ಜನತಾದರ್ಶನದಲ್ಲಿ ಸ್ವೀಕೃತ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ: ಡೀಸಿ

By Kannadaprabha News  |  First Published Sep 27, 2023, 9:22 AM IST

ಜನತಾದರ್ಶನದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಾಕೀತು ಮಾಡಿದರು.


  ತುಮಕೂರು :  ಜನತಾದರ್ಶನದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು ಜನತಾದರ್ಶನ ಕಾರ್ಯಕ್ರಮದಲ್ಲಿ ಒಟ್ಟು 819 ಅರ್ಜಿಗಳು ಸ್ವೀಕೃತಿಯಾಗಿದ್ದು, ಅದರಲ್ಲಿ ಶೆ.50 ರಷ್ಟು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿ ಬಂದಿವೆ ಎಂದರು.

Latest Videos

undefined

ಎಲ್ಲಾ ಅರ್ಜಿಗಳನ್ನು ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ವಿಲೇವಾರಿ ಮಾಡಲಾಗುವುದು. ಎಲ್ಲಾ ತಹಸೀಲ್ದಾರ್‌ ಪ್ರತ್ಯೇಕವಾದ ಕೌಂಟರ್ ತೆರೆದು ಅಲ್ಲಿಗೆ ಒಬ್ಬರನ್ನು ಡೇಟಾಎಂಟ್ರಿ ಆಪರೇಟರ್ ನ್ನು ನಿಯೋಜಿಸಿ ಅರ್ಜಿಗಳ ಪರಿಶೀಲನೆಯನ್ನು ಪ್ರತಿನಿತ್ಯ ಮಾಡುವುದರ ಮೂಲಕ ಮುಂದಿನ ಜನತಾ ದರ್ಶನ ಕಾರ್ಯಕ್ರಮದೊಳಗಾಗಿ ಪರಿಹಾರ ನೀಡಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ ಆಶ್ರಯ ಯೋಜನೆಗೆ 761 ಎಕರೆ ಜಾಗ ಗುರುತಿಸಿ ಸರ್ವೇ ಮಾಡಲಾಗಿದ್ದು, ಈ ಜಾಗವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡು ನರೇಗಾ ಯೋಜನೆಯ ಅನುದಾನ ಬಳಸಿಕೊಂಡು ವಸತಿ ಬಡಾವಣೆ ನಿರ್ಮಾಣ ಮಾಡುವುದಕ್ಕೆ ಕ್ರಮ ವಹಿಸಬೇಕೆಂದು ತಿಳಿಸಿದರು.

ತುಮಕೂರು ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಕಾರ್ಯಕ್ರಮಕ್ಕೆ ಅಕ್ಟೋಬರ್ 2ರಂದು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನಿವೇಶನ ರಹಿತರಿಗೆ ನಿವೇಶನ ನೀಡಿದರೆ ಅವರು ಸರ್ಕಾರದ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಗ್ರಾ.ಪಂ. ಕೇಂದ್ರದಿಂದ 2 ಕಿ.ಮಿ. ವ್ಯಾಪ್ತಿಯಲ್ಲಿ ಉದ್ಯಾನವನ ನಿರ್ಮಿಸಲು ಕಂದಾಯ ನಿರೀಕ್ಷಕರುಗಳು ಜಾಗವನ್ನು ಗುರುತಿಸಬೇಕು. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಉದ್ಯಾನವನ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಪ್ರತಿನಿತ್ಯ ವಾಯು ವಿಹಾರಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮಳೆ ಹಾನಿಗೊಳಗಾದ ಮತ್ತು ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡುತ್ತಿರುವ ಫಲಾನುಭವಿಗಳು ಅವಧಿಯೊಳಗೆ ಮನೆಗಳನ್ನು ನಿರ್ಮಾಣ ಮಾಡುವಂತೆ ಅವರಿಗೆ ತಿಳಿಸಬೇಕೆಂದು ಇಒಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 2023 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯನ್ನು ಪಿಆರ್‌ಒಗಳು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಮಾಡುತ್ತಿದ್ದು, ಅವರು ಇನ್ನೂ 5 ದಿನಗಳೊಳಗಾಗಿ ಶೇಕಡಾ ನೂರರಷ್ಟು ಪ್ರಗತಿ ಸಾಧಿಸುವಲ್ಲಿ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳನ್ನು ಈ ಆಫೀಸ್ ಮೂಲಕವೇ ವಿಲೇವಾರಿ ಮಾಡಬೇಕು. ಕಡತಗಳನ್ನು ಭೌತಿಕವಾಗಿ ವಿಲೇವಾರಿ ಮಾಡಬಾರದು ಎಂದು ಹೇಳಿದರು.

ಜಿಲ್ಲೆಯಲ್ಲಿ ಹೊಸದಾಗಿ 265 ಕಂದಾಯ ಗ್ರಾಮಗಳನ್ನಾಗಿ ಮಾಡುವುದಕ್ಕೆ ಆದೇಶ ಹೊರಡಿಸಲಾಗಿದೆ. ಅದರಲ್ಲಿ 80 ಗೊಲ್ಲರಹಟ್ಟಿಗಳಿವೆ ಅವುಗಳ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮುಂದಿನ ಸಭೆಗೆ ಬರುವಾಗ ಕ್ರಿಯಾ ಯೋಜನೆ ಸಿದ್ಧಪಡಿಸಿ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅಕ್ಟೋಬರ್ 1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಶತಾಯುಷಿಗಳಾಗಿರುವ ೭೦೭ ಜನರಿಗೆ ಸನ್ಮಾನ ಮಾಡಬೇಕೆಂದು ತಹಸೀಲ್ದಾರ್‌ಗಳಿಗೆ ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಉಪ ವಿಭಾಗಾಧಿಕಾರಿ ಗೌರವ್‌ಕುಮಾರ್‌ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!