ಉತ್ತರ ಕರ್ನಾಟಕ ಭಾಗದಲ್ಲಿ ಭಜನೆಗೆ ಸಾಕಷ್ಟುಪ್ರೋತ್ಸಾಹವಿದ್ದು ಸರ್ಕಾರ ಭಜನಾ ಅಕಾಡೆಮಿ ಸ್ಥಾಪನೆ ಮಾಡಬೇಕಿದೆ ಎಂದು ನ್ಯಾಯವಾದಿ ಪ್ರಕಾಶ ಉಡಿಕೇರಿ ಆಗ್ರಹಿಸಿದ್ದಾರೆ.
ಧಾರವಾಡ (ಅ.2) : ಉತ್ತರ ಕರ್ನಾಟಕ ಭಾಗದಲ್ಲಿ ಭಜನೆಗೆ ಸಾಕಷ್ಟುಪ್ರೋತ್ಸಾಹವಿದ್ದು ಸರ್ಕಾರ ಭಜನಾ ಅಕಾಡೆಮಿ ಸ್ಥಾಪನೆ ಮಾಡಬೇಕಿದೆ ಎಂದು ನ್ಯಾಯವಾದಿ ಪ್ರಕಾಶ ಉಡಿಕೇರಿ ಹೇಳಿದರು. ನಗರದ ಜಾನಪದ ಸಂಶೋಧನಾ ಕೇಂದ್ರದ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭಜನಾ ಉತ್ಸವ ಹಾಗೂ ಕಲಾವಿದರ ಸನ್ಮಾನ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಜನಾ ಮಂಡಳಿ ಸಮಾನತೆಯ ಪಾಠ ಮಾಡುವ ಪಾಠಶಾಲೆಯಾಗಬೇಕು: ಡಾ. ಹೆಗ್ಗಡೆ
undefined
ಕರ್ನಾಟಕದಲ್ಲಿ ಪ್ರತಿ ಹಳ್ಳಿಯಲ್ಲೂ ಕನಿಷ್ಠ ಹತ್ತು ಭಜನಾ ತಂಡಗಳು ಕಾಣಸಿಗುತ್ತವೆ. ಇಂದಿಗೂ ವಚನ, ದಾಸವಾಣಿ, ಭಕ್ತಿ ಗೀತೆಗಳು ಉಳಿದು ಬೆಳೆದು ಬಂದಿರವುದೇ ಭಜನಾ ತಂಡಗಳಿಂದ ಎಂದ ಅವರು, ಭಜನಾ ಅಕಾಡೆಮಿ ಸ್ಥಾಪನೆಯಾಗಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಧಾರವಾಡ ಸಾಂಸ್ಕೃತಿಕ ರಾಜಧಾನಿಯಾಗಿದ್ದು ಇಲ್ಲಿಯ ಕಲಾವಿದರಿಗೆ ಸರಿಯಾಗಿ ಸಹಾಯಧನ ಸಿಗುವ ಮೂಲಕ ಮಧ್ಯವರ್ತಿಗಳಿಂದ ಬಿಡುಗಡೆಗೊಳ್ಳಬೇಕು. ಭಜನಾ ಅಕಾಡೆಮಿ ಸ್ಥಾಪಿಸುವ ಕುರಿತು ಸೂಕ್ತ ಬೇಡಿಕೆ ಬಂದರೆ ಅದಕ್ಕೆ ಮಾರ್ಗದರ್ಶನ ಮತ್ತು ಸಲಹೆ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಬಸವಲಿಂಗಯ್ಯ ಹಿರೇಮಠ ಅವರು ಜಾನಪದ ಖಣಜವಾಗಿದ್ದರು. ಅವರು ಕಟ್ಟಿಬೆಳೆಸಿದ ಜಾನಪದ ಸಂಶೋಧನಾ ಕೇಂದ್ರವನ್ನು ಮುನ್ನಡೆಸುವಲ್ಲಿ ಅವರ ಪತ್ನಿ ವಿಶ್ವೇಶ್ವರಿಗೆ ಇನ್ನೂ ಸಹಕಾರ ಸಿಗಬೇಕಿದೆ ಎಂದರು. ಇದೇ ಸಂಧರ್ಭದಲ್ಲಿ ಹಿರಿಯ ಭಜನಾ ಕಲಾವಿದರಾದ ಮಾರುತಿ ಮಂಡಾಣಿ ಹಾಗೂ ಎಕ್ಕೇರಪ್ಪ ನಡುವಿನಮನಿ ಅವರನ್ನು ಸನ್ಮಾನಿಸಲಾಯಿತು.
ಪ್ರವಾಸೋದ್ಯಮ ಬೆಳವಣಿಗೆಗೆ ಧಾರವಾಡ ಒಳ್ಳೆಯ ವಾತಾವರಣ ಹೊಂದಿದೆ: ತಹಶೀಲ್ದಾರ್ ಹಿರೇಮಠ
ಉಪ್ಪಿನ ಬೆಟಗೇರಿಯ ಮಲ್ಲಿಕಾರ್ಜುನ ಭಜನಾ ಸಂಘ, ಕಲ್ಲಾಪುರದ ಕಲ್ಮೇಶ್ವರ ಭಜನಾ ಸಂಘ ಹಾಗೂ ದೇವರ ಹುಬ್ಬಳ್ಳಿಯ ಬಸವೇಶ್ವರ ಭಜನಾ ತಂಡಗಳು ಭಜನಾ ಪದಗಳನ್ನು ಪ್ರಸ್ತುತ ಪಡಿಸಿದರು. ಜಾನಪದ ಸಂಶೋಧನಾ ಕೇಂದ್ರದ ಸಂಗೀತ ಬಳಗ ಕನಕದಾಸರ ಪದ ಹಾಡಿದರು. ಗುರು ಕಲ್ಮಠ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು, ಕಾರ್ಯದರ್ಶಿ ನಾಗಭೂಷಣ ಹಿರೇಮಠ ವಂದಿಸಿದರು. ಆಶಾ ಸಯ್ಯದ್ ನಿರೂಪಿಸಿದರು. ಡಾ. ಪ್ರಭಾ ನೀರಲಗಿ, ಮಲ್ಲಿಕಾರ್ಜುನ ಚಿಕ್ಕಮಠ, ಪ್ರಸನ್ನಕುಮಾರ, ಖೈರುನ್ನಿಸಾ, ಗಿರಿಜಾ ಶೆಕ್ಕಿ, ಶಿವಣ್ಣ ಬೆಲ್ಲದ, ಸುನಂದ ಹೊಸಮನಿ ಇದ್ದರು.