Hubballi Floods : 6 ಸಾವಿರಕ್ಕೂ ಅಧಿಕ ವಿದ್ಯುತ್‌ ಕಂಬ ಧರೆಗೆ; ಹೆಸ್ಕಾಂಗೆ 12 ಕೋಟಿ ರೂ. ಹಾನಿ

By Kannadaprabha NewsFirst Published Sep 18, 2022, 7:32 AM IST
Highlights
  • ಅತಿವೃಷ್ಟಿ: ಹೆಸ್ಕಾಂಗೆ . 12 ಕೋಟಿ ಹಾನಿ
  • ಬರೋಬ್ಬರಿ 6 ಸಾವಿರಕ್ಕೂ ಅಧಿಕ ವಿದ್ಯುತ್‌ ಕಂಬ ಧರೆಗೆ
  • 145 ಕಿಮೀಗೂ ಅಧಿಕ ವಿದ್ಯುತ್‌ ತಂತಿಗೆ ಹಾನಿ
  • ಭರದಿಂದ ಸಾಗಿದೆ ದುರಸ್ತಿ ಕಾರ್ಯ, ಹೆಚ್ಚಳವಾಗಲಿದೆ ಹಾನಿಯ ಮೊತ್ತ

ಶಿವಾನಂದ ಗೊಂಬಿ

 ಹುಬ್ಬಳ್ಳಿ (ಸೆ.18) : ಅತಿವೃಷ್ಟಿಬರೀ ಜನರ ಬದುಕನಷ್ಟೇ ಹೈರಾಣು ಮಾಡಿಲ್ಲ. ಹೆಸ್ಕಾಂನ್ನು ನಲುಗುವಂತೆ ಮಾಡಿದೆ. ಜುಲೈಯಿಂದ ಸೆಪ್ಟೆಂಬರ್‌ 14ರ ವರೆಗೆ ಬರೋಬ್ಬರಿ . 12 ಕೋಟಿಗೂ ಅಧಿಕ ಹಾನಿಯಾಗಿದೆ. ಇದರಿಂದ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಸಾಕಷ್ಟುತೊಂದರೆಯಾಗಿತ್ತು. ಇದೀಗ ದುರಸ್ತಿ ಕಾರ್ಯ ಭರದಿಂದ ನಡೆದಿದೆ.

ಹುಬ್ಬಳ್ಳಿ-ಧಾರವಾಡ: ನಿರಂತರ ಮಳೆಗೆ ಮತ್ತೆ ಪ್ರವಾಹದ ಭೀತಿ..!

ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ಹೆಸ್ಕಾಂ ವ್ಯಾಪ್ತಿಗೆ ಬರುತ್ತವೆ. ಈ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ಈ ವರ್ಷ ಸುರಿದಿದೆ. ಇದರಿಂದಾಗಿ ಬಹುತೇಕ ಎಲ್ಲೆಡೆ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದಾಗಿ ಸಾವಿರಾರು ವಿದ್ಯುತ್‌ ಕಂಬ ನೆಲಕ್ಕುರುಳಿದರೆ, ವಿದ್ಯುತ್‌ ಪರಿವರ್ತಕ, ವಿದ್ಯುತ್‌ ತಂತಿ ತುಂಡರಿಸಿಕೊಂಡು ಹೋಗಿದ್ದವು. ಕೆಲ ಗ್ರಾಮಗಳಲ್ಲಂತೂ ಮೂರ್ನಾಲ್ಕು ದಿನಗಟ್ಟಲೇ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದುಂಟು.

ಎಲ್ಲಿ ಎಷ್ಟೆಷ್ಟುಹಾನಿ:

