ಭಜನಾ ಮಂಡಳಿ ಸಮಾನತೆಯ ಪಾಠ ಮಾಡುವ ಪಾಠಶಾಲೆಯಾಗಬೇಕು: ಡಾ. ಹೆಗ್ಗಡೆ
ಭಜನಾ ಮಂಡಳಿ ಮತ್ತೊಂದು ದೇವಸ್ಥಾನವಾಗಬಾರದು| ಸಮಾನತೆಯ ಪಾಠ ಮಾಡುವ ಪಾಠಶಾಲೆಯಾಗಬೇಕು ಎಂದ ಡಾ.ಡಿ.ವೀರೇಂದ್ರ ಹೆಗ್ಗಡೆ| ಭಜನೆಯಿಂದ ಬೌದ್ಧಿಕ, ನೈತಿಕ, ಸಾಮಾಜಿಕ, ಆಧ್ಯಾತ್ಮಿಕ ಬದಲಾವಣೆಯಾಗಿದೆ: ಮಾತೃಶ್ರೀ ಹೇಮಾವತಿ ಹೆಗ್ಗಡೆ| ಭಜನಾ ತರಬೇತಿ ಶಿಬಿರ ಹಾಗೂ ಸಂಸ್ಕೃತಿ ಸಂವರ್ಧನ ಕಾರ್ಯಾಗಾರ|
ಬೆಳ್ತಂಗಡಿ:(ಸೆ20) ಭಜನಾ ಮಂಡಳಿ ಮತ್ತೊಂದು ದೇವಸ್ಥಾನವಾಗಬಾರದು. ಸಮಾನತೆಯ ಪಾಠ ಮಾಡುವ ಪಾಠಶಾಲೆಯಾಗಬೇಕು. ಭಜನೆಯಲ್ಲಿ ಆಧುನೀಕರಣವಾಗಬೇಕು. ಮಕ್ಕಳನ್ನು ಯುವಜನತೆಯನ್ನು ಆಕರ್ಷಿಸುವ ಕುಣಿತ ಭಜನೆ ಸಾಹಿತ್ಯ ಅಳವಡಿಸಿಕೊಳ್ಳಬೇಕು. ಹಾಡುರಾಗ ಸಾಹಿತ್ಯದಲ್ಲಿ ಹೊಸತನವಿರಬೇಕು. ಊರಿನ ದೇವಸ್ಥಾನಗಳ ಅಭಿವೃದ್ಧಿಗೆ ಭಜನಾ ಮಂಡಳಿಗಳು ಶ್ರಮಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಗುರುವಾರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಅಭಿವೃದ್ಧಿಗೆ, ಪರಿವರ್ತನೆಗೆ ಅನುದಾನ, ಸಹಕಾರದ ಮೂಲಕ ನಾನಾ ಕೊಡುಗೆಗಳನ್ನು ನೀಡಿದೆ. ಧರ್ಮೋತ್ಥಾನ ಟ್ರಸ್ಟ್ ಮೂಲಕ 200 ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರ ನಡೆದಿದೆ. ಪರಿಷತ್ ಮೂಲಕ ಗ್ರಾಮ ಸುಭೀಕ್ಷೆ, ಬೌದ್ಧಿಕ ಪರಿವರ್ತನೆಯಾಗಬೇಕು. ಭಜನಾ ಸಂಸ್ಕಾರ, ಧಾರ್ಮಿಕತೆಯನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ. ಪ್ರತಿ ವರ್ಷ ಭಜನಾ ಪರಿಷತ್ ವಾರ್ಷಿಕ ಸಭೆಯನ್ನು ಭಜನಾ ತರಬೇತಿ ಕಮ್ಮಟ ನಡೆಯುವ ಸಂದರ್ಭದಲ್ಲಿ ಸಂಘಟಿಸುವಂತೆ ಸೂಚಿಸಿದರು.
ಬಳಿಕ ಮಾತನಾಡಿದ ಮಾಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಸ್ವಾಮೀಜಿ, ಭಜನೆ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿದೆ. ಕ್ಷೇತ್ರದ ಭಜನಾ ಕಮ್ಮಟ ಮೂಲಕ ಭಜನಾ ಮಂಡಳಿಯಲ್ಲಿ, ಭಜನೆಯಲ್ಲಿ ಶಿಸ್ತು, ಏಕಾಗ್ರತೆ ಶಿಷ್ಟಾಚಾರ ಬಂದಿದೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೆ ವೇಳೆ ಮಾತನಾಡಿದ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರು, ಭಜನೆಯಿಂದ ಬೌದ್ಧಿಕ, ನೈತಿಕ, ಸಾಮಾಜಿಕ, ಆಧ್ಯಾತ್ಮಿಕ ಬದಲಾವಣೆಯಾಗಿದೆ. ಪರಿಷತ್ ಎಂಬ ರಥವನ್ನು ಎಳೆದುಕೊಂಡು ಹೋಗುವ ಜವಾಬ್ದಾರಿ ಪರಿಷತ್‌ನ ಪದಾಧಿಕಾರಿಗಳಿಗೆ ಇದೆ. ಸ್ವಾಸ್ಥ್ಯಸಮಾಜದ ನಿರ್ಮಾಣ ಕೆಲಸ ಪರಿಷತ್ ಮೂಲಕ ಆಗಬೇಕಾಗಿದೆ ಎಂದರು.
ಭಜನಾ ಪರಿಷತ್‌ನಲ್ಲಿ ದ.ಕ., ಉಡುಪಿ, ಕಾಸರಗೋಡು, ಶಿವಮೊಗ್ಗದ ತೀರ್ಥಹಳ್ಳಿ, ಚಿಕ್ಕಮಗಳೂರಿನ ಕೊಪ್ಪ ಶೃಂಗೇರಿ ತಾಲೂಕಿನ ಒಟ್ಟು 14 ಭಜನಾ ಪರಿಷತ್ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು. ಭಜನಾ ಪರಿಷತ್‌ನ ಅಧ್ಯಕ್ಷ ಬಾಲಕೃಷ್ಣ ಪಂಜ ಭಜನಾ ತರಬೇತಿ ಶಿಬಿರದ ಸದಸ್ಯರು ಉಪಸ್ಥಿತರಿದ್ದರು.