ಬೆಂಗ್ಳೂರಿನಂತೆ ಅಧ್ವಾನಗಳ ನಗರ ಆಗದಿರಲಿ ಬೆಳಗಾವಿ: ರವಿ ಹೆಗಡೆ

By Kannadaprabha News  |  First Published Sep 18, 2022, 8:36 AM IST

25 ವರ್ಷಗಳ ಹಿಂದೆ ಬೆಂಗಳೂರು ಸಹ ಈಗ ಬೆಳಗಾವಿ ಸ್ಥಿತಿಯಲ್ಲೇ ಇತ್ತು. ಆದರೆ, ಇಂದು ಅದು ಬೆಳೆಯುತ್ತಿರುವ ವೇಗವೇ ನಗರಕ್ಕೆ ಕ್ಯಾನ್ಸರ್‌ ಆಗಿ ಪರಿಣಮಿಸಿದೆ: ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆ ಪ್ರಧಾನ ಸಂಪಾದಕ ರವಿ ಹೆಗಡೆ 


ಬೆಳಗಾವಿ(ಸೆ.18):  ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಯಲ್ಲಿ ಬೆಂಗಳೂರಿನ ಸಮಸ್ಯೆಗಳು ಉದ್ಭವಿಸದಂತೆ ನೋಡಿಕೊಳ್ಳುವ ಮುಂದಾಲೋಚನೆ ಇರುವ ನಾಯಕರು ಮತ್ತು ಆ ಯೋಚನೆಗಳು ಇಲ್ಲಿನ ರಾಜಕಾರಣಿಗಳಿಗೆ ಇರಲಿ. ಇದಕ್ಕೆ ಕನ್ನಡಪ್ರಭ ಪತ್ರಿಕೆಯ ರಜತಮಹೋತ್ಸವ ಮುನ್ನುಡಿಯಾಗಲಿ ಎಂದು ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

ನಗರದ ಜೀರಿಗೆ ಸಭಾಭವನದಲ್ಲಿ ನಡೆದ ಕನ್ನಡಪ್ರಭ ಪತ್ರಿಕೆಯ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಾರಣ 25 ವರ್ಷಗಳ ಹಿಂದೆ ಬೆಂಗಳೂರು ಸಹ ಈಗ ಬೆಳಗಾವಿ ಸ್ಥಿತಿಯಲ್ಲೇ ಇತ್ತು. ಆದರೆ, ಇಂದು ಅದು ಬೆಳೆಯುತ್ತಿರುವ ವೇಗವೇ ನಗರಕ್ಕೆ ಕ್ಯಾನ್ಸರ್‌ ಆಗಿ ಪರಿಣಮಿಸಿದೆ. ನಗರ ಬೆಳೆದಂತೆ ಇಲ್ಲಿನ ರಸ್ತೆಗಳಲ್ಲಿ ಸಂಚಾರ ಸಮಸ್ಯೆ, ಗಾರ್ಬೇಜ್‌ ಸಮಸ್ಯೆ, ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನ ಜನ ಬಂದು ನೆಲೆಸಿದಾಗ ಇಲ್ಲಿನ ಸೌಹಾರ್ದ ವಾತಾವರಣ ಕದಡುವಂತಹ ಸಮಸ್ಯೆ ಎದುರಾಗುತ್ತದೆ. ಇದರೊಂದಿಗೆ ನಗರದಲ್ಲಿ ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಇದರೊಂದಿಗೆ ಕಾರ್ಪೋರೆಟರ್‌ ಮತ್ತು ಕ್ಯಾಂಟ್ರ್ಯಾಕ್ಟರ್‌ಗಳ ಸುಳಿಯಲ್ಲಿ ನಗರ ಸಿಲುಕಬಾರದು. ಅವರ ಸುಳಿಯಲ್ಲಿ ಸಿಲುಕಿದ ಬೆಂಗಳೂ ನಗರ ಈಗಾಗಲೇ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ.

Tap to resize

Latest Videos

ಅದ್ಧೂರಿಯಾಗಿ ನೆರವೇರಿದ 'ಕನ್ನಡಪ್ರಭ' ಬೆಳಗಾವಿ ಆವೃತ್ತಿ ಬೆಳ್ಳಿ ಹಬ್ಬ!