ಜು. 1ರಿಂದ ಸೆ. 14ರ ವರೆಗೆ ಬರೋಬ್ಬರಿ . 12.42 ಕೋಟಿ ವರೆಗೂ ಹೆಸ್ಕಾಂಗೆ ಹಾನಿಯಾಗಿದೆ. 6067 ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದರೆ, 600ಕ್ಕೂ ಅಧಿಕ ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದೆ. ಇನ್ನೂ 141.32 ಕಿಲೋಮೀಟರ್‌ ವರೆಗೂ ವಿದ್ಯುತ್‌ ತಂತಿ ತುಂಡರಿಸಿದೆ. ಇದರಲ್ಲಿ ಅತಿಹೆಚ್ಚು ಹಾನಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಇಲ್ಲಿ 3624ಕ್ಕೂ ಅಧಿಕ ವಿದ್ಯುತ್‌ ಕಂಬ, 378 ವಿದ್ಯುತ್‌ ಪರಿವರ್ತಕ, 114 ಕಿಮೀ ವಿದ್ಯುತ್‌ ತಂತಿ ಹಾಳಾಗಿದೆ. ಅತಿ ಕಡಿಮೆ ಹಾನಿಯಾಗಿದ್ದು ಧಾರವಾಡ ಜಿಲ್ಲೆಯಲ್ಲಿ. ಇಲ್ಲಿ 107 ವಿದ್ಯುತ್‌ ಕಂಬ, ಎರಡು ವಿದ್ಯುತ್‌ ಪರಿವರ್ತಕ ಹಾನಿಗೀಡಾಗಿದೆ ಎಂದು ಅಂದಾಜಿಸಲಾಗಿದೆ. ಇದು ಸೆಪ್ಟೆಂಬರ್‌ 14ರ ವರೆಗಿನ ಹಾನಿಯ ಅಂದಾಜು. ನಿಖರ ಹಾನಿಯ ಕುರಿತು ಇನ್ನು ಸಮೀಕ್ಷೆ ನಡೆಯುತ್ತಿದೆ. ಹಾನಿಯ ಪ್ರಮಾಣ ಇನ್ನಷ್ಟುಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಹೆಸ್ಕಾಂ ಮೂಲಗಳು ತಿಳಿಸುತ್ತವೆ.

ಭರದಿಂದ ದುರಸ್ತಿ ಕಾರ್ಯ:

6067 ವಿದ್ಯುತ್‌ ಕಂಬದ ಪೈಕಿ 4967 ಕಂಬ ಬದಲಾಯಿಸಿದರೆ, 600ಕ್ಕೂ ಹೆಚ್ಚು ಪರಿವರ್ತಕ ಪೈಕಿ 450ಕ್ಕೂ ಅಧಿಕ ಪರಿವರ್ತಕ ಬದಲಾಯಿಸಲಾಗಿದೆ. 114 ಕಿಮೀ ವಿದ್ಯುತ್‌ ಲೈನ್‌ ಸರಿಪಡಿಸಲಾಗಿದೆ. ಇನ್ನು ದುರಸ್ತಿ ಕಾರ್ಯ ನಡೆಸಲಾಗಿದೆ. ಮಳೆ ಇನ್ನೂ ಕಡಿಮೆಯಾಗದ ಹಿನ್ನೆಲೆಯಲ್ಲಿ ಮಳೆ ಬಿದ್ದ ಕಡೆಗೆ ಮತ್ತೆ ಮತ್ತೆ ವಿದ್ಯುತ್‌ ಕಂಬಗಳು ಧರೆಗುರುಳುತ್ತಲೇ ಇರುತ್ತವೆ. ದುರಸ್ತಿ ಕಾರ್ಯ ಕೂಡ ಹಾಗೆ ಮುಂದುವರಿದಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸುತ್ತಾರೆ. ಒಟ್ಟಿನಲ್ಲಿ ಅತಿವೃಷ್ಟಿಯಿಂದ ಹೆಸ್ಕಾಂ ವ್ಯಾಪ್ತಿಯಲ್ಲೂ ಸಾಕಷ್ಟುಹಾನಿಯಾಗಿದ್ದು, ದುರಸ್ತಿ ಕಾರ್ಯವನ್ನು ಇಲಾಖೆ ಸಿಬ್ಬಂದಿ ಭರದಿಂದ ನಡೆಸಿದೆ.Karnataka Rains: ನೀರಲ್ಲಿ ನಿಂತ ಬೆಳೆ ಕೊಯ್ಲಿಗೆ ಹರಸಾಹಸ..!

ಹಾನಿಯ ಪ್ರಮಾಣ:

  • ವಿದ್ಯುತ್‌ ಕಂಬ 6067 ಧರೆಗೆ
  • ವಿದ್ಯುತ್‌ ಪರಿವರ್ತಕ 600 ಹಾನಿ
  • ವಿದ್ಯುತ್‌ ತಂತಿ 141.32 ಕಿಮೀ
  • ಒಟ್ಟು ಹಾನಿ . 12.42 ಕೋಟಿ
click me!