
ಕೆಆರ್ ಪೇಟೆ: ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಮನೆಯಂಗಳದಲ್ಲಿ ಕಟ್ಟಿದ ಹಸುವೊಂದನ್ನು ಚಿರತೆಯೊಂದು ಎಳೆದೊಯ್ದಿದೆ.
ಹಸುವಿನ ಕಳೇಬರ ಸಮೀಪದ ಜಮೀನಿನಲ್ಲಿ ಪತ್ತೆಯಾಗಿದ್ದು, ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗೊರವಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹರಿಗೌಡರ ಮಗ ಬಲರಾಮೇಗೌಡರಿಗೆಗೆ ಸೇರಿದ ಹಸುವಿದೆ.
ತೋಟದ ಮನೆಯಲ್ಲಿ ಬಲರಾಮೇಗೌಡರ ಕುಟುಂಬ ವಾಸಿಸುತ್ತಿದ್ದು, ರಾತ್ರಿ ಹಸುವನ್ನು ಮನೆಯ ಹೊರ ಭಾಗದಲ್ಲಿಕಟ್ಟಿ ಹಾಕಿದ್ದರು. ರಾತ್ರಿ 12ರ ಸಮಯದಲ್ಲಿ ಹಸುವಿನ ಆಕ್ರಂದನ ಕೇಳಿದ್ದರೂ, ಭಯಗೊಂಡ ಕುಟುಂಬ ಮನೆಯಿಂದ ಹೊರಬಂದು ನೋಡುವ ಧೈರ್ಯ ಮಾಡಲಿಲ್ಲ. ಬೆಳಗ್ಗೆ ಎದ್ದು ನೋಡಿದರೆ, ಹಸುವನ್ನು ಚಿರತೆ ತಿಂದುಹಾಕಿತ್ತು.
ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಮನವಿ ಮಾಡಿದ್ದಾರೆ.