ಬೆಳಗಾವಿ: 'ಕೊರೋನಾ ಕಾಟದ ಮಧ್ಯೆಯೇ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ಧರಾಗಿ'

By Kannadaprabha NewsFirst Published Jun 6, 2020, 9:51 AM IST
Highlights

ಕೊರೋನಾ, ನೆರೆ ಹಾವಳಿ ನಿರ್ವಹಣಾ ಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಸೂಚನೆ| ಕಳೆದ ಬಾರಿಯ ಪ್ರವಾಹ ಸ್ಥಿತಿಗತಿಯನ್ನು ಅಧ್ಯಯನ ನಡೆಸಿ ಈ ಬಾರಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ: ಡಿಸಿ ಬೊಮ್ಮನಹಳ್ಳಿ|

ಬೆಳಗಾವಿ(ಜೂ.06): ಕೋವಿಡ್‌-19 ನಿಯಂತ್ರಣದ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿರುವ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್‌-19 ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅತ್ಯುತ್ತಮ ಕೆಲಸ ಮಾಡಿದೆ. ಜನಪ್ರತಿನಿಧಿಗಳು ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಸಹಕರಿಸಬೇಕು. ನೆರೆಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಉನ್ನತಮಟ್ಟದ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗುವುದು. ನೆರೆಹಾವಳಿ ಸವಾಲು ಎದುರಿಸಲು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

Latest Videos

ರಾಜ್ಯಸಭೆ ಟಿಕೆಟ್‌ ಪಕ್ಷದ ತೀರ್ಮಾನವೇ ಅಂತಿಮ: ಜಾರಕಿಹೊಳಿ

ದೆಹಲಿಯಿಂದ ತಬ್ಲೀಘಿಗಳು, ಅಜ್ಮೇರ್‌ನಿಂದ ಜನರು ಹಿಂದಿರುಗಿದ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಮಹಾರಾಷ್ಟ್ರದಿಂದ ಅತೀ ಹೆಚ್ಚು ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಬಳ್ಳಾರಿ ನಾಲಾ ಸ್ವಚ್ಛತೆಗೆ ಸೂಚನೆ:

ಬಳ್ಳಾರಿ ನಾಲಾ ಕಳೆದ ಬಾರಿ ದೊಡ್ಡ ಅನಾಹುತ ಆಗಿದೆ. ಆದ್ದರಿಂದ ಬೃಹತ್‌ ಹಿಟಾಚಿ ಬಳಸಿಕೊಂಡು ನಾಲಾ ಸ್ವಚ್ಛತೆ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ನಾಲಾ ಅತಿಕ್ರಮಣ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ವೆ ಕಾರ್ಯ ಮುಂದುವರಿಸಲು ತಿಳಿಸಿದರು. ಮುಂದಿನ ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕೋವಿಡ್‌-19 ಸೋಂಕಿತ ಮಕ್ಕಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೇ ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಕೊರೋನಾ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ತೊಂದರೆಗೆ ಸಿಲುಕಿರುವ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಹೆಚ್ಚಿನ ಪ್ರಮಾಣದ ತಪಾಸಣೆ ನಡೆಸಿ:

ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಮಳೆಗಾಲ ಆರಂಭಗೊಂಡಿರುವುದರಿಂದ ರೈತರು ಹಾಗೂ ವರ್ತಕರ ಹಿತದೃಷ್ಟಿಯಿಂದ ಎಪಿಎಂಸಿ ವಹಿವಾಟು ಒಂದೇ ಕಡೆ ಆರಂಭಿಸಬೇಕು ಎಂದು ಮನವಿ ಮಾಡಿದರು. ಕ್ವಾರಂಟೈನ್‌ ಇರುವವರನ್ನು ವರದಿ ಬರುವ ಮುಂಚೆಯೇ ಮನೆಗೆ ಕಳಿಸಿದ್ದರಿಂದ ಕೆಲವು ಭಾಗಗಳಲ್ಲಿ ಸೋಂಕು ಹರಡಿದೆ. ಇದೀಗ ತಪಾಸಣೆ ಕಡಿಮೆಗೊಳಿಸಿದರೆ ಸೋಂಕು ಮತ್ತಷ್ಟುಹರಡುವ ಸಾಧ್ಯತೆಯಿದೆ. ಆದ್ದರಿಂದ ತಪಾಸಣೆ ಪ್ರಮಾಣ ಇನ್ನಷ್ಟುಹೆಚ್ವಿಸುವ ಅಗತ್ಯವಿದೆ ಎಂದರು.

ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ಮಹಾರಾಷ್ಟ್ರದ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುವುದರಿಂದ ದೇವಸ್ಥಾನವನ್ನು ಸದ್ಯಕ್ಕೆ ಆರಂಭಿಸಬಾರದು ಎಂದು ಮನವಿ ಮಾಡಿದರು.

ನೇಕಾರರಿಂದ ಸೀರೆ ಖರೀದಿಸಲು ಸಲಹೆ:

ಶಾಸಕ ಅಭಯ್‌ ಪಾಟೀಲ ಮಾತನಾಡಿ, ನೇಕಾರರಿಗೆ ಕಿಚ್‌ ಹಂಚಿಕೆಯ ಬಗ್ಗೆ ಉಂಟಾಗಿರುವ ಗೊಂದಲ ಸರಿಪಡಿಸುವಂತೆ ಕೋರಿದರು. ವಿದ್ಯುತ್‌ ಮಗ್ಗಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ಕೊರೋನಾ ವಾರಿಯರ್ಸ್‌ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್‌ ಸಿಬ್ಬಂದಿ ಮತ್ತಿತರರಿಗೆ ಹಂಚಿಕೆ ಮಾಡಲು ನೇಕಾರರಿಂದ ಸರ್ಕಾರವೇ ನೇರವಾಗಿ ಸೀರೆಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು.

ತೆರವಿಗೆ ಒತ್ತಾಯ:

ನಗರದಲ್ಲಿ ನಾಲಾಗಳ ಅತಿಕ್ರಮಣ ತೆರವುಗೊಳಿಸಿದರೆ ಮಾತ್ರ ಮಳೆಗಾಲದಲ್ಲಿ ಅನಾಹುತ ತಪ್ಪಿಸಬಹುದು. ಆದ್ದರಿಂದ ನಿರ್ದಾಕ್ಷಿಣ್ಯವಾಗಿ ನಾಲಾ ಅತಿಕ್ರಮಣ ತೆರವುಗೊಳಿಸಬೇಕು ಎಂದು ಶಾಸಕ ಪಾಟೀಲ ಆಗ್ರಹಿಸಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ಕಳೆದ ವರ್ಷ ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವವರಿಗೆ ಕೆಲವರಿಗೆ ತಾಂತ್ರಿಕ ಕಾರಣಕ್ಕೆ ಪರಿಹಾರದ ಮೊತ್ತ ತಲುಪಿಲ್ಲ. ಈ ಬಗ್ಗೆ ಮರು ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರ ನೀಡಬೇಕು ಎಂದು ಹೇಳಿದರು. ಶಾಸಕ ಗಣೇಶ ಹುಕ್ಕೇರಿ, ಶಾಸಕ ಅನಿಲ… ಬೆನಕೆ ಮಾತನಾಡಿದರು.

11411 ಕೊರೋನಾ ವರದಿ ಬಾಕಿ

ಕೊರೋನಾಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 97 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 11411 ಮಾದರಿಗಳ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 48 ಕಂಟೈನ್ಮೆಂಚ್‌ ಝೋನ್‌ ಘೋಷಣೆ ಮಾಡಲಾಗಿದ್ದು, 9 ಡಿನೋಟಿಫೈ ಮಾಡಲಾಗಿದೆ. ಸದ್ಯಕ್ಕೆ ಇನ್ನೂ 39 ಕಂಟೈನ್ಮೆಂಟ್‌ ಝೋನ್‌ಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.

ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಜನರ ಮನೆಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರಗಳಿಂದ ಬೆಳಗಾವಿ ಜಿಲ್ಲೆಯ ಮೂಲಕ 45 ಸಾವಿರ ಜನರು 7 ಸಾವಿರ ವಾಹನಗಳು ಪ್ರಯಾಣ ಕೈಗೊಂಡಿದ್ದಾರೆ. ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಇನ್ನು ಮುಂದೆ 7 ದಿನ ಸಾಂಸ್ಥಿಕ ಕ್ವಾರಂಟೈನ ಹಾಗೂ ಮುಂದಿನ ಹದಿನಾಲ್ಕು ದಿನ ಹೋಂ ಕ್ವಾರಂಟೈನ್‌ ಮಾಡಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಜನಸಂದಣಿ ನಿರ್ವಹಣೆ ಸವಾಲು ಆಗಿತ್ತು. ಆದ್ದರಿಂದ ನಗರದ ಮೂರು ದಿಕ್ಕುಗಳಲ್ಲಿ ಪ್ರತ್ಯೇಕ ತಾತ್ಕಾಲಿಕ ಮಾರುಕಟ್ಟೆವ್ಯವಸ್ಥೆ ಮಾಡಲಾಗಿದೆ. ಇದೀಗ ಒಂದೇ ಕಡೆ ವಹಿವಾಟು ನಡೆಸಲು ವರ್ತಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಮುಂಬರುವ ದಿನಗಳಲ್ಲಿ ದೇವಸ್ಥಾನ ಆರಂಭಗೊಳ್ಳಲಿರುವುದರಿಂದ ಹೊಸ ಸವಾಲು ಎದುರಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸ್ಯಾನಿಟೈಜೇಷನ್‌ ಮಾಡಲಾಗುವುದು. ಮಾಸ್ಕ್‌, ಸ್ಯಾನಿಟೈಸರ್‌ ಕೂಡ ಒದಗಿಸಲಾಗುವುದು ಎಂದು ಡಾ.ಬೊಮ್ಮನಹಳ್ಳಿ ವಿವರಿಸಿದರು.

ಪ್ರವಾಹ ಮುನ್ನೆಚ್ಚರಿಕೆಗೆ ಸೂಚನೆ

ಕಳೆದ ಬಾರಿಯ ಪ್ರವಾಹ ಸ್ಥಿತಿಗತಿಯನ್ನು ಅಧ್ಯಯನ ನಡೆಸಿ ಈ ಬಾರಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮುಂಗಾರು ಶೇ.256 ಹೆಚ್ಚಾಗಿದ್ದು, ಬೀಜ-ಗೊಬ್ಬರ ವಿತರಣೆಗೆ ಕ್ರಮ ವಹಿಸಲಾಗಿದೆ. ಪ್ರವಾಹ ನಿರ್ವಹಣೆಗೆ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್‌ ಸಭೆ ನಡೆಸಲು ಡಿಸಿ ಬೊಮ್ಮನಹಳ್ಳಿ ಸೂಚಿಸಿದರು.

ಡಿಎಚ್‌ಒ ಡಾ.ಎಸ್‌. ವಿ.ಮುನ್ಯಾಳ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶ ಕುಮಾರ, ಸಿಇಓ ಡಾ.ರಾಜೇಂದ್ರ ಕೆ.ವಿ., ಕೋವಿಡ್‌-19 ವಿಶೇಷ ನಿಯಂತ್ರಣಾಧಿಕಾರಿ ರಾಜೇಂದ್ರ ಚೋಳನ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬಿಡುಗಡೆಗೊಳಿಸಿದರು.
 

click me!