ವಿಜಯಪುರ: ಕೊನೆಗೂ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ

By Kannadaprabha News  |  First Published Jun 6, 2020, 10:14 AM IST

ಏಳೆಂಟು ಎಮ್ಮೆ, ಮೇಕೆಗಳ ಮೇಲೆ ದಾಳಿಯಿಟ್ಟಿದ್ದ ಚಿರತೆ| ಗ್ರಾಮಸ್ಥರ ನಿದ್ರೆಗೆಡಿಸಿದ್ದ ಚಿರತೆ| ತಂಕದಿಂದ ಹೊರ ಬಂದ ಗ್ರಾಮಸ್ಥರು| ಸೆರೆ ಸಿಕ್ಕ ಚಿರತೆಯನ್ನು ಮರಳಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ|


ವಿಜಯಪುರ(ಜೂ.06): ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರು ಗ್ರಾಮದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಜನತೆಯ ನೆಮ್ಮದಿ ಕೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ದೇವರ ಗೆಣ್ಣೂರ ಗ್ರಾಮದ ಕಬ್ಬಿನ ಪೊದೆಯಲ್ಲಿ ಅವಿತುಕೊಂಡಿದ್ದ ಚಿರತೆ ಶುಕ್ರವಾರ ಬೆಳಗ್ಗೆ ಬೋನಿನಲ್ಲಿ ಸಿಕ್ಕುಬಿದ್ದಿದೆ.

ಹೌದು, ಕೆಲ ದಿನಗಳಿಂದ ದೇವರ ಗೆಣ್ಣೂರ ಗ್ರಾಮದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಬ್ಬಿನ ಪೊದೆಯಲ್ಲಿ ಅವಿತುಕೊಂಡಿದ್ದ ಚಿರತೆ ಯಾರೂ ಇಲ್ಲದ ಸಮಯ ಸಾಧಿಸಿ ಏಳೆಂಟು ಎಮ್ಮೆ, ಮೇಕೆಗಳ ಮೇಲೆ ದಾಳಿ ಮಾಡಿತ್ತು. ಇದರಿಂದಾಗಿ ದೇವರ ಗೆಣ್ಣೂರು ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಜನರು ಗಾಬರಿಯಾಗಿದ್ದರು. ಯಾವ ಸಮಯದಲ್ಲಿ ಚಿರತೆ ಯಾರ ಮೇಲೆ ದಾಳಿ ಇಡುತ್ತದೆಯೋ ಎಂಬ ಆತಂಕದಲ್ಲಿ ಗ್ರಾಮಸ್ಥರು ಕಾಲ ಕಳೆಯುತ್ತಿದ್ದರು. ಆತಂಕಗೊಂಡಿದ್ದ ಗ್ರಾಮಸ್ಥರು ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದರು.

Latest Videos

undefined

ವಿವಾಹಿತನ ಕಾಮದಾಟದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ 13ರ ಬಾಲೆ

ಮಾಜಿ ಸಚಿವ, ಶಾಸಕ ಎಂ.ಬಿ. ಪಾಟೀಲ ಹಾಗೂ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಅವರು ತಕ್ಷಣ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು.

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ತಕ್ಷಣ ಎಚ್ಚತ್ತುಕೊಂಡು ಚಿರತೆ ಹಿಡಿಯಲು ಕಾರ್ಯಾಚರಣೆಗೆ ಮುಂದಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಅಲ್ಲಲ್ಲಿ ಬೋನು, ಕ್ಯಾಮೆರಾ ಟ್ರ್ಯಾಪರ್‌ ಅಳವಡಿಸಿತ್ತು. ಕೊನೆಗೆ ಶುಕ್ರವಾರ ಬೆಳಗ್ಗೆ ದೇವರ ಗೆಣ್ಣೂರ ಬಳಿ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದಿದೆ. ಇದರಿಂದಾಗಿ ದೇವರ ಗೆಣ್ಣೂರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ನಿರಾಳರಾಗಿದ್ದಾರೆ.

ಬೀಳಗಿ ತಾಲೂಕಿನ ವನ್ಯಜೀವಿ ಪ್ರದೇಶದಿಂದ ಸಂಚರಿಸುತ್ತ ಕೃಷ್ಣಾ ನದಿ ದಾಟಿ ಈ ಭಾಗಕ್ಕೆ ಚಿರತೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯಾಧಿಕಾರಿ ಸರೀನಾ ಸಿಕ್ಕಲಗಾರ ನೇತೃತ್ವದ ತಂಡ ಚಿರತೆಯನ್ನು ಸೆರೆ ಹಿಡಿಯಲು ಬಲೆ ಬೀಸಿ ಯಶಸ್ವಿಯಾಗಿದೆ. ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡು ಪ್ರದೇಶಕ್ಕೆ ಬಿಟ್ಟಿದ್ದಾರೆ.
 

click me!