ನಗರದ ಅಭಿವೃದ್ಧಿ ಎಂದಾಕ್ಷಣ ನಾವು ಕಟ್ಟಡಗಳನ್ನು ಕಟ್ಟುವುದು, ವಿದ್ಯುತ್‌ ಹಾಗೂ ವೈಫೈ ಸೌಲಭ್ಯ ದೊರಕಿಸುವುದು ಅಲ್ಲ. ಜನರ ಭಾವನೆಗಳಿಗೆ ಸ್ಪಂದಿಸುವ ಕಾರ್ಯವಾಗಬೇಕಿದೆ. ಕಾರಣ, ಬೆಂಗಳೂರು ಜನರ ಕರಳು ಕತ್ತರಿಸುವ ನಗರಿಯಾಗಿದೆ ಎಂದು ಕೆಲವರ ಅಭಿಪ್ರಾಯವಾಗಿದೆ. ಅಲ್ಲಿನ ವಾಣಿಜ್ಯೀಕರಣ, ಜಾಗತೀಕರಣದಿಂದಾಗಿ ಜನರ ಜನರ ನಡುವಿನ ಸಂಬಂಧಗಳು ಕಟ್‌ ಆಗುತ್ತಿವೆ. ಆದರೆ, ಬೆಳಗಾವಿಯಲ್ಲಿ ಹಾಗಿಲ್ಲ. 25 ವರ್ಷಗಳ ಹಿಂದೆ ಕನ್ನಡ ಮತ್ತು ಮರಾಠಿಗರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಈಗಿಲ್ಲ. ಇಬ್ಬರ ನಡುವಿನ ಬಾಂದವ್ಯ ಇತ್ತೀಚೆಗೆ ಕಡಿಮೆಯಾಗಿದೆ. ಅದು ಇನ್ನಷ್ಟುಕಡಿಮೆ ಆಗಲಿ ಎಂಬುದು ಈ ಕಾರ್ಯಕ್ರಮದ ನಿರೀಕ್ಷೆ ಮತ್ತು ನನ್ನ ಹಾರೈಕೆಯಾಗಿದೆ. ಹೀಗಾಗಿಯೇ ನಾವು ಆರಂಭದಲ್ಲಿ ನಾವು ಸಹೋದರತ್ವಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂಬ ಘೋಷಾ ವಾಕ್ಯವನ್ನು ಇಟ್ಟುಕೊಂಡಿದ್ದೆವು. ಅದಕ್ಕೆ ಈಗಲೂ ನಾವು ಬದ್ಧರಾಗಿದ್ದೇವೆ ಎಂದರು.

ಕನ್ನಡಪ್ರಭ ಆರಂಭವಾದಾಗ ಇದ್ದವರು ಈಗ ಇಲ್ಲ:

ಕನ್ನಡಪ್ರಭ ಪತ್ರಿಕೆಯ ಬೆಳಗಾವಿ ಆವೃತ್ತಿ ಆರಂಭವಾದಾಗ ಮುಂಚೂಣಿಯಲ್ಲಿದ್ದ ರಾಜಕಾರಣಿಗಳು ಈಗ ಇಲ್ಲ. ಈಗ ಕಾರ್ಯಕ್ರಮಕ್ಕೆ ಆಗಮಿಸಿದ ರಾಜಕಾರಣಿಗಳು ಆಗ ಇರಲಿಲ್ಲ. ಡಿ.ಬಿ. ಇನಾಮ್‌ದಾರ್‌ ಮತ್ತು ಉಮೇಶ್‌ ಕತ್ತಿಯವರು ಪತ್ರಿಕೆ ಆರಂಭವಾದಾಗ ಪ್ರಮುಖ ರಾಜಕಾರಣಿಗಳು. ಆದರೆ ಈಗ ಲಕ್ಷ್ಮಿ ಹೆಬ್ಬಾಳಕರ್‌ ಮತ್ತು ಜಾರಕಿಹೊಳಿ ಕುಟುಂಬದವರು ಪ್ರಮುಖ ರಾಜಕಾರಣಿಗಳು ಎನಿಸಿದ್ದಾರೆ. ಇಲ್ಲಿನ ಮಲಪ್ರಭ ಮತ್ತು ಘಟಪ್ರಭ ನದಿಯಲ್ಲಿ ಎಷ್ಟುಕ್ಯೂಸೆಕ್‌ ನೀರು ಹರಿದಿ ಹೋಗಿದೆಯೋ ಗೊತ್ತಿಲ್ಲ. ಅಷ್ಟುಪ್ರಮಾಣದ ಇತಿಹಾಸ ಮತ್ತು ನೆನಪುಗಳು ನಮ್ಮೊಂದಿಗಿವೆ. ಅಂದು ಬಾಗಲಕೋಟೆ ಜಿಲ್ಲೆಯಾಗಿರಲಿಲ್ಲ. ಈ ರೀತಿಯ ಬದಲಾವಣೆಗೆ ಸಾಕ್ಷಿಯಾಗಿ, ಕನ್ನಡದ ಸಾಕ್ಷಿಪ್ರಜ್ಞೆಯಾಗಿದೆ ಕನ್ನಡಪ್ರಭ ಎಂದರು.

ಬೆಳಗಾವಿಯನ್ನು ಅಖಂಡವಾಗಿ ಉಳಿಸಿದ ಪತ್ರಿಕೆ:

ಅಂದು ಜಿ.ಎಚ್‌. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ, 7 ಹೊಸ ಜಿಲ್ಲೆಗಳನ್ನು ಘೋಷಿಸಲು ತೀರ್ಮಾನಿಸಿದ್ದರು. ಆ ಪಟ್ಟಿಯಲ್ಲಿ ಗೋಕಾಕ ಸಹ ಸೇರಿತ್ತು. ಆದರೆ, ಅಲ್ಲಿಯ ಜನರ ಮತ್ತು ನಾಯಕರ ಅಭಿಪ್ರಾಯ ಕೇಳಿ ಆ ತೀರ್ಮಾನ ಮಾಡುತ್ತೇನೆ ಎಂದು ಅವರು ತೀರ್ಮಾನಸಿದ್ದರು. ಆಗ ಕನ್ನಡಪ್ರಭದ ಟ್ರೈನಿ ವರದಿಗಾರನಾಗಿದ್ದ ನಾನು, ಗೋಕಾಕನ ಜನಪ್ರತಿನಿಧಿಗಳನ್ನು ಮಾತನಾಡಿಸಿ ಮುಖಪುಟದಲ್ಲಿ ಅರ್ಧ ಪುಟದಷ್ಟುವಿಶೇಷ ವರದಿ ಮಾಡಿದ್ದೆ. ಅದನ್ನು ಪರಿಗಣಿಸಿದ ಜಿ.ಎಚ್‌. ಪಟೇಲರು ಆ ಕುರಿತು ಸಭೆಯನ್ನು ಸಹ ಮಾಡದೆ ಹೊಸ ಜಿಲ್ಲೆಗಳ ಪಟ್ಟಿಯಿಂದ ಗೋಕಾಕನ್ನು ಕೈಬಿಟ್ಟಿದ್ದರು. ಕಾರಣ, ಚಿಕ್ಕೋಡಿ ಸಹ ಜಿಲ್ಲೆಯಾಗಬೇಕು ಎಂಬ ಪ್ರಸ್ತಾಪ ಇತ್ತು. ಆದರೆ, ಇವುಗಳನ್ನು ಇಬ್ಭಾಗ ಮಾಡಿದರೆ, ಬೆಳಗಾವಿಯಲ್ಲಿ ಕನ್ನಡಕ್ಕೆ ಹಿನ್ನೆಡೆಯಾಗುತ್ತಿದೆ ಎಂಬ ದೃಷ್ಟಿಯಿಂದ ಆ ಪ್ರಸ್ತಾಪ ಕೈಬಿಡಲಾಗಿತ್ತು. ಇದೇ ಕಾರಣಕ್ಕೆ ಇವತ್ತಿಗೂ ಜಿಲ್ಲೆ ವಿಭಜನೆ ನಿರ್ಧಾರವನ್ನು ಯಾರಿಂದಲೂ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಗಡಿನಾಡು ಅಭಿವೃದ್ಧಿಗಾಗಿಯೇ ಆವೃತ್ತಿ ಆರಂಭ:

ಪತ್ರಿಕೆ ಆವೃತ್ತಿ ಆರಂಭವಾದಾಗ ಬೆಳಗಾವಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಸಹ ಆಗಿರಲಿಲ್ಲ. ರಸ್ತೆ ಸೇರಿದಂತೆ ಇಲ್ಲಿನ ಮೂಲಭೂತ ಸೌಕರ್ಯಗಳು ಹೆಚ್ಚಿನಮಟ್ಟದಲ್ಲಿ ಅಭಿವೃದ್ಧಿ ಕಂಡಿರಲಿಲ್ಲ. ಹೀಗಾಗಿ ಇಲ್ಲಿ ಕಂದಾಯ ಹರಿದುಬರಲಿಕ್ಕಿಲ್ಲ, ಇಲ್ಲಿ ಆವೃತ್ತಿ ಆರಂಭ ಬೇಡ ಎಂಬ ಅಪಸ್ವರ ಕೇಳಿಬಂದಿದ್ದವು. ಆದರೆ, ಆಗ ಪತ್ರಿಕೆಯ ಸಂಪಾದಕರಾಗಿದ್ದ ವೈಎನ್‌ಕೆ ಅವರು ಕನ್ನಡಪ್ರಭ ಹಣ ಮಾಡಲಿಕ್ಕೆ ಇಲ್ಲ. ಎಲ್ಲಿ ಕನ್ನಡದ ಅಗತ್ಯವಿದೆಯೋ ಅಲ್ಲಿ ಪತ್ರಿಕೆ ಸ್ಥಾಪನೆ ಮಾಡಿ ಕನ್ನಡಿಗರ ಧ್ವನಿಯಾಗಬೇಕು ಎಂದು ಆವೃತ್ತಿ ಆರಂಭಿಸುವ ತೀರ್ಮಾನ ತಗೆದುಕೊಂಡಿದ್ದರು. ಆದರೆ, ಇಂದು ಬೆಳಗಾವಿ ಅಚ್ಚರಿಯಮಟ್ಟದಲ್ಲಿ ಬೆಳೆದು ನಿಂತಿದೆ ಎಂದು ಅಭಿಪ್ರಾಯಪಟ್ಟರು.

ಶೀಘ್ರದಲ್ಲೇ ಪಶುವೈದ್ಯಕೀಯ ವಿವಿಯ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ: ಸಚಿವ ಚವ್ಹಾಣ್‌

ನನ್ನ ವಿವಾಹಕ್ಕೂ 25 ವರ್ಷ:

ನಾನು ಇಲ್ಲಿನ ಕನ್ನಡಪ್ರಭ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ ನನ್ನ ಸಹೋದ್ಯೋಗಿಯನ್ನು ನಾನು ವಿವಾಹವಾಗಿದ್ದೇನೆ. ಹಾಗಾಗಿ ನನ್ನ ವಿವಾಹಕ್ಕೂ ಈಗ ರಜತಮಹೋತ್ಸವ ಎಂದು ಹೇಳುವ ಮೂಲಕ ಎಲ್ಲರೊಂದಿಗೆ ಸಂತಸ ಹಂಚಿಕೊಂಡರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಕನ್ನಡಪ್ರಭ ಪತ್ರಿಕೆಯ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ, ಕನ್ನಡಪ್ರಭ ಪತ್ರಿಕೆ ಗಡಿನಾಡು ಬೆಳಗಾವಿಯಲ್ಲಿ ಆರಂಭವಾಗ ತನ್ನ 25 ಸಾರ್ಥಕ ವಸಂತಗಳನ್ನು ಪೂರೈಸಿದೆ ಎಂದು ಹೇಳಿದರು.
 

click me!