತಿಕ ವಿಚಾರಗಳನ್ನು ಬದಿಗಿಟ್ಟು, ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿಗಳಿಂದ ರಾಜ್ಯದ ಬೊಕ್ಕಸದ ಮೇಲಾಗುತ್ತಿರುವ ದುಷ್ಪರಿಣಾಮ ಹಾಗೂ ಜನರ ಅಭಿಪ್ರಾಯಗಳನ್ನು ಮತದಾರರ ಮುಂದಿಡುವ ಕೆಲಸ ಆಗಬೇಕು. ವಿರೋಧ ಪಕ್ಷದ ಕಾರ್ಯಕರ್ತರು ಹಾಕುವ ಪೋಸ್ಟ್ ಗೆ ನಿಮ್ಮ ಪ್ರತಿಕ್ರಿಯೆ ಕಾನೂನು ಚೌಕಟ್ಟಿನ ಒಳಗೆ ಇರಬೇಕು. ಸೋಷಿಯಲ್ ಮೀಡಿಯಾ ನಗರ ಪ್ರದೇಶಗಳಿಗೆ ಸಿಮೀತವಾಗದೆ. ತಾಲೂಕು, ಹೋಬಳಿ ಮತ್ತು ಬೂತ್ ಮಟ್ಟಕ್ಕೂ ತಲುಪಿ, ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ ಮಾತನಾಡಿ, ಇಂದು ಕಾನೂನು ಬಿಗಿ ಇದೆ. ಯಾವುದೇ ಪೋಸ್ಟ್ ಹಾಕುವಾಗ ಮತ್ತು ಪೋಸ್ಟ್ ಫಾರ್ವಡ್ ಮಾಡುವಾಗ ಎಚ್ಚರವಿರಲಿ, ದಿನದ ಒಂದು ಗಂಟೆ ಮೀಸಲಿಟ್ಟರೆ ಸಾಕು ಹೆಚ್ಚು ಜನರನ್ನು ತಲುಪಬಹುದು. 2023ರ ಚುನಾವಣೆಯಲ್ಲಿ ಬಿಜೆಪಿ ತನ್ನ ಸಾಧನೆಯನ್ಬು ಸಮರ್ಥವಾಗಿ ಬಿಂಬಿಸಲು ವಿಫಲವಾಯಿತು. ಜನರು ಕಾಂಗ್ರೆಸ್ ನ ಹುಸಿ ಭಾಗ್ಯಗಳನ್ಬು ನಂಬಿ ಮತ ಹಾಕಿ ಮೋಸ ಹೋಗಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ನ ಯೋಜನೆಗಳನ್ನು ಮೆಚ್ಚಿ ಮಾತನಾಡುತಿದ್ದ ಜನರು, ಮೂರು ತಿಂಗಳಲ್ಲಿಯೇ ತೆಗಳಿ ಮಾತನಾಡಲು ಆರಂಭಿಸಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣಾ ವೇಳೆ ರಚಿಸಿದ ವಾಟ್ಸಫ್ ಗ್ರೂಪ್ ಗಳು ಪ್ರತಿ ಬೂತ್ ಮಟ್ಟದಲ್ಲಿಯೂ ಇದ್ದು ಅವರನ್ನು ಆಕ್ಟೀವ್ ಗೊಳಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕೆಂದರು.
ಬಿಜೆಪಿ ಸೋಷಿಯಲ್ ಮಿಡಿಯಾ ಜಿಲ್ಲಾ ಸಂಚಾಲಕ ರಾಘವೇಂದ್ರ ನಾದೂರು ಮಾತನಾಡಿ, ಕೇವಲ ಹೆಸರಿಗಷ್ಟೆ ಸೋಷಿಯಲ್ ಮೀಡಿಯಾದಲ್ಲಿದ್ದರೆ ಸಾಲದು, ತಮ್ಮ ವ್ಯಾಪ್ತಿಯ ಬೂತ್‌ಗಳಲ್ಲಿ ಅತಿ ಹೆಚ್ಚು ಸಕ್ರಿಯರಾಗಿ ಪಾಲ್ಗೊಳ್ಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ೨೦೨೪ರ ಚುನಾವಣೆ ಬಿಜೆಪಿ ಪಾಲಿಕೆ ನಿರ್ಣಾಯಕ. ಸೋಷಿಯಲ್ ಮೀಡಿಯಾ ಪಾತ್ರ ಬಹಳ ಮುಖ್ಯ ಎಂದರು.
ಬಿಜೆಪಿ ಸೋಷಿಯಲ್ ಮೀಡಿಯಾ ರಾಜ್ಯ ಕಾರ್ಯದರ್ಶಿ ನರೇಂದ್ರಮೂರ್ತಿ ಮಾತನಾಡಿ, ಮೂರು ಹಂತದಲ್ಲಿ ಸೋಷಿಯಲ್ ಮೀಡಿಯಾವನ್ನು ಅಕ್ಟಿವ್‌ಗೊಳಿಸಲು ಮುಂದಾಗಿದ್ದೇವೆ. ಸಂಘಟನೆ, ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ ಹಾಗೂ ಬೂತ್ ಮಟ್ಟದ ತಂಡ ರಚನೆಯಂತಹ ಮೂರು ಹಂತದಲ್ಲಿ ಸೋಷಿಯಲ್ ಮಿಡಿಯಾ ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಬಿಜೆಪಿ ಸೋಷಿಯಲ್ ಮಿಡಿಯಾ ರಾಜ್ಯಮಟ್ಟದ ಕಾರ್ಯಾಗಾರ ಶಂಖನಾದಲ್ಲಿ ಬಿಜೆಪಿ ಹಿತೈಷಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಸಂಚಾಲಕ ಬ್ಯಾಟರಂಗೇಗೌಡ, ಗುಬ್ಬಿ ಮುಖಂಡ ದಲೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